ಸೋಮವಾರಪೇಟೆ, ಜೂ. 8: ಅಂತಹದ್ದೊಂದು ಗ್ರಾಮ ಇದೆ ಎಂಬದೇ ಬಹುತೇಕ ಜನಪ್ರತಿನಿಧಿ ಗಳಿಗೆ ತಿಳಿದಿರಲೇ ಇಲ್ಲ. ಕುಮಾರಧಾರ ನದಿ ಉಕ್ಕಿ ಹರಿದರೆ ನಾಲ್ಕು ತಿಂಗಳು ಹೊರ ಜಗತ್ತಿನ ಸಂಪರ್ಕ ಕಳೆದುಕೊಳ್ಳುವ ಈ ಗ್ರಾಮದಲ್ಲೂ ಜನರಿದ್ದಾರೆ ಎಂದು ಯಾರೂ ಗುರುತಿಸುತ್ತಿರಲಿಲ್ಲ. ಅಂತಹ ನಾಡ್ನಳ್ಳಿ ಈಗ ಹೊರ ಜಗತ್ತಿನ ಸಂಪರ್ಕಕ್ಕೆ ಬಂದಿದೆ. ಗ್ರಾಮಕ್ಕೆ ಸಂಪರ್ಕ ಸೇತುವಾದ ಜಿ.ಪಂ. ಮಾಜಿ ಅಧ್ಯಕ್ಷ ರವಿಕುಶಾಲಪ್ಪ ಅವರನ್ನು ಗ್ರಾಮಸ್ಥರು ವಿಶೇಷವಾಗಿ ಸನ್ಮಾನಿಸಿ, ಕೃತಜ್ಞತೆ ಸಲ್ಲಿಸಿದ್ದಾರೆ.

ಹೊರ ಜಗತ್ತಿನಿಂದ ಬೇರ್ಪಡುವ ನಾಡ್ನಳ್ಳಿ ಗ್ರಾಮದಲ್ಲಿ ಬೆರಳೆಣಿಕೆಯಷ್ಟು ಮಾತ್ರ ಕುಟುಂಬಗಳಿದ್ದು, ಇದರಿಂದಾಗಿಯೇ ಎಲ್ಲಾ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿತ್ತು. ಮಳೆಗಾಲದಲ್ಲಿ ಉಕ್ಕಿ ಹರಿಯುವ ಕುಮಾರಧಾರ ನದಿಗೆ ಬಿದಿರಿನ ಬೊಂಬುಗಳನ್ನು ಕಟ್ಟಿ ಅದರ ಮೇಲೆ ಜೀವನದ ಸರ್ಕಸ್ ಮಾಡುವ ಮನಕಲಕುವ ದೃಶ್ಯಗಳನ್ನು ಚಿತ್ರ ಸಹಿತ ಪತ್ರಿಕೆಗಳು ವರದಿ ಮಾಡಿದ್ದರಿಂದ ಇತ್ತ ಕಣ್‍ಹಾಯಿಸಿದ ಅಂದಿನ ಜಿ.ಪಂ. ಸದಸ್ಯ ಶಾಂತೆಯಂಡ ರವಿ ಕುಶಾಲಪ್ಪ ತಕ್ಷಣ ಗ್ರಾಮಕ್ಕೆ ಆಗಮಿಸಿ ಸೇತುವೆ ನಿರ್ಮಾಣದ ಭರವಸೆ ನೀಡಿದ್ದರು.

ಭರವಸೆ ಕೇವಲ ಭರವಸೆ ಯಾಗಿಯೇ ಉಳಿಯದೇ ಕಾರ್ಯ ರೂಪಕ್ಕೆ ಬಂದ ಪರಿಣಾಮ ಜಿ.ಪಂ. ಅಧ್ಯಕ್ಷರ ವಿಶೇಷ ಅನುದಾನದಡಿ ಸುಮಾರು 20ಲಕ್ಷ ವೆಚ್ಚದಲ್ಲಿ ಸೇತುವೆ ನಿರ್ಮಾಣಗೊಂಡಿತು. ಈ ಹಿನ್ನೆಲೆ ಗ್ರಾಮಸ್ಥರೇ ಇವರನ್ನು ಗ್ರಾಮಕ್ಕೆ ಕರೆದು ವಿಶೇಷ ರೀತಿಯಲ್ಲಿ ಸನ್ಮಾನಿಸಿ ಕೃತಜ್ಞತೆ ಸಲ್ಲಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ರವಿ ಕುಶಾಲಪ್ಪ ಅವರು, ಎಲ್ಲಾ ಮೂಲಭೂತ ಸೌಲಭ್ಯದಿಂದ ವಂಚಿತರಾಗಿದ್ದರೂ, ಕಂಗೆಟ್ಟು ಗುಳೇ ಹೋಗದೆ ತಮ್ಮ ಆತ್ಮವಿಶ್ವಾಸದಿಂದ ನೆಲೆನಿಂತ ನಾಡ್ನಳ್ಳಿ ಜನತೆ ಜಿಲ್ಲೆಗೇ ಮಾದರಿಯಾಗಿದ್ದಾರೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.

ತಾನು ಜಿಲ್ಲಾ ಪಂಚಾಯಿತಿಯ 20 ತಿಂಗಳ ಅವಧಿಗೆ ಅಧ್ಯಕ್ಷನಾಗಿದ್ದ ಸಂದರ್ಭ ಜಿ.ಪಂ. ಸದಸ್ಯರುಗಳಾಗಿದ್ದ ಶರೀನ್ ಸುಬ್ಬಯ್ಯ ಹಾಗೂ ಸ್ಥಳೀಯ ಸದಸ್ಯ ಎಚ್.ಎಸ್. ವೆಂಕಪ್ಪ ಪೂಜಾರಿ ಅವರ ಸಹಕಾರದಿಂದ ಇಲ್ಲಿನ ಕಿರುಸೇತುವೆ ನಿರ್ಮಾಣಕ್ಕೆ ಅನುದಾನ ಒದಗಿಸಲು ಸಾಧ್ಯವಾಯಿತು ಎಂದರು.

ಬಿಜೆಪಿ ತಾಲೂಕು ಸಮಿತಿಯ ಪದಾಧಿಕಾರಿ ಶಾಂತಳ್ಳಿ ಮಧು ಮಾತನಾಡಿ, ನಾಡ್ನಳ್ಳಿ ಗ್ರಾಮವನ್ನು ಸಂಪರ್ಕಿಸುವ ಕಿರು ಸೇತುವೆ ನಿರ್ಮಾಣದಿಂದಾಗಿ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಮುಂದೆ ರಸ್ತೆ, ದೂರವಾಣಿ ಸಂಪರ್ಕ ಕಲ್ಪಿಸಿದ್ದಲ್ಲಿ ಜನತೆ ಮತ್ತಷ್ಟು ತೃಪ್ತರಾಗಲಿದ್ದಾರೆ ಎಂದರು.

ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಪ್ರದೀಪ್ ಮಾತನಾಡಿ, ನಾಡ್ನಳ್ಳಿ ಗ್ರಾಮ ಸಂಪರ್ಕಿಸಲು ಸೇತುವೆ ನಿರ್ಮಾಣದಿಂದಾಗಿ ಕೃಷಿಯನ್ನು ಕೈಬಿಟ್ಟು ಬೇರೆಡೆಗೆ ಹೋಗಿದ್ದ ಯುವ ಜನಾಂಗ ಮತ್ತೆ ಗ್ರಾಮದತ್ತ ಬರಲು ಒಲವು ತೋರಿದ್ದಾರೆ ಎಂದರು.

ಅಧ್ಯಕ್ಷತೆಯನ್ನು ಗ್ರಾಮದ ಹಿರಿಯರಾದ ಕುಟ್ಟಪ್ಪ ವಹಿಸಿದ್ದರು. ವೇದಿಕೆಯಲ್ಲಿ ಮಕ್ಕಂದೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಮಧು, ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ದೇಶ್‍ರಾಜ್, ನಾಡ್ನಳ್ಳಿ ಉಪೇಂದ್ರ ಉಪಸ್ಥಿತರಿದ್ದರು.

- ವಿಜಯ್ ಹಾನಗಲ್