ಮಡಿಕೇರಿ, ಜೂ. 8: ಅಂಚೆ ಇಲಾಖೆಯಲ್ಲಿ ನೌಕರಿ ಮಾಡಿಕೊಂಡಿದ್ದ ಗುಮಾಸ್ತನೊಬ್ಬ ಹಣ ಗುಳುಂ ಮಾಡಿ ಅಮಾನತ್ತಿಗೊಳಗಾಗಿರುವ ಬಗ್ಗೆ ‘ಶಕ್ತಿ’ಗೆ ಖಚಿತ ಮೂಲಗಳಿಂದ ತಿಳಿದು ಬಂದಿದೆ.

ಅಂಚೆ ಇಲಾಖೆಯ ಗೋಣಿಕೊಪ್ಪಲು ಶಾಖೆಯಲ್ಲಿ ಗುಮಾಸ್ತ ಹುದ್ದೆ ನಿರ್ವಹಿಸುತ್ತಿದ್ದ ವಿ.ಜಿ. ರಘುನಾಥ್ ಎಂಬವರೇ ಅಮಾನತ್ತಿಗೊಳಗಾದ ವ್ಯಕ್ತಿ. ಈ ವ್ಯಕ್ತಿ ನಕಲಿ ಬಿಲ್‍ಗಳನ್ನು ಸೃಷ್ಟಿ ಮಾಡಿದ್ದ ಬಗ್ಗೆ ಅಂಚೆ ಇಲಾಖೆಯ ಉನ್ನತಾಧಿಕಾರಿಗೆ ಮಾಹಿತಿ ಸಿಕ್ಕಿ ಆತನ ವೇತನ ಏರಿಕೆಗೆ ಕತ್ತರಿ ಹಾಕಿದ್ದರಂತೆ. ಅಷ್ಟೆ ಅಲ್ಲದೇ ತನಿಖೆ ಕೈಗೊಂಡಿದ್ದಾರೆ. ಈ ಸಂದರ್ಭ ಕೆಲವಾರು ಪ್ರಕರಣಗಳು ಬಯಲಿಗೆ ಬಂದಿದೆ. ಸಿಓಡಿ ಪಾರ್ಸೆಲ್ ಹಣವನ್ನು ಪಾವತಿಸದೆ ತನ್ನ ಬಳಿಯೇ ಇಟ್ಟುಕೊಳ್ಳುವದು. ಅಂಚೆ ಮೂಲಕ ಪಿಂಚಣಿ ಪಡೆಯುವವರಿಗೆ ನಿಗದಿತ ಸಮಯಕ್ಕೆ ಪಿಂಚಣಿ ನೀಡದಿರುವದು, ಪಿಂಚಣಿಯನ್ನು ತಡವಾಗಿ ನೀಡಿ, ನಿಗದಿತ ಸಮಯಕ್ಕೆ ಸರಿಯಾಗಿ ನೀಡಿರುವದಾಗಿ ಇಲಾಖೆಯ ದಾಖಲೆಯಲ್ಲಿ ನೋಂದಾಯಿಸಿ ಕರ್ತವ್ಯ ಲೋಪವೆಸಗುತ್ತಿದ್ದುದು ಪತ್ತೆಯಾದ ಹಿನ್ನೆಲೆಯಲ್ಲಿ ಉನ್ನತಾಧಿಕಾರಿ ರಘುನಾಥ್ ಅವರನ್ನು ಅಮಾನತ್ತಿನಲ್ಲಿಟ್ಟು ದುರುಪಯೋಗ ಪಡಿಸಿಕೊಂಡಿದ್ದ ಸುಮಾರು ರೂ. 26,000 ಹಣವನ್ನು ಕಟ್ಟಿಸಿಕೊಂಡಿದ್ದಾರೆ. ಆರಂಭದಲ್ಲೇ ರಘುನಾಥ್ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಅವರನ್ನು ಗೋಣಿಕೊಪ್ಪಲಿನಿಂದ ಸಿದ್ದಾಪುರಕ್ಕೆ ವರ್ಗಾವಣೆ ಮಾಡಲಾಗಿತ್ತು.

ತನಿಖೆಯಲ್ಲಿ ತಪ್ಪೆಸಗಿರುವದು ದೃಢಪಟ್ಟ ಬಳಿಕ ಜೂನ್ 1 ರಿಂದಲೇ ಕರ್ತವ್ಯದಿಂದ ಅಮಾನತು ಮಾಡಲಾಗಿದೆ. ಅಮಾನತು ಮಾಡಿರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಹಲವು ಕಡೆಗಳಿಂದ ಒತ್ತಡಗಳನ್ನು ಹೇರಲಾಗುತ್ತಿದೆ ಎಂಬ ಬಗ್ಗೆಯೂ ಮಾಹಿತಿ ಲಭಿಸಿದೆ.