ಮಡಿಕೇರಿ, ಜೂ. 8: ರಾಜ್ಯ ಸರಕಾರ ಅಲ್ಪಸಂಖ್ಯಾತರ ಅಭಿವೃದ್ಧಿ ಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಅಲ್ಪಸಂಖ್ಯಾತರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಕೆ.ಎ. ಯಾಕೂಬ್ ಕರೆ ನೀಡಿದ್ದಾರೆ.

ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಯಾಕೂಬ್, 2011 ರ ಜನಗಣತಿ ಪ್ರಕಾರ ಕೊಡಗು ಜಿಲ್ಲೆಯಲ್ಲಿ 1.04 ಲಕ್ಷ ಮಂದಿ ಅಲ್ಪಸಂಖ್ಯಾತರಿದ್ದು, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಮೂಲಕ ಸ್ವಾವಲಂಬನೆ, ಮಾರ್ಜಿನ್ ಹಣ ಸಾಲ ಮತ್ತು ಸಹಾಯಧನ ಯೋಜನೆ, ಅರಿವು, ವಿದ್ಯಾಭ್ಯಾಸ ಸಾಲ ಯೋಜನೆ, ಶ್ರಮಶಕ್ತಿ ಯೋಜನೆ, ಸಣ್ಣ ಸಾಲ ಮತ್ತು ಗಂಗಾ ಕಲ್ಯಾಣ ಯೋಜನೆ, ಕೃಷಿ ಭೂಮಿ ಖರೀದಿ ಯೋಜನೆ, ಕ್ರ್ರಿಶ್ಚಿಯನ್ ಸಮುದಾಯದವರಿಗಾಗಿ ಗೃಹ ನಿರ್ಮಾಣ ಸಾಲದ ಮೇಲಿನ ಬಡ್ಡಿಗಾಗಿ ರೂ. 1 ಲಕ್ಷದವರೆಗೆ ಸಹಾಯಧನ ಯೋಜನೆ, ರಾಷ್ಟ್ರೀಯ ಅಲ್ಪಸಂಖ್ಯಾತರ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ಯೋಜನೆಗಳು ಜಾರಿಯಲ್ಲಿವೆ ಎಂದು ವಿವರಿಸಿದರು.

ಗೃಹ ನಿರ್ಮಾಣದ ಸಾಲ ರೂ. 21 ಲಕ್ಷ, ವಿದ್ಯಾಭ್ಯಾಸದ ಸಾಲಕ್ಕಾಗಿ ರೂ. 1.09 ಕೋಟಿ, ಸ್ವಯಂ ಉದ್ಯೋಗದ ಯೋಜನೆಯಡಿ ರೂ. 10.85 ಲಕ್ಷ ಹಾಗೂ ರೂ. 20 ಲಕ್ಷ, ಶ್ರಮಶಕ್ತಿ ಸಾಲ ಯೋಜನೆಯಡಿ ರೂ. 41.50 ಲಕ್ಷ, ಮೈಕ್ರೋ ಸಾಲ ಯೋಜನೆಯಡಿ ರೂ. 24.90 ಲಕ್ಷ, ಗಂಗಾ ಕಲ್ಯಾಣ ಯೋಜನೆಯಡಿ ರೂ. 51 ಲಕ್ಷ ಸೇರಿದಂತೆ ಜಿಲ್ಲೆಗೆ ಒಟ್ಟು ರೂ. 2.78 ಕೋಟಿಗಳನ್ನು ಸರಕಾರ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ನೀಡಿದೆ ಎಂದು ಅಂಕಿ ಅಂಶ ನೀಡಿದರು.

ಅಲ್ಲದೆ ಹೈನುಗಾರಿಕೆ ತಲಾ ರೂ. 40 ಸಾವಿರದಂತೆ (20 ಸಾವಿರ ರೂ. ಸಹಾಯಧನ) 26 ಮಂದಿಗೆ ರೂ. 10.38 ಲಕ್ಷ, ಟ್ಯಾಕ್ಸಿಗಳ ಖರೀದಿಗಾಗಿ 5 ಮಂದಿಯ ಗುರಿಯನ್ನು ನೀಡಲಾಗಿದ್ದು, ಪ್ರತಿಯೊಬ್ಬರಿಗೆ ರೂ. 3 ಲಕ್ಷ ಉಚಿತ ಸಹಾಯಧನ, ರೂ. 15 ಲಕ್ಷ, ಕೊಲ್ಲಿ ರಾಷ್ಟ್ರಗಳಲ್ಲಿ ಕೆಲಸ ಮಾಡಿ ಹಿಂತಿರುಗಿರುವ ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗ ಹೊಂದಲು ಕೇರಳ ಮಾದರಿಯ ಯೋಜನೆಯೊಂದನ್ನು ಜಾರಿಗೆ ತರಲಾಗಿದ್ದು, ಒಬ್ಬ ಫಲಾನುಭವಿಗೆ ಶೇ. 5 ರ ಬಡ್ಡಿ ದರದಲ್ಲಿ ರೂ. 10 ಲಕ್ಷವನ್ನು ನೀಡಲಾಗುತ್ತಿದೆ. ಭೂಮಿ ಇಲ್ಲದ ಫಲಾನುಭವಿಗೆ ಎಕರೆಗೆ ರೂ. 10 ಲಕ್ಷದಂತೆ ಜಾಗ ಖರೀದಿಗೆ ನೀಡಲಾಗುತ್ತಿದೆ ಎಂದರು.

ಗೋಷ್ಠಿಯಲ್ಲಿ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಇ. ಮ್ಯಾಥ್ಯೂ, ಪೊನ್ನಂಪೇಟೆ ಬ್ಲಾಕ್ ಅಧ್ಯಕ್ಷ ಅಬ್ದುಲ್ ರೆಹಮಾನ್, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷೆ ಸುರಯ್ಯಾ ಅಬ್ರಾರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಲತೀಫ್ ಹಾಜರಿದ್ದರು.