ಸೋಮವಾರಪೇಟೆ, ಜೂ. 8: ಇಲ್ಲಿನ ಕರ್ಕಳ್ಳಿ ರಸ್ತೆಯಲ್ಲಿರುವ ಬಸವೇಶ್ವರ ಕಲ್ಯಾಣ ಮಂಟಪವನ್ನು ಸಮಾಜದ ಅಧೀನದಲ್ಲಿಯೇ ಉಳಿಸಿ ಕೊಳ್ಳಲು ರಾಜ್ಯ ಹೈಕೋರ್ಟ್‍ನಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ಹೂಡಲಾಗಿದೆ ಎಂದು ತಾಲೂಕು ವೀರಶೈವ ಮಹಾ ಸಭಾದ ಅಧ್ಯಕ್ಷ ಸಿ.ವಿ. ವಿಶ್ವನಾಥ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ಕರ್ಕಳ್ಳಿ ರಸ್ತೆಯಲ್ಲಿರುವ ಸೋಮವಾರಪೇಟೆ ವೀರಶೈವ ಸಮಾಜದ ಕಟ್ಟೆ ಬಸವೇಶ್ವರ ದೇವಾಲಯಕ್ಕೆ ಸೇರಿದ ಜಾಗವನ್ನು ತಾಲೂಕು ವೀರಶೈವ ಸಮಾಜಕ್ಕೆ ಈ ಹಿಂದೆ ದಾನವಾಗಿ ನೀಡಲಾಗಿತ್ತು ಎಂದು ತಿಳಿಸಿದರು.

ಜಾಗವನ್ನು ದಾನದ ರೂಪದಲ್ಲಿ ಪಡೆದ ತಾಲೂಕು ವೀರಶೈವ ಸಮಾಜದ ಕೆಲ ಪದಾಧಿಕಾರಿಗಳು ಈ ಜಾಗಕ್ಕೆ ಬ್ಯಾಂಕ್‍ನಲ್ಲಿ ರೂ. 9 ಲಕ್ಷ ಸಾಲ ಮಾಡಿ ಕಲ್ಯಾಣ ಮಂಟಪ ನಿರ್ಮಿಸಿದರು. ನಂತರದ ದಿನಗಳಲ್ಲಿ ಬ್ಯಾಂಕ್‍ನ ಸಾಲವನ್ನು ಮರುಪಾವತಿ ಮಾಡದೇ ಜವಾಬ್ದಾರಿಯಿಂದ ನುಣುಚಿಕೊಂಡಿದ್ದರಿಂದ ಜಾಗದ ಹರಾಜು ನಡೆದಿದ್ದು, ಇದೀಗ ವೀರಶೈವ ಸಮುದಾಯಕ್ಕೆ ಸೇರಿದ ಜಾಗವನ್ನು ಬೇರೆಯವರು ಪಡೆದುಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.

ಸಮುದಾಯದ ಜಾಗವನ್ನು ವೀರಶೈವ ಸಮಾಜದಲ್ಲಿಯೇ ಉಳಿಸಿಕೊಳ್ಳಬೇಕೆಂಬ ದೃಷ್ಟಿಯಿಂದ ವೀರಶೈವ ಸಮಾಜದ ಪ್ರಮುಖರಾದ ವಿಶ್ವನಾಥ್, ಕಾಂತರಾಜ್, ನಂಜಪ್ಪ, ಮಹೇಶ್, ಧರ್ಮಪ್ಪ, ಪ್ರವೀಣ್, ಸೋಮಶೇಖರ್ ಮತ್ತು ಶಶಿಧರ್ ಅವರುಗಳು ಸೇರಿ ರಾಜ್ಯ ಹೈಕೋರ್ಟ್‍ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಕೀಲ ಅಮೃತೇಶ್ ಅವರ ಮೂಲಕ ದಾಖಲಿಸಲಾಗಿದೆ ಎಂದು ತಿಳಿಸಿದರು.

ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡಿರುವ ನ್ಯಾಯಾಲಯ ಪ್ರಾಥಮಿಕ ಹಂತವಾಗಿ ರೂ. 25 ಲಕ್ಷ ಹಣವನ್ನು ನ್ಯಾಯಾಲಯಕ್ಕೆ ಠೇವಣಿ ಇಡುವಂತೆ ಸೂಚಿಸಿದೆ.

ಈ ಹಿನ್ನೆಲೆ ಸಮುದಾಯ ಬಾಂಧವರು ಕಲ್ಯಾಣ ಮಂಟಪ ಉಳಿಸಿಕೊಳ್ಳಲು ಸಹಕಾರ ನೀಡಬೇಕಿದೆ ಎಂದು ವಿಶ್ವನಾಥ್ ಮನವಿ ಮಾಡಿದರು.

ಗೋಷ್ಠಿಯಲ್ಲಿ ಡಿ.ಬಿ. ಸೋಮಪ್ಪ, ಕೆ.ಎನ್. ತೇಜಸ್ವಿ, ಕೆ.ಎನ್. ಶಿವಕುಮಾರ್ ಅವರುಗಳು ಉಪಸ್ಥಿತರಿದ್ದರು.