ಸೋಮವಾರಪೇಟೆ, ಜೂ. 8: ತಾಲೂಕಿನ ಶನಿವಾರಸಂತೆ ವ್ಯಾಪ್ತಿಯ ಬೆಳ್ಳಾರಳ್ಳಿ ಪ್ರದೇಶದಲ್ಲಿ ಪ್ರಸಕ್ತ ವರ್ಷವೂ ಆಫ್ರಿಕನ್ ದೈತ್ಯ ಶಂಕು ಹುಳುವಿನ ಬಾಧೆ ಕಂಡುಬಂದಿದ್ದು, ಕಾಫಿ ಬೆಳೆಗಾರರನ್ನು ಕಂಗೆಡಿಸುತ್ತಿದೆ.

ಕಳೆದ 2-3 ವರ್ಷಗಳಿಂದ ಆಫ್ರಿಕನ್ ದೈತ್ಯ ಶಂಕು ಹುಳುಗಳು ಶನಿವಾರಸಂತೆಯ ಬೆಳ್ಳಾರಳ್ಳಿಯ ಸಮೀಪದ ಕೆಲವು ಕಾಫಿ ತೋಟಗಳಲ್ಲಿ ನಿರಂತರವಾಗಿ ಕಂಡು ಬರುತ್ತಿದೆ. ಈ ವರ್ಷವೂ ಕೂಡ ಇದರ ಬಾಧೆ ಪ್ರಾರಂಭವಾಗಿದ್ದು, ಕಾಫಿ ಕಾಂಡಗಳ ಸಿಪ್ಪೆ ಹಾಗೂ ಎಲೆಯನ್ನು ತಿನ್ನುವ ಮೂಲಕ ಗಿಡಗಳ ಬೆಳವಣಿಗೆಗೆ ಮಾರಕವಾಗಿ ಪರಿಣಮಿಸಿದೆ.

ಮಳೆಗಾಲದಲ್ಲಿ ಅತೀ ಹೆಚ್ಚು ಕಾಣಸಿಗುವ ಈ ಹುಳು ರಾತ್ರಿ ವೇಳೆಯಲ್ಲಿ ಹೆಚ್ಚು ಚುರುಕಾಗಿರುತ್ತದೆ ಮತ್ತು ಹಗಲಿನ ವೇಳೆ ಮರಗಳ ಮೇಲೆ, ಬಿದ್ದಿರುವ ರೆಂಬೆ ಕೊಂಬೆಗಳ ಮೇಲೆ, ಕಸದ ರಾಶಿಯಲ್ಲಿ ಅಡಗಿಕೊಂಡಿರುತ್ತದೆ ಎಂದು ಕಾಫಿ ಮಂಡಳಿಯ ಹಿರಿಯ ಸಂಪರ್ಕಾಧಿಕಾರಿ ಮುರಳೀಧರ್ ತಿಳಿಸಿದ್ದಾರೆ.

ಮಳೆಗಾಲದ ಪ್ರಾರಂಭದಲ್ಲಿ ಇದರ ಕಾರ್ಯ ಚಟುವಟಿಕೆ ಆರಂಭಗೊಳ್ಳುತ್ತದೆ. ಇದು ಪಪ್ಪಾಯ, ರಬ್ಬರ್, ಕೊಕೊ, ಬಾಳೆ, ಅಡಿಕೆ ಸೇರಿದಂತೆ 500 ಕ್ಕೂ ಹೆಚ್ಚು ಸಸ್ಯಗಳಿಗೆ ಹಾನಿ ಮಾಡುತ್ತದೆ. ಇದರ ಜೀವಿತಾವಧಿ 3-5 ವರ್ಷಗಳಾಗಿದ್ದು, ಕೆಲವು ಹುಳುಗಳು 9 ವರ್ಷಗಳವರೆಗೂ ಜೀವಿಸುತ್ತವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇವುಗಳು ಸಾಮಾನ್ಯವಾಗಿ ಅತ್ಯಧಿಕ ಸಂಖ್ಯೆಯಲ್ಲಿ ಹಾನಿ ಮಾಡುವದರಿಂದ, ಈ ಹುಳುಗಳು ಕಂಡ ಕೂಡಲೆ ಹತೋಟಿ ಕ್ರಮಗಳನ್ನು ಕೈಗೊಳ್ಳಬೇಕು. ಆರಂಭದಲ್ಲೇ ಈ ಹುಳುಗಳನ್ನು ಸಂಗ್ರಹಿಸಿ ನಾಶಪಡಿಸುವದು ಹಾಗೂ ಹುಳುವಿನ ಅಡಗು ತಾಣಗಳನ್ನು ನಾಶಪಡಿಸುವದು. ಹುಳುಗಳನ್ನು ಆಕರ್ಷಿಸಲು ಪಪ್ಪಾಯ ಗಿಡದ ಕಾಂಡಗಳು, ತೇವವಾದ ಗೋಣಿ ಚೀಲಗಳು ಹಾಗು ಪಪ್ಪಾಯ ಎಲೆಗಳನ್ನು ಬಳಸಿ ಹುಳುಗಳನ್ನು ಸಂಗ್ರಹಿಸಬೇಕೆಂದು ಕಾಫಿ ಮಂಡಳಿಯ ಅಧಿಕಾರಿಗಳು ಬೆಳೆಗಾರರಿಗೆ ಮಾಹಿತಿ ಒದಗಿಸಿದ್ದಾರೆ.

ಶಂಕುಹುಳು ಪೀಡಿತ ಪ್ರದೇಶಗಳಲ್ಲಿ ಚಿಪ್ಪಿನ ಸುಣ್ಣವನ್ನು ಹರಡಬೇಕು. 50 ಲೀ. ನೀರಿನಲ್ಲಿ 2 ಕೆ.ಜಿ. ಮೈಲುತುತ್ತು ಮತ್ತು 2 ಕೆ.ಜಿ. ತಂಬಾಕಿನ ಸಾರವನ್ನು ಮಿಶ್ರ ಮಾಡಿ ಹುಳುಗಳ ಮೇಲೆ ಸಿಂಪಡಿಸಬೇಕು. ಅಥವಾ 5% ಮೆಟಾಲ್ಡಿಹೈಡ್ ಗುಳಿಗೆಗಳನ್ನು ಎಕರೆಗೆ 10 ಕೆ.ಜಿ. ಗಿಡಗಳ ಸುತ್ತ ಹರಡಬೇಕು. ಸಂಗ್ರಹಿಸಿದ ಹುಳುಗಳನ್ನು 7 ಅಡಿ ಆಳ, 4 ಅಡಿ ಅಗಲ ಮತ್ತು 4 ಅಡಿ ಉದ್ದದ ಗುಂಡಿಗಳಲ್ಲಿ ತುಂಬಿಸಿ, ಪ್ರತಿ ಒಂದು ಅಡಿ ಪದರದ ಮೇಲೆ ಚಿಪ್ಪಿನ ಸುಣ್ಣ ಹಾಗು ಉಪ್ಪು ಹರಡಬೇಕು. ಆರು ಅಡಿ ನಂತರ ಮತ್ತೆ ಚಿಪ್ಪಿನ ಸುಣ್ಣ ಹಾಗು ಬ್ಲೀಚಿಂಗ್ ಪೌಡರ್ ಹರಡಿ ಗುಂಡಿಯನ್ನು ಮಣ್ಣಿನಿಂದ ಮುಚ್ಚಬೇಕು ಎಂದು ನಿಯಂತ್ರಣ ಕ್ರಮಗಳ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹುಳುಗಳೊಂದಿಗೆ ನೇರ ಸಂಪರ್ಕ ಹೊಂದದೆ, ಹುಳುಗಳನ್ನು ಸಂಗ್ರಹಿಸುವಾಗ ಕೈಗಳಿಗೆ ಕವಚಗಳನ್ನು ಧರಿಸಬೇಕು. ಇನ್ನೂ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಸಮೀಪದ ಕಾಫಿ ಮಂಡಳಿಯ ಸಂಪರ್ಕಾಧಿಕಾರಿಗಳನ್ನು ಸಂಪರ್ಕಿಸಬೇಕೆಂದು ಹಿರಿಯ ಸಂಪರ್ಕಾಧಿಕಾರಿ ಮುರಳೀಧರ್ ಅವರು ಪತ್ರಿಕೆಯ ಮೂಲಕ ಮನವಿ ಮಾಡಿದ್ದಾರೆ.