ಮಡಿಕೇರಿ, ಜೂ. 8: ಭಾರತೀಯ ಕಾಫಿ ಮಂಡಳಿಯ ಉಪಾಧ್ಯಕ್ಷರಾಗಿ ಬಿಜೆಪಿಯ ಮಹಿಳಾ ಮೋರ್ಚಾ ಮಾಜಿ ಅಧ್ಯಕ್ಷೆ ಹಾಗೂ ವೀರಾಜಪೇಟೆಯ ವಕೀಲೆ ರೀನಾ ಪ್ರಕಾಶ್ ಆಯ್ಕೆಗೊಂಡಿದ್ದಾರೆ. ಕಾಫಿ ಮಂಡಳಿ ಅಧ್ಯಕ್ಷ ಎಂ.ಎಸ್. ಬೋಜೇಗೌಡ ಅವರ ಅಧ್ಯಕ್ಷತೆಯಲ್ಲಿ ಮಂಡಳಿಯ ನೂತನ ಆಡಳಿತ ಸಮಿತಿ ಸಭೆಯಲ್ಲಿ ಇಂದು ರೀನಾ ಪ್ರಕಾಶ್ ಆಯ್ಕೆಯಾಗಿದ್ದಾರೆ.ಕಾಫಿ ಮಂಡಳಿಯ 14 ಸದಸ್ಯರಲ್ಲಿ ಕೊಡಗಿನವರು ಐವರು ಈಚೆಗೆ ನಾಮಕರಣಗೊಂಡಿದ್ದರು. ಈ ಪೈಕಿ ರೀನಾ ಏಕೈಕ ಮಹಿಳಾ ಸದಸ್ಯೆಯಾಗಿದ್ದು, ಈಗ ಉಪಾಧ್ಯಕ್ಷೆ, ಉಳಿದಂತೆ ಹಾಸನ, ಚಿಕ್ಕಮಗಳೂರು, ತಮಿಳುನಾಡು, ಕೇರಳ, ಆಂಧ್ರ ಪ್ರತಿನಿಧಿಗಳನ್ನು ಒಳಗೊಂಡಂತೆ ಸಭೆ ಇಂದು ನಡೆಯಿತು.ಈ ಸಭೆಯಲ್ಲಿ ಕಾಫಿ ಮಂಡಳಿಗೆ ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘವು ಪಾವತಿಸಬೇಕಿರುವ ರೂ. 5.65 ಕೋಟಿ ಬಡ್ಡಿ ಹಣವನ್ನು ಮನ್ನಾ ಮಾಡುವಂತೆ, ಇಂದಿನ ಸಭೆಯಲ್ಲಿ ಸದಸ್ಯ ಜಿ.ಎಲ್. ನಾಗರಾಜ್ ಒತ್ತಾಯಿಸಿದ್ದಾರೆ.

ಈ ವೇಳೆ ಜಿಲ್ಲೆಯ ಸದಸ್ಯರ ಒಕ್ಕೊರಲಿನ ಬೇಡಿಕೆಯಂತೆ, ಈ ಪ್ರಸ್ತಾವನೆಯನ್ನು ಕೇಂದ್ರ

(ಮೊದಲ ಪುಟದಿಂದ) ಸರಕಾರದ ಮುಂದಿಡುವದಾಗಿ ಅಧ್ಯಕ್ಷ ಬೋಜೇಗೌಡ ಭರವಸೆ ನೀಡಿದ್ದಾರೆ.

ಸಭೆಯಲ್ಲಿ ಕಾಫಿ ಬೆಳೆಗಾರರಿಗೆ ಮಂಡಳಿಯಿಂದ ಲಭ್ಯವಿರುವ ಸೌಲಭ್ಯಗಳನ್ನು ಕಲ್ಪಿಸುವದು, ಬೆಳೆಗಾರರ ಮಕ್ಕಳಿಗೆ ಶೈಕ್ಷಣಿಕ ಸಹಾಯಧನ ಸೇರಿದಂತೆ ಸಣ್ಣ ಕೃಷಿಕರಿಗೂ ಕಾಫಿ ತೋಟಗಳಲ್ಲಿ ಇಂಗು ಗುಂಡಿ ಸಹಿತ ಇತರ ಪ್ರಯೋಜನಕಾರಿ ಯೋಜನೆಗಳನ್ನು ಕಲ್ಪಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು ಎಂದು ನೂತನ ಉಪಾಧ್ಯಕ್ಷೆ ರೀನಾ ಪ್ರಕಾಶ್ ‘ಶಕ್ತಿ’ಗೆ ತಿಳಿಸಿದ್ದಾರೆ.