ಮಡಿಕೇರಿ, ಜೂ. 8: ಕೃಷಿ ಕಾಯಕದಿಂದ ರೈತರಿಗೆ ತೊಂದರೆಯಾಗದಂತೆ, ರಾಜ್ಯ ಸರಕಾರ ಕೃಷಿ ಇಲಾಖೆಯಿಂದ ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಕೃಷಿ ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ. ಮೇಲ್ಮನೆ ಸದಸ್ಯ ಸುನಿಲ್ ಸುಬ್ರಮಣಿ ಅವರ ಪ್ರಶ್ನೆಗೆ ಸಚಿವರು ಈ ಕೆಳಗಿನಂತೆ ಲಿಖಿತ ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿ ಕೃಷಿ ಇಲಾಖೆಯ ಕೆಲಸಗಳೇನು? ರೈತರು ಫಸಲು ನಷ್ಟ ಅನುಭವಿಸದಂತೆ ಕೈಗೊಂಡಿರುವ ಕ್ರಮದ ಕುರಿತು ಎಂ.ಪಿ. ಸುನಿಲ್ ಸುಬ್ರಮಣಿ ಅವರ ಪ್ರಶ್ನೆಗೆ ಸಚಿವರು ಪ್ರತಿಕ್ರಿಯೆ ನೀಡಿದ್ದಾರೆ.

ಬೇಡಿಕೆಗೆ ಅನುಗುಣವಾಗಿ ಬೀಜ, ರಸಗೊಬ್ಬರ, ಪೀಡೆನಾಶಕ, ಕೃಷಿ ಯಂತ್ರೋಪಕರಣಗಳು ಹಾಗೂ ವಿಸ್ತರಣಾ ಸೇವೆಗಳನ್ನು ಸಮಯೋಚಿತವಾಗಿ ರೈತರಿಗೆ ಒದಗಿಸುವದು. ಮಳೆ ಆಶ್ರಿತ ಕೃಷಿ ರೈತರನ್ನು ಕೇಂದ್ರೀಕರಿಸಿ ಮಳೆ ನೀರು ಸಂಗ್ರಹಣೆ ಮತ್ತು ಪುನರ್ ಬಳಕೆಗೆ ಆದ್ಯತೆ ನೀಡಲು ಕೃಷಿ ಭಾಗ್ಯ ಯೋಜನೆಯನ್ನು ಜಾರಿಗೊಳಿಸಿದೆ ಮತ್ತು ನೀರಿನ ಸಂರಕ್ಷಣೆ ಹಾಗೂ ಸಂರಕ್ಷಿತ ನೀರಾವರಿ ಪ್ರದೇಶದ ವಿಸ್ತೀರ್ಣವನ್ನು ಹೆಚ್ಚಿಸುವ ಸಲುವಾಗಿ ಸೂಕ್ಷ್ಮ ನೀರಾವರಿ ಯೋಜನೆಯನ್ನು ಉತ್ತೇಜಿಸಿದೆ. ಗ್ರಾಮೀಣ ಪ್ರದೇಶದ ರೈತರಿಗೆ ಸಕಾಲದಲ್ಲಿ ಪಾರದರ್ಶಕ ವಾಗಿ ಮತ್ತು ಕಡಿಮೆ ಬಾಡಿಗೆ ದರದಲ್ಲಿ ಭೂಮಿ ಸಿದ್ಧತೆ, ಬಿತ್ತನೆ, ನಾಟಿ ಮಾಡುವ ಉಪಕರಣಗಳು. ಕೊಯ್ಲು ಮತ್ತು ಸಂಸ್ಕರಣೆಗೆ ಉಪಯುಕ್ತ ವಾಗಿರುವ ವಿವಿಧ ಕೃಷಿ ಯಂತ್ರೋ ಪಕರಣಗಳನ್ನು ಕೃಷಿ ಯಂತ್ರಧಾರೆ ಯೋಜನೆಯಡಿ ಒದಗಿಸಲಾಗುತ್ತಿದೆ.

ಸಾವಯವ ಕೃಷಿಗೆ ಉತ್ತೇಜನ ನೀಡುವದು ಹಾಗೂ ಉತ್ಪನ್ನಗಳ ಮಾರಾಟಕ್ಕೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿದೆ. ಕೃಷಿ ಪರಿಕರಗಳ ಮಾರಾಟ ಮತ್ತು ಗುಣಮಟ್ಟ ಕಾಪಾಡುವ ಸಲುವಾಗಿ ವಿವಿಧ ಕಾಯ್ದೆಗಳನ್ನು ಜಾರಿಗೊಳಿಸಿದೆ. ರಾಷ್ಟ್ರೀಯ ಕೃಷಿ ವಿಮಾ ಯೋಜನೆಯಡಿ ರೈತರಿಗೆ ಬೆಳೆ ನಷ್ಟ ಪರಿಹಾರ ಒದಗಿಸಲಾಗುತ್ತಿದೆ.

ಕೇಂದ್ರಕ್ಕೆ ಶಿಫಾರಸು

ಪ್ರಮುಖ ಕೃಷಿ ಬೆಳೆಗಳಲ್ಲಿ ರೈತರಿಗೆ ಲಾಭದಾಯಕವಾಗುವಂತಹ ಕನಿಷ್ಟ ಬೆಂಬಲ ಬೆಲೆಯನ್ನು ನಿರ್ಧರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಉತ್ತಮ ತಂತ್ರಜ್ಞಾನ ಪ್ರಚಾರದ ಮೂಲಕ ಸೂಕ್ತ ಸಸ್ಯ ಸಂರಕ್ಷಣಾ ಕ್ರಮಗಳ ಅಳವಡಿಕೆಯನ್ನು ಪ್ರೋತ್ಸಾಹಿಸಲಾಗುತ್ತಿದೆ. ಗುಣಮಟ್ಟದ ಬೀಜೋತ್ಪಾದನೆ ಹಾಗೂ ವಿತರಣೆಗಾಗಿ ಕಾರ್ಯ ಚಟುವಟಿಕೆ ಗಳನ್ನು ರೂಪಿಸಲಾಗಿದೆ. ಕೃಷಿ ಕಾರ್ಮಿಕರ ಕೊರತೆಯನ್ನು ನೀಗಿಸಲು ಹಾಗೂ ಕೃಷಿ ಕಾರ್ಮಿಕರ ಮೇಲಿನ ಒತ್ತಡವನ್ನು ಕಡಿಮೆಗೊಳಿಸಲು ಕೃಷಿ ಯಾಂತ್ರೀಕರಣವನ್ನು ಉತ್ತೇಜಿಸ ಲಾಗಿದೆ.

ಕೃಷಿ ವಾರ್ತಾ ಸೇವೆಗಳು, ರೈತರ ತರಬೇತಿಗಳು, ವಿವಿಧ ಬೆಳೆ ಪ್ರಾತ್ಯಕ್ಷಿಕೆಗಳ ಮೂಲಕ ತಂತ್ರಜ್ಞಾನವನ್ನು ರೈತರಿಗೆ ತಲಪಿಸಲಾಗುತ್ತಿದೆ. ಪ್ರಕೃತಿ ವಿಕೋಪಗಳು, ಕೀಟಗಳು ಮತ್ತು ರೋಗಗಳಿಂದಾಗಿ ಅತಿವೃಷ್ಟಿ, ಅನಾವೃಷ್ಟಿ ಮತ್ತು ತಾಪಮಾನ ಮುಂತಾದ ಹವಾಮಾನ ವೈಪರಿತ್ಯಗಳಿಂದ ರೈತರ ಬೆಳೆ ನಷ್ಟವಾದಾಗ, ವಿಫಲವಾದ ಪಕ್ಷದಲ್ಲಿ ಇಲಾಖೆಯು ರೈತರಿಗೆ ಬೆಳೆ ವಿಮಾ ಯೋಜನೆಯಡಿ ರಕ್ಷಣೆ ಮತ್ತು ಹಣಕಾಸು ಬೆಂಬಲ ಒದಗಿಸಲು ಕೃಷಿ ಇಲಾಖೆಯು ಪ್ರಮುಖ ಪಾತ್ರ ವಹಿಸಿದೆ. ರಾಜ್ಯದ ಭೂ ಪ್ರದೇಶಗಳನ್ನು ಮಳೆ ಬೀಳುವ ಪ್ರಮಾಣ, ಮಣ್ಣುಗಳ ವಿಧ, ಆಳ, ರಚನೆ ಹಾಗೂ ಸ್ಥಳದ ಎತ್ತರ ಹಾಗೂ ಭೂ ಲಕ್ಷಣಗಳ ಆಧಾರದ ಮೇರೆಗೆ 10 ಕೃಷಿ ವಲಯಗಳಾಗಿ ವರ್ಗೀಕರಿಸಲಾಗಿದೆ. ಈ ವಿಷಯದಲ್ಲಿ ರೈತರಿಗೆ ಅರಿವು ಮೂಡಿಸುವಲ್ಲಿ ಪ್ರತಿ ಮುಂಗಾರಿನ ಹಂಗಾಮಿನಲ್ಲಿ ಕೃಷಿ ಅಭಿಯಾನದ ಮೂಲಕ ವಸ್ತು ಪ್ರದರ್ಶನ, ಭಿತ್ತಿ ಚಿತ್ರಗಳು, ಕರಪತ್ರಗಳು ಹಾಗೂ ಟ್ಯಾಬ್‍ಲೋಗಳ ಮುಖಾಂತರ ಹಾಗೂ ಹೋಬಳಿ ಮಟ್ಟದಲ್ಲಿ ಸ್ಥಾಪಿಸಿರುವ ರೈತ ಸಂಪರ್ಕ ಕೇಂದ್ರಗಳ ಮೂಲಕ ಪ್ರಚಾರ ನೀಡಲಾಗುತ್ತಿದೆ ಎಂದು ಕೃಷ್ಣಭೈರೇಗೌಡ ತಿಳಿಸಿದ್ದಾರೆ.