ಮಡಿಕೇರಿ, ಜೂ. 8: ಕಳೆದ ಎರಡು ವರ್ಷಗಳಲ್ಲಿ ಕೊಡಗು ಜಿಲ್ಲೆಯಲ್ಲಿರುವ ರಾಜ್ಯದ ಗಡಿಭಾಗದಲ್ಲಿ ಅಕ್ರಮ ಚಟುವಟಿಕೆಯ ಎರಡು ಪ್ರಕರಣಗಳು ದಾಖಲಾಗಿವೆ ಎಂದು ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಬಹಿರಂಗಪಡಿಸಿದ್ದಾರೆ. (!)

ಕರ್ನಾಟಕ ವಿಧಾನ ಪರಿಷತ್‍ನಲ್ಲಿ ಮೇಲ್ಮನೆ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಅವರು ಕೇಳಿರುವ ಪ್ರಶ್ನೆಗೆ ಗೃಹ ಸಚಿವರು ಈ ಸ್ವಾರಸ್ಯಕರ ಉತ್ತರ ನೀಡಿದ್ದಾರೆ. ಸಚಿವರ ಪ್ರಕಾರ ಕೊಡಗಿನಲ್ಲಿ ಕರ್ನಾಟಕದ ಮೂರು ಅಂತರ ರಾಜ್ಯ ಗಡಿಗಳಿದ್ದು, ಅವುಗಳಲ್ಲಿ ಕುಟ್ಟ, ಮಾಕುಟ್ಟ, ಕರಿಕೆ ಚೆಕ್‍ಪೋಸ್ಟ್‍ಗಳು ಸೇರಿವೆ.

ಅಲ್ಲದೆ, ಅಂತರರಾಜ್ಯ ಗಡಿಗಳಲ್ಲಿ ಭದ್ರತಾ ದೃಷ್ಟಿಯಿಂದ ಚೆಕ್‍ಪೋಸ್ಟ್‍ಗಳನ್ನು ಪೊಲೀಸ್ ಇಲಾಖೆಯಿಂದ ನಿರ್ಮಿಸಲಾಗಿದೆ. ದಿನದ 24 ಗಂಟೆಯೂ ಸಶಸ್ತ್ರ ಸಹಿತ ಕಾವಲು ಇರಿಸಲಾಗಿದೆ. ಅಲ್ಲಿ ಸಿಸಿ ಟಿವಿಗಳನ್ನು ಅಳವಡಿಸಲಾಗಿದೆ. ನಿತ್ಯ ಸಂಚರಿಸುವ ವಾಹನಗಳ ತಪಾಸಣೆಯೊಂದಿಗೆ, ನಕ್ಸಲ್ ಪೀಡಿತ ಗಡಿಭಾಗಗಳಲ್ಲಿನ ಚೆಕ್‍ಪೋಸ್ಟ್‍ಗಳಲ್ಲಿ ಹೆಚ್ಚಿನ ಕಟ್ಟೆಚ್ಚರ ವಹಿಸಲಾಗಿದೆ.

ಈ ಮೂರು ಚೆಕ್‍ಪೋಸ್ಟ್‍ಗಳಲ್ಲಿ ವಿವಿಧ ಇಲಾಖೆಗಳ ಸಂಯೋಜಿತ ಭದ್ರತೆ ಹಾಗೂ ಅಗತ್ಯ ಬಿದ್ದರೆ ನೆರೆರಾಜ್ಯ ಪೊಲೀಸರು ಒಡಗೂಡಿ ಜಂಟಿ ಕಾರ್ಯಾಚರಣೆ ನಡೆಸಲಿದ್ದಾರೆ. ಹೀಗಿದ್ದೂ, ಕಳೆದ ತಾ. 22.8.2016 ರಂದು ಕುಟ್ಟ ನಿವಾಸಿಯೊಬ್ಬರ ತೋಟದ ರಸ್ತೆಗಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ಒಂದು ರಾಸು ಪ್ರಕರಣ ಹಾಗೂ 17.7.2016ರಂದು ಕುಟ್ಟ ಹಳೆ ಚೆಕ್‍ಪೋಸ್ಟ್ ಬಳಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ಮತ್ತೊಂದು ರಾಸು ಪತ್ತೆ ಪ್ರಕರಣ ದಾಖಲಾಗಿದೆ ಎಂಬ ಲಿಖಿತ ಉತ್ತರವನ್ನು ನೀಡುವ ಮೂಲಕ ರಾಜ್ಯದ ಗಡಿಯಲ್ಲಿ ಅಕ್ರಮ ಚಟುವಟಿಕೆಗಳೇ ನಡೆಯುತ್ತಿಲ್ಲ (!) ಎಂಬಂತೆ ಎಲ್ಲರಲ್ಲಿ ಅಚ್ಚರಿ ಮೂಡಿಸಿದ್ದಾರೆ.