ಕುಶಾಲನಗರ, ಜೂ. 8: ಕುಶಾಲನಗರ ಗುಂಡೂರಾವ್ ಬಡಾವಣೆ ನಿವೇಶನಗಳು ಹರಾಜು ಪ್ರಕ್ರಿಯೆಗೆ ಸಿದ್ಧವಾಗಿದ್ದು ಯಾವದೇ ರೀತಿಯ ಕಾನೂನು ತೊಡಕುಗಳು ಇರುವದಿಲ್ಲ ಎಂದು ಕೊಡಗು ಜಿಲ್ಲಾ ಜಿಲ್ಲಾಧಿಕಾರಿ ಹಾಗೂ ಐಡಿಎಸ್‍ಎಂಟಿ ಅಧ್ಯಕ್ಷ ಡಾ. ಆರ್.ವಿ. ಡಿಸೋಜ ಸ್ಪಷ್ಟಪಡಿಸಿದ್ದಾರೆ. ಅವರು ‘ಶಕ್ತಿ’ಯೊಂದಿಗೆ ಮಾತನಾಡಿ, ಗುಂಡೂರಾವ್ ಬಡಾವಣೆಯ ನಿವೇಶನಗಳು ಕಾನೂನುಬದ್ಧವಾಗಿ ಹರಾಜಿಗೆ ಸಿದ್ಧಗೊಂಡಿದ್ದು, ಈ ತಿಂಗಳ 15 ರಂದು ಬಹಿರಂಗ ಹರಾಜು ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.ಕುಶಾಲನಗರ ಗುಂಡೂರಾವ್ ಬಡಾವಣೆ ವಿಲೇವಾರಿ ಬಗ್ಗೆ ಪ್ರಕಟಗೊಂಡ ‘ಶಕ್ತಿ’ ವರದಿಗೆ ಪ್ರತಿಕ್ರಿಯಿಸಿರುವ ಅವರು, ಕಳೆದ 15 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಕುಶಾಲನಗರ ಪಟ್ಟಣದ ಬೃಹತ್ ಬಡಾವಣೆಯು ಅಭಿವೃದ್ಧಿಗೊಳಿಸ ಲಾಗಿದ್ದು, ಪ್ರಥಮ ಹಂತದಲ್ಲಿ 50 ನಿವೇಶನಗಳನ್ನು ಹರಾಜು ನಡೆಸಲು ಸ್ಥಳೀಯ ಆಡಳಿತ ಸಿದ್ಧತೆ ನಡೆಸಿದೆ. ಈ ಮೂಲಕ ಬರುವ ಆದಾಯವನ್ನು ಬಡಾವಣೆಯ

(ಮೊದಲ ಪುಟದಿಂದ) ನಿವೇಶನಗಳ ಅಭಿವೃದ್ಧಿಗೆ ಬಳಸಿಕೊಂಡು ನಿವೇಶನಗಳನ್ನು ಸ್ಥಳೀಯ ನಿವೇಶನ ರಹಿತರಿಗೆ ನಿಯಮಾನುಸಾರ ಆದ್ಯತೆ ಮೇಲೆ ನೀಡಲು ಕ್ರಮಕೈಗೊಳ್ಳಲಾಗುವದು ಎಂದಿದ್ದಾರೆ.

ಗುಂಡೂರಾವ್ ಬಡಾವಣೆಯ ಅಭಿವೃದ್ಧಿಗೆ ಈ ಹಿಂದೆ ರೂ. 60 ಲಕ್ಷ ಸಾಲ ಪಡೆಯಲಾಗಿದ್ದು, ಅದನ್ನು ಮರು ಪಾವತಿಸುವ ಮೂಲಕ ಪಂಚಾಯಿತಿ ಮುಂದಿನ ಕ್ರಮಕ್ಕೆ ಕಾರ್ಯ ಯೋಜನೆ ರೂಪಿಸಲಿದೆ ಎಂದಿರುವ ಜಿಲ್ಲಾಧಿಕಾರಿಗಳು, ನೆನೆಗುದಿಗೆ ಬಿದ್ದಿದ್ದ ಹಲವು ವರ್ಷಗಳ ಯೋಜನೆಯೊಂದನ್ನು ವಿಲೇವಾರಿ ಮಾಡುವ ಸಂದರ್ಭ ಕೆಲವು ವ್ಯಕ್ತಿಗಳು ಗೊಂದಲದ ಹೇಳಿಕೆ ನೀಡುವದರಿಂದ ಪಟ್ಟಣದ ಅಭಿವೃದ್ಧಿಗೆ ಅಡ್ಡಿಯಾಗುವ ಸಾಧ್ಯತೆಯಿದೆ ಎಂದರು.

ಗುಂಡೂರಾವ್ ಬಡಾವಣೆಯ ನಿವೇಶನಗಳ ಹರಾಜು ಪ್ರಕ್ರಿಯೆ ಕುರಿತಂತೆ ‘ಶಕ್ತಿ’ಯೊಂದಿಗೆ ಮಾತನಾಡಿದ ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಎಂ.ಎಂ. ಚರಣ್ ವಿಷಯಕ್ಕೆ ಸಂಬಂಧಿಸಿದಂತೆ ಕುಶಾಲನಗರ ಪಂಚಾಯಿತಿ ಆಡಳಿತ ಮಂಡಳಿ ಹಲವು ಸಭೆಗಳಲ್ಲಿ ಚರ್ಚಿಸಿ ಬಡಾವಣೆಯ ನಿವೇಶನಗಳನ್ನು ಹರಾಜು ಮಾಡುವ ಸಂಬಂಧ ಎಲ್ಲಾ ಕಾನೂನಾತ್ಮಕ ಕ್ರಮಗಳ ಬಗ್ಗೆ ಅನುಮೋದನೆ ದೊರೆತಿದೆ. ಈ ಬಗ್ಗೆ ಸಂಬಂಧಿಸಿದ ಆಡಳಿತ ವ್ಯವಸ್ಥೆಯಿಂದ ಅನುಮತಿ ದೊರೆತ ನಂತರ ಪತ್ರಿಕೆ ಮಾಧ್ಯಮಗಳಲ್ಲಿ ಜಾಹೀರಾತು ಪ್ರಕಟಿಸಿ ಸಾರ್ವಜನಿಕರ ಗಮನಕ್ಕೆ ತರಲಾಗಿದೆ ಎಂದಿದ್ದಾರೆ.

ಪಟ್ಟಣ ಪಂಚಾಯಿತಿಯ ಕಾನೂನು ಸಲಹೆಗಾರ ಆರ್. ಕೆ. ನಾಗೇಂದ್ರಬಾಬು ಅವರು ಗುಂಡೂರಾವ್ ಬಡಾವಣೆ ನಿವೇಶನಗಳ ಬಗ್ಗೆ ಅನಾವಶ್ಯಕ ಗೊಂದಲದ ಹೇಳಿಕೆ ನೀಡಿರುವದು ವಿಷಾದನೀಯ ಎಂದ ಅವರು, ಇದು ಪಟ್ಟಣದ ಅಭಿವೃದ್ಧಿ ಕೆಲಸಕ್ಕೆ ಅಡ್ಡಿಯುಂಟು ಮಾಡುವ ಹುನ್ನಾರವಾಗಿದೆ ಎಂದು ಆರೋಪಿಸಿದ್ದಾರೆ.

ಒಟ್ಟು 40 ಎಕರೆಗೂ ಅಧಿಕ ವಿಸ್ತೀರ್ಣವುಳ್ಳ ಗುಂಡೂರಾವ್ ಬಡಾವಣೆಯ ಉಳಿದ ನಿವೇಶನಗಳನ್ನು ಕುಶಾಲನಗರದ ವಸತಿ ರಹಿತ ಜನತೆಗೆ ನೀಡಲು ಪ್ರಥಮ ಆದ್ಯತೆ ಕಲ್ಪ್ಪಿಸಲು ಚಿಂತಿಸಲಾಗಿದೆ ಎಂದಿದ್ದಾರೆ.

ಗುಂಡೂರಾವ್ ಬಡಾವಣೆ ನಿವೇಶನ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಈಗಾಗಲೇ ಕೆಲವು ಅರ್ಜಿಗಳು ಬಂದಿದ್ದು ನಿಯಮಾನುಸಾರ ನಿವೇಶನ ಹರಾಜು ನಡೆಯಲಿದೆ. ಯಾವದೇ ಅಡ್ಡಿ ಆತಂಕಗಳು ಬಂದರೂ ಅದನ್ನು ಪಟ್ಟಣ ಪಂಚಾಯಿತಿ ಮೂಲಕ ನಿವಾರಣೆ ಮಾಡುವದಾಗಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ಎಂ. ಶ್ರೀಧರ್ ತಿಳಿಸಿದ್ದಾರೆ.