ಮಡಿಕೇರಿ, ಜೂ. 8: ರಾಜ್ಯ ಯೋಜನಾ ಮತ್ತು ಸಾಂಖ್ಯಿಕ ಖಾತೆ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಎಂ.ಆರ್. ಸೀತಾರಾಂ ಅವರಿಗೆ ವಿಧಾನ ಪರಿಷತ್ ಹಾಗೂ ವಿಧಾನ ಸಭೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಸಭಾ ನಾಯಕ ಸ್ಥಾನ ಲಭಿಸುವ ಸಾಧ್ಯತೆ ಹೆಚ್ಚಿರುವದಾಗಿ ‘ಶಕ್ತಿ'ಗೆ ಮೂಲಗಳಿಂದ ತಿಳಿದು ಬಂದಿದೆ.ಈ ಹಿಂದೆ ಗೃಹ ಸಚಿವರಾಗಿದ್ದ ಕೆ. ಪರಮೇಶ್ವರ್ ಅವರು ಹೈಕಮಾಂಡ್ ಸೂಚನೆಯಂತೆ ಗೃಹ ಖಾತೆಗೆ ರಾಜೀನಾಮೆ ನೀಡಿ ಕೆಪಿಸಿಸಿ ಅಧ್ಯಕ್ಷಗಿರಿ ಹೊಂದಿದ್ದಾರೆ. ಈಗಾಗಲೇ ಪರಮೇಶ್ವರ್ ಅವರು ಗೃಹ ಖಾತೆಗೆ ರಾಜೀನಾಮೆ ಸಲ್ಲಿಸಿದ್ದು, ಕೆಲ ದಿನಗಳವರೆಗೆ ಮುಖ್ಯಮಂತ್ರಿಗಳ ಸೂಚನೆಯಂತೆ ಮುಂದುವರೆಯಲಿದ್ದಾರೆ. ಬಳಿಕ ಯಾರನ್ನು ಗೃಹ ಖಾತೆಗೆ ನೇಮಕ ಮಾಡಬೇಕೆಂಬ ಕಸರತ್ತಿನಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ತೊಡಗಿದ್ದು, ಕೆಲವಾರು ಹೆಸರುಗಳು ಅವರ ಮುಂದಿದೆ. ಅವರಲ್ಲಿ ಒಬ್ಬರನ್ನು ಆಯ್ಕೆ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ. ಆದರೆ ‘ಶಕ್ತಿ'ಗೆ ದೊರೆತಿರುವ ಮಾಹಿತಿ ಪ್ರಕಾರ ಗೃಹ ಖಾತೆಗೆ ಕೊಡಗು ಉಸ್ತುವಾರಿ ಸಚಿವ ಸೀತಾರಾಂ ಅವರನ್ನು ನೇಮಿಸಲು ಮುಖ್ಯಮಂತ್ರಿಗಳು ಒಲವು ತೋರಿದ್ದಾರೆ ಎನ್ನಲಾಗಿದ್ದು, ಇದಕ್ಕೆ ಸಚಿವ ಸೀತಾರಾಂ ಒಪ್ಪಿಗೆ ಸೂಚಿಸುತ್ತಿಲ್ಲ ಎಂದು ತಿಳಿದುಬಂದಿದೆ.

ಈ ನಡುವೆ ಸದನಗಳಲ್ಲಿ ಮುಖ್ಯಮಂತ್ರಿಗಳ ಅನುಪಸ್ಥಿತಿಯಲ್ಲಿ ಸರ್ಕಾರದ ಪರ ಮಾತನಾಡಬಹುದಾದ ಅಧಿಕಾರ ಇರುವಂತಹ ಆಡಳಿತ ಪಕ್ಷದ ನಾಯಕ ಸ್ಥಾನವನ್ನು ಸೀತಾರಾಂ ಅವರಿಗೆ ವಹಿಸಲು ಮುಖ್ಯಮಂತ್ರಿಗಳು ತೀರ್ಮಾನಿಸಿದ್ದು, ಇದಕ್ಕೆ ಸೀತಾರಾಂ ಅವರು ಕೂಡ ಬಹುತೇಕ ಒಪ್ಪಿಗೆ ಸೂಚಿಸಿದ್ದು, ಸದ್ಯದಲ್ಲೇ ಸಿ.ಎಂ. ಸಿದ್ಧರಾಮಯ್ಯ ಅವರು ಈ ಬಗ್ಗೆ ಆದೇಶ ಹೊರಡಿಸಲಿದ್ದಾರೆ ಎಂದು ಖಚಿತ ಮೂಲಗಳಿಂದ ಮಾಹಿತಿ ಲಭಿಸಿದೆ. ಈ ಬೆಳವಣಿಗೆಗಳಿಂದ ಕೊಡಗು ಉಸ್ತುವಾರಿ ಜವಾಬ್ದಾರಿ ಬದಲಾಗಲಿದೆ ಎಂಬ ಮಾತೂ ಕೇಳಿ ಬರುತ್ತಿದ್ದು, ಹಾಸನ ಜಿಲ್ಲೆಯವರಾದ ಪಶು ಸಂಗೋಪನಾ ಇಲಾಖಾ ಸಚಿವ ಎ. ಮಂಜು ಅವರು ಕೊಡಗಿಗೆ ಉಸ್ತುವಾರಿ ಸಚಿವರಾಗಿ ನೇಮಕಗೊಳ್ಳಲಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ದೃಢಪಟ್ಟಿಲ್ಲ.

-ಉಜ್ವಲ್ ರಂಜಿತ್.