ಕೂಡಿಗೆ, ಜೂ. 8: ಕೂಡು ಮಂಗಳೂರು ಗ್ರಾಮ ಪಂಚಾಯ್ತಿಯ ಹಾರಂಗಿ ಗ್ರಾಮಸ್ಥರುಗಳಿಗೆ ಶೌಚಾಲಯ ನಿರ್ಮಿಸಲು ಅರ್ಜಿ ಸಲ್ಲಿಸಿದ್ದರೂ, ಅಭಿವೃದ್ಧಿ ಅಧಿಕಾರಿ ಸ್ಪಂದಿಸಿಲ್ಲ ಎಂದು ಆರೋಪಿಸಿ ಬಿ.ಬಾಸ್ಕರ್‍ನಾಯಕ್ ನಡೆಸಿದ ಉಪವಾಸ ಸತ್ಯಾಗ್ರಹ ಎರಡನೇ ದಿನ ಮಧ್ಯಾಹ್ನ ಅಂತ್ಯಗೊಂಡಿತು. ಗ್ರಾ.ಪಂ ವ್ಯಾಪ್ತಿಯ ಹುಲುಗುಂದ (ಹಾರಂಗಿ) ಗ್ರಾಮದಲ್ಲಿ ಶೌಚಾಲಯ ಇಲ್ಲದ 30 ಕುಟುಂಬ ಸದಸ್ಯರಿಗೆ ಶೌಚಾಲಯ ನಿರ್ಮಿಸಿಕೊಡಬೇಕೆಂಬ ಬೇಡಿಕೆಯನ್ನು ಇರಿಸಿಕೊಂಡು ಉಪವಾಸ ಸತ್ಯಾಗ್ರಹ ನಡೆಸಿದರು.

ಎರಡನೇ ದಿನಕ್ಕೆ ಮುಂದುವರೆದ ಸತ್ಯಾಗ್ರಹವನ್ನು ನಿಲ್ಲಿಸುವಂತೆ ಕೋರಿದ ತಾಲೂಕು ಪ್ರಬಾರ ಕಾರ್ಯ ನಿರ್ವಹಣಾಧಿಕಾರಿ ಸುನೀಲ್‍ಕುಮಾರ್ ಮೇಲಾಧಿಕಾರಿಗಳ ಆದೇಶದಂತೆ ಶೌಚಾಲಯಗಳನ್ನು ನಿರ್ಮಿಸಲು ಅನುಮತಿ ನೀಡಲಾಗುವದು ಎಂದರು.

ಈ ವಿಷಯಕ್ಕೆ ಸಂಬಂಧಿಸಿದಂತೆ ಇಂದು ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಿ ಅಧ್ಯಕ್ಷತೆಯಲ್ಲಿ ತುರ್ತು ಸಭೆ ನಡೆದು ಹಾರಂಗಿ ವಾರ್ಡಿನ ಸದಸ್ಯ ಬಾಸ್ಕರ್ ನೀಡಿರುವ ಅರ್ಜಿಗಳ ಬಗ್ಗೆ ತುರ್ತಾಗಿ ಕ್ರಮಕೈಗೊಳ್ಳಲಾಗುವದು. ಈಗಾಗಲೇ ಅರ್ಜಿ ಸಲ್ಲಿಸಿರುವ ಆರು ಫಲಾನುಭವಿಗಳ ಮನೆಗಳ ಸ್ಥಳಗಳನ್ನು ಪರಿಶೀಲನೆ ಮಾಡಲಾಗಿದೆ. ಹೊಸದಾಗಿ ನಿರ್ಮಾಣ ಮಾಡುವ ಶೌಚಾಲಯಗಳ ಪಟ್ಟಿಯನ್ನು ಮುಂದಿನ ದಿನಗಳಲ್ಲಿ ಮಾಸಿಕ ಸಭೆಯಲ್ಲಿ ಚರ್ಚೆ ಮಾಡಿ ಅವರಿಂದ ಪೂರಕ ದಾಖಲಾತಿಗಳನ್ನು ಪಡೆದು ಮಂಜೂರಾತಿಗೆ ಕ್ರಮಕೈಗೊಳ್ಳುವ ಬಗ್ಗೆ ನಿರ್ಣಯ ಕೈಗೊಂಡು ಲಿಖಿತ ನಿರ್ಣಯ ಪ್ರತಿಯನ್ನು ಸದಸ್ಯ ಬಾಸ್ಕರ್‍ಗೆ ನೀಡಲಾಯಿತು. ಈ ಭರವಸೆಯ ಮೇರೆಗೆ ಬಾಸ್ಕರ್ ಅವರಿಗೆ ಮಜ್ಜಿಗೆ ನೀಡುವ ಮೂಲಕ ಸತ್ಯಾಗ್ರಹ ನಿಲ್ಲಿಸಲಾಯಿತು.