ಗೋಣಿಕೊಪ್ಪಲು, ಜೂ. 8: ಸರ್ಕಾರದ ಕ್ಷೀರ ಭಾಗ್ಯ ಯೋಜನೆ ಅಂಗನವಾಡಿ ಮಕ್ಕಳಿಗೆ ವಿಷ ಭಾಗ್ಯ ಆಗುವದರಲ್ಲಿದೆ.ಹೌದು ಇಲ್ಲಿನ ತಿತಿಮತಿ ಅಂಗನವಾಡಿ ಕೇಂದ್ರÀ್ರದಲ್ಲಿ ಮಕ್ಕಳ ಪೌಷ್ಟಿಕತೆಗೆ ನೀಡುವ ಹಾಲಿನ ಪುಡಿ ವಾಯಿದೆ ಮೀರಿದ್ದರೂ ಅಂಗನವಾಡಿ ಶಿಕ್ಷಕಿಯ ಬೇಜವಾಬ್ದಾರಿತನದಿಂದ ವಿತರಣೆಯಾಗುತ್ತಿದೆ. 2016 ಸೆಪ್ಟಂಬರ್ 27ರಂದು ನಂದಿನಿ ಹಾಲಿನ ಪುಡಿ ಪ್ಯಾಕಿಂಗ್ ಮಾಡಲಾಗಿದೆ. ಆದರೆ ಹಾಲಿನ ಪೊಟ್ಟಣದಲ್ಲಿ 6 ತಿಂಗಳ ವಾಯಿದೆ ಎಂದು ಮುದ್ರಿತವಾಗಿದೆ. ಆದರೂ ವಾಯಿದೆ ಮೀರಿದ ಹಾಲಿನ ಪುಡಿಯನ್ನು 2017 ಜೂನ್ 7ರಂದು ವಿತರಿಸಲಾಗಿದೆ. ಇದು ಪೋಷಕರಲ್ಲಿ ಅಸಮಾದಾನಕ್ಕೆ ಕಾರಣವಾಗಿದೆ. ಅಂಗನವಾಡಿ ಕೇಂದ್ರದಲ್ಲಿ ವಿತರಿಸಿದ ಹಾಲಿನ ಪುಡಿಯ 500 ಗ್ರಾಂ, ಪ್ಯಾಕೆಟ್‍ನಲ್ಲಿ ಮುದ್ರಿತವಾದ ದಿನಾಂಕವನ್ನು ನೋಡಿ ಗಾಬರಿಬಿದ್ದ ಪೋಷಕರೊಬ್ಬರು ಪತ್ರಿಕಾ ಕಚೇರಿಗೆ ತಂದು ಮಾಹಿತಿ ನೀಡಿದಾಗ ಈ ವಿಚಾರ ಬೆಳಕಿಗೆ ಬಂದಿದೆ.

ಸರ್ಕಾರ ಮಕ್ಕಳ ಪೌಷ್ಟಿಕತೆಗಾಗಿ ಕೆನೆಭರಿತ ನಂದಿನಿ ಹಾಲಿನ ಪುಡಿಯನ್ನು ಅಂಗನವಾಡಿ ಕೇಂದ್ರಗಳ ಮೂಲಕ ಆರು ತಿಂಗಳಿನ ಮಗುವಿನಿಂದ ಮೂರು ವರ್ಷದ ಮಗುವಿನವರೆಗೆ ವಿತರಿಸಲಾಗುತ್ತಿದೆ. ಆದರೆ, ಶಿಕ್ಷಕಿಯರ ಬೇಜವಾಬ್ದಾರಿತನ ಕೆನೆಭರಿತ ಹಾಲಿನ ಪುಡಿ ವಿಷವಾಗಿ ಅನಾಹುತಗಳು ಸಂಭವಿಸುವ ಸಾಧ್ಯತೆ ಹೆಚ್ಚಿದೆ.

ತಿತಿಮತಿ ವ್ಯಾಪ್ತಿಯಲ್ಲಿ ಹೆಚ್ಚು ಗಿರಿಜನರು ವಾಸವಾಗಿದ್ದಾರೆ. ಈ ಅಂಗನವಾಡಿ ವ್ಯಾಪ್ತಿಗೂ ಗಿರಿಜನರು ಒಳಪಟ್ಟಿದ್ದು ಹಾಲಿನ ಪುಡಿ ಫಲಾನುಭವಿಗಳಾಗಿದ್ದಾರೆ. ಅಂಗನವಾಡಿಯಲ್ಲಿ ಪುಡಿ ವಿತರಣೆಯಾದ ತಕ್ಷಣವೇ ಮನೆಯಲ್ಲಿ ಬಳಕೆ ಮಾಡುವ ಇವರು ಹಾಲಿನ ಪುಡಿ ಪ್ಯಾಕೇಟ್‍ನಲ್ಲಿ ಮುದ್ರಿತವಾದ ದಿನಾಂಕವನ್ನು ನೋಡಲು ಹೋಗುವದಿಲ್ಲ. ಇಂತಹ ಸಂದರ್ಭದಲ್ಲಿ ಮುಗ್ದ ಮಕ್ಕಳ ಮೇಲೆ ತೀವ್ರ ಪರಿಣಾಮ ಬೀರಲಿದೆ.

ಜಿಲ್ಲೆಯಾದ್ಯಂತ ಇರುವ ಅಂಗನಾಡಿ ಕೇಂದ್ರಗಳಲ್ಲಿಯೂ ಇದೇ ಪರಿಸ್ಥಿತಿ ಇರಬಹುದು. ಈ ಬಗ್ಗೆಯೂ ಅಧಿಕಾರಿಗಳು ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕಾಗಿದೆ.

ಶಿಕ್ಷಕಿಯ ಕಣ್ತಪ್ಪಿನಿಂದ ಈ ಘಟನೆ ನಡೆದಿದೆ. ಈ ಬಗ್ಗೆ ಶಿಕ್ಷಕಿಯನ್ನು ವಿಚಾರಿಸಿದ್ದೇವೆ. ಸೂಕ್ತ ಕ್ರಮಕ್ಕೆ ಮುಂದಾಗಿದ್ದೇವೆ. ಕಳೆದ ತಿಂಗಳಿನಿಂದ ಹಾಲಿನ ಪುಡಿ ವಿತರಣೆಯಾಗಿರಲಿಲ್ಲ. ಮಕ್ಕಳಿಗೆ ವಿತರಿಸಬೇಕೆಂಬ ಒತ್ತಾಯದಿಂದ ಈ ರೀತಿ ಸಂಭವಿಸಿರಬಹುದು ಎಂದು ತಾಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಲೀಲಾವತಿ ಪ್ರತಿಕ್ರಿಯೆ ನೀಡಿದ್ದಾರೆ.

-ಚಿತ್ರ ವರದಿ, ಎನ್.ಎನ್. ದಿನೇಶ್