ಬೆಂಗಳೂರು, ಜೂ. 8: ದಿಡ್ಡಳ್ಳಿ ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸಲು ರೂ. 2.84 ಕೋಟಿ ವೆಚ್ಚದ ಕಾಮಗಾರಿಯನ್ನು ಕೈಗೊಳ್ಳಲಾಗಿದೆ ಎಂದು ರಾಜ್ಯ ಸಮಾಜ ಕಲ್ಯಾಣ ಸಚಿವ ಹೆಚ್. ಆಂಜನೇಯ ತಿಳಿಸಿದ್ದಾರೆ.ಸದನದಲ್ಲಿ ಶಾಸಕ ಕೆ.ಜಿ. ಬೋಪಯ್ಯ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಸಚಿವರು, ಈಗಾಗಲೇ ನಿರಾಶ್ರಿತರಿಗೆ ಜಿಲ್ಲಾಡಳಿತ ಹಂತ ಹಂತವಾಗಿ ಮೂಲಭೂತ ಸೌಲಭ್ಯ ಒದಗಿಸುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಕೊಡಗಿನ ಬ್ಯಾಡಗೊಟ್ಟ, ಬಸವನಹಳ್ಳಿ, ಕೆದಮುಳ್ಳೂರು ಸೇರಿದಂತೆ ಒಟ್ಟು 528 ಮನೆಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ವಿವರ ನೀಡಿದ್ದಾರೆ.ಅಧಿಕಾರಿ ಸಾವುಹಿಂದಿನ ಕೊಡಗು ಜಿಲ್ಲಾಧಿಕಾರಿ ಹಾಗೂ ರಾಜ್ಯ ಆಹಾರ ನಿಗಮ ಆಯುಕ್ತರಾಗಿದ್ದ ಐ.ಎ.ಎಸ್. ಅಧಿಕಾರಿ ಅನುರಾಗ್ ತಿವಾರಿ ಸಾವಿನ ಬಗ್ಗೆ ಸದನದಲ್ಲಿ ಶಾಸಕ ಅಪ್ಪಚ್ಚು ರಂಜನ್, ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಪ್ರಸ್ತಾಪಿಸಿ ಚರ್ಚೆಗೆ ಅವಕಾಶ ಕೋರಿದ್ದಾರೆ. ಈ ಬಗ್ಗೆ ಸಭಾಧ್ಯಕ್ಷರು ಕಾಲಾವಕಾಶದ ಭರವಸೆ ನೀಡಿದ್ದಾರೆ.

-ಟಿ.ಎಸ್.ಎಸ್.