ವೀರಾಜಪೇಟೆ: ತಾಲೂಕು ಕಾನೂನು ಸೇವೆಗಳ ಸಮಿತಿ, ವೀರಾಜಪೇಟೆ ವಕೀಲರ ಸಂಘ ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನ್ಯಾಯಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಟಿ.ಎಂ. ನಾಗರಾಜು ಅವರು ಗಿಡ ನೆಡುವ ಮೂಲಕ ಚಾಲನೆ ನೀಡಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಗಿಡ ನೆಟ್ಟು ಪೋಷಿಸುವದರೊಂದಿಗೆ ಮರಗಳನ್ನು ಬೆಳೆಸುವಂತಾಗಬೇಕು. ಪರಿಸರ ಮತ್ತು ಸ್ವಚ್ಛತೆಯನ್ನು ಕಾಪಾಡುವದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಡಿ.ಆರ್. ಜಯಪ್ರಕಾಶ್, ಪ್ರಧಾನ ಸಿವಿಲ್ ನ್ಯಾಯಾಧೀಶೆ ಶರ್ಮಿಳಾ ಕಾಮತ್, ಅಪರ ಸಿವಿಲ್ ನ್ಯಾಯಾಧೀಶ ಬಿ.ಕೆ. ಮನು, ವಕೀಲರ ಸಂಘದ ಅಧ್ಯಕ್ಷ ಎನ್.ಜಿ. ಕಾಮತ್, ವಕೀಲರಾದ ಕೆ. ಪ್ರಧ್ಯುಮ್ನ, ಪಿ.ಎ. ಪೊನ್ನಣ್ಣ, ಅರಣ್ಯ ಇಲಾಖೆಯ ಮಾಲತೇಶ್ ಬಡಿಗೇರ, ಲಾರೆನ್ಸ್ ವಿಕಾಸ್, ಪೌಲ್, ಹಾಗೂ ಹಿರಿಯ ಕಿರಿಯ ವಕೀಲರುಗಳು ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.

*ಸಿದ್ದಾಪುರ: ವೀರಾಜಪೇಟೆಯ ಅನ್ವಾರುಲ್ ಹುದಾ ದುವಾ ಕ್ಯಾಂಪಸ್ ವತಿಯಿಂದ ನಡೆದ ವಿಶ್ವ ಪರಿಸರ ದಿನಾಚರಣೆಗೆ ಗಿಡ ನೆಡುವ ಮೂಲಕ ಚಾಲನೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಎಸ್.ಎಸ್.ಎಫ್. ಕರ್ನಾಟಕ ರಾಜ್ಯ ಕ್ಯಾಂಪಸ್ ಕಾರ್ಯದರ್ಶಿ ಯಾಕೂಬ್ ಕೊಳಕೇರಿ ಮಾತನಾಡಿ, ಇಸ್ಲಾಂ ಧರ್ಮವೂ ಕೂಡ ಪರಿಸರ ಸಂರಕ್ಷಣೆಗೆ ನೀಡಿದ ಕೊಡುಗೆ ಅನನ್ಯವಾಗಿದೆ. ಪ್ರತಿಯೊಬ್ಬರು ಪರಿಸರ ರಕ್ಷಣೆಗೆ ಮುಂದಾಗಬೇಕೆಂದು ಕರೆ ನೀಡಿದರು.

ಈ ಸಂದರ್ಭ ಅನ್ವಾರುಲ್ ಹುದಾದ ಮುದರ್ರಿಸ್ ಅಬ್ದುಲ್ ರಹ್ಮಾನ್ ಅಹ್ಸನಿ, ಪ್ರಾಧ್ಯಾಪಕ ಇಬ್ರಾಹಿಂ ಮಾಸ್ಟರ್, ದುವಾ ಕನ್ವೀನರಾದ ಸಯ್ಯದ್ ಸಮೀಜ್ ಉಪಸ್ಥಿತರಿದ್ದರು.

*ಗೋಣಿಕೊಪ್ಪಲು: ಗಿಡ ನೆಡುವ ಮೂಲಕ ಬಾಳೆಲೆ ವಿಜಯಲಕ್ಷ್ಮಿ ಪದವಿಪೂರ್ವ ಕಾಲೇಜಿನಲ್ಲಿ ವಿಶ್ವ ಪರಿಸರ ದಿನ ಆಚರಿಸಲಾಯಿತು. ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಜೀವಿಗಳು ಆರೋಗ್ಯಕರವಾಗಿ ಬದುಕಬೇಕಾದರೆ ಪರಿಸರವನ್ನು ಉತ್ತಮವಾಗಿ ಕಾಪಾಡಿಕೊಳ್ಳಬೇಕು. ಗಿಡ-ಮರಗಳನ್ನು ನೆಟ್ಟು ಪರಿಸರವನ್ನು ರಕ್ಷಿಸಬೇಕು. ಎಲ್ಲ ಜೀವಿಗಳ ಬದುಕಿಗೆ ಪರಿಸರ ಸಂರಕ್ಷಣೆ ಅಗತ್ಯ ಎಂದು ಹೇಳಿದರು.

ಪ್ರಬಾರ ಪ್ರಾಂಶುಪಾಲ ಡಾ. ಜೆ. ಸೋಮಣ್ಣ ಮಾತನಾಡಿ, ಅಭಿವೃದ್ಧಿಯ ಹೆಸರಿನಲ್ಲಿ ಪರಿಸರದ ಮೇಲೆ ನಿರಂತರ ಹಲ್ಲೆ ನಡೆಯುತ್ತಿದೆ. ರಸ್ತೆ, ಬಡಾವಣೆ ನಿರ್ಮಾಣ ಮೊದಲಾದವುಗಳಿಗೆ ಬಹಳಷ್ಟು ಗಿಡ-ಮರಗಳನ್ನು ಕಡಿಯಲಾಗುತ್ತಿದೆ. ಇದರಿಂದ ಹಸಿರು ಪರಿಸರ ನಾಶವಾಗಿ ಅಪಾಯಗಳನ್ನು ತಂದುಕೊಳ್ಳುತ್ತಿದ್ದೇವೆ. ಇದನ್ನು ತಪ್ಪಿಸಬೇಕಾದರೆ ಬಯಲು ಪ್ರದೇಶಗಳಲ್ಲಿ ಗಿಡ-ಮರಗಳನ್ನು ನೆಟ್ಟು ರಕ್ಷಿಸಬೇಕು ಎಂದು ಹೇಳಿದರು.

ಪೊನ್ನಂಪೇಟೆ ಅರಣ್ಯ ಕಾಲೇಜಿನ ವಿದ್ಯಾರ್ಥಿಗಳು ಕಾಲೇಜಿನ ಆವರಣದಲ್ಲಿ ಹೊಂಗೆ, ಬೇವು, ನೆಲ್ಲಿ, ಜಮ್ಮು ನೇರಳೆ ಮೊದಲಾದ ಗಿಡಗಳನ್ನು ನೆಟ್ಟರು. ಉಪನ್ಯಾಸಕರಾದ ಕೆ.ಜಿ. ಅಶ್ವಿನಿ ಕುಮಾರ್, ಮುಖ್ಯ ಶಿಕ್ಷಕ ಕೆ. ಚಂದ್ರಶೇಖರ್, ಎಂ.ಪಿ. ರಾಘವೇಂದ್ರ, ಬೆನಡಿಕ್ಟ್ ಫರ್ನಾಂಡೀಸ್, ಜಯಣ್ಣ, ತಿಮ್ಮರಾಜು, ಹಾಜರಿದ್ದರು.ಮೂರ್ನಾಡು: ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗಿಡಗಳನ್ನು ನೆಡಲಾಯಿತು.

ಕಾಂತೂರು-ಮೂರ್ನಾಡು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕುಂಞಪ್ಪ ಪವಿತ್ರ ಅವರು ಶಾಲಾ ಆವರಣದಲ್ಲಿ ಗಿಡ ನೆಡುವದರ ಮೂಲಕ ಚಾಲನೆ ನೀಡಿದರು.

ಶಾಲಾ ಆವರಣದಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಡಲಾಯಿತು. ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯ ಪಾರೆಮಜಲು ಅರುಣ್, ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ಎ.ಟಿ. ಸುರೇಶ್, ಉಪಾಧ್ಯಕ್ಷ ಮನೋಜ್, ಶಾಲಾ ಮುಖ್ಯ ಶಿಕ್ಷಕಿ ಸರೋಜ ಇತರರು ಹಾಜರಿದ್ದರು.ಶನಿವಾರಸಂತೆ: ಕೊಡ್ಲಿಪೇಟೆಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ (ಎಸ್.ಎಸ್.ಎಫ್.) ಶಾಖೆ ವತಿಯಿಂದ ಬ್ಯಾಡಗೊಟ್ಟ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಮತ್ತು ಹ್ಯಾಂಡ್‍ಪೋಸ್ಟ್ ಮಸೀದಿ ಪರಿಸರದಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮವನ್ನು ನಡೆಸಲಾಯಿತು.

ಈ ಸಂದರ್ಭ ಎಸ್. ಎಸ್. ಎಫ್. ಮುಖಂಡರುಗಳಾದ ಮಹಮ್ಮದ್, ಎಂ.ಎಂ. ಹನೀಫ್, ಡಿ.ಎಂ. ಇಸ್ಮಾಯಿಲ್, ಬಿ.ವೈ. ಹಮೀದ್, ಎಂ.ಎಂ. ನಿಸಾರ್, ಇಸ್ಮಾಯಿಲ್, ರಾಝಿಮ್, ಬಾಸಿತ್, ರೆಹ್ಮಾನ್, ರಫೀಕ್, ಅಬೂಬಕ್ಕರ್ ಹಾಗೂ ಶಾಲಾ ಮುಖ್ಯ ಶಿಕ್ಷಕಿ ಭಾಗ್ಯ, ಶಿಕ್ಷಕರುಗಳು, ವಿದ್ಯಾರ್ಥಿಗಳು ಹಾಜರಿದ್ದರು.

ಎಸ್.ಎಸ್.ಎಫ್. ಕರ್ನಾಟಕ ರಾಜ್ಯ ಸಮಿತಿ ನಿರ್ದೇಶನದಂತೆ ಎಸ್.ವೈ.ಎಸ್. ಮತ್ತು ಎಸ್.ಎಸ್.ಎಫ್. ಕೊಡ್ಲಿಪೇಟೆ ಶಾಖೆಯ ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಶ್ರೀಮಂಗಲ: ಕಳತ್ಮಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಶಾಲಾ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು. ಶಾಲಾಭಿವೃದ್ಧಿ ಮತ್ತು ಕ್ರೀಡಾ ಸಮಿತಿ ಅಧ್ಯಕ್ಷ ಚಂದ್ರಶೇಖರ್, ಮುಖ್ಯೋಪಾಧ್ಯಾಯ ಟಿ.ಎಸ್. ವಿನೋದ್, ವೀರಾಜಪೇಟೆ ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಸುರೇಂದ್ರ ಮೊದಲಾದವರು ಮಾತನಾಡಿದರು. ಶಿಕ್ಷಕಿ ತಾರಾ ಸ್ವಾಗತಿಸಿ, ವಂದಿಸಿದರು. ಅಂಗನವಾಡಿ ಶಿಕ್ಷಕಿ ನೇತ್ರಾವತಿ, ಸಹಾಯಕಿ ಕವಿತಾ ಮತ್ತಿತರರು ಹಾಜರಿದ್ದರು.

ನಾಪೆÇೀಕ್ಲು: ವಿಶ್ವ ಪರಿಸರ ದಿನದ ಅಂಗವಾಗಿ ಸ್ಥಳೀಯ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಸಸಿಗಳನ್ನು ನೆಡುವದರ ಮೂಲಕ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.

ಈ ಸಂದರ್ಭ ಜಿಲ್ಲಾ ಪಂಚಾಯಿತಿ ಸದಸ್ಯೆ ಪಾಡಿಯಮ್ಮಂಡ ಮುರಳಿ ಕರುಂಬಮ್ಮಯ್ಯ ಸಸಿಗಳನ್ನು ನೆಡುವದು ಮುಖ್ಯವಲ್ಲ, ಅದನ್ನು ಪೆÇೀಷಿಸುವ ಜವಾಬ್ದಾರಿಯೂ ಕೂಡ ಇರಬೇಕು. ಪ್ರತಿ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ತಲಾ ಒಂದೊಂದು ಸಸಿ ನೆಟ್ಟು ಅದನ್ನು ಆರೈಕೆ ಮಾಡಿದರೆ ಕಾರ್ಯಕ್ರಮಕ್ಕೆ ಫಲ ದೊರೆತಂತಾಗುತ್ತದೆ. ಸಸಿಯನ್ನು ಹುಲುಸಾಗಿ ಬೆಳೆಸಿದ ವಿದ್ಯಾರ್ಥಿಗಳಿಗೆ ಮುಂದಿನ ವರ್ಷ ರೂ. 100 ಬಹುಮಾನ ನೀಡಲಾಗುವದು ಎಂದರು.

ನಾಪೆÇೀಕ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎ. ಇಸ್ಮಾಯಿಲ್ ಮಾತನಾಡಿದರು. ಜೆಡಿಎಸ್ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮನ್ಸೂರ್ ಅಲಿ, ಬಿಜೆಪಿ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಎಂ.ಜಿ. ಜಾಹಿರ್, ಶಾಲಾಭಿವೃದ್ಧಿ ಸಮಿತಿ ಸದಸ್ಯೆ ನಾಟೋಳಂಡ ಕಸ್ತೂರಿ, ಪ್ರಬಾರ ಮುಖ್ಯ ಶಿಕ್ಷಕ ಸುಬ್ರಮಣಿ, ಶಿಕ್ಷಕ ವೃಂದ, ವಿದ್ಯಾರ್ಥಿಗಳು ಇದ್ದರು.ಗೋಣಿಕೊಪ್ಪಲು: ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನವನ್ನು ಆಚರಿಸಿದರು. ತಾಲೂಕು ಕಾರ್ಯ ನಿರ್ವಹಣಾಧಿಕಾರಿ ಕಿರಣ್ ರಾಯ್ ಫಡ್ನೇಕರ್ ಗಿಡ ನೆಟ್ಟು ನೀರೆರೆದು ಹಸಿರು ಬೆಳೆಸಿ ಎಂಬ ಸಂದೇಶ ಸಾರಿದರು.

ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷೆ ಮೂಕಳೇರ ಸುಮಿತಾ ಗಣೇಶ್, ಸದಸ್ಯರುಗಳಾದ ಹ್ಯಾರೀಸ್, ಮೂಕಳೇರ ಕಾವ್ಯ ಕಾವೇರಮ್ಮ, ಯಶೋದ, ಲಕ್ಷ್ಮಣ ಇದ್ದರು.ಆಲೂರು-ಸಿದ್ದಾಪುರ: ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಶನಿವಾರಸಂತೆ ವ್ಯಾಪ್ತಿಯ ವಿವಿಧ ಶಾಲೆಗಳಲ್ಲಿ ಗಿಡಗಳನ್ನು ನೆಡಲಾಯಿತು. ಆಲೂರು-ಸಿದ್ದಾಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.

ಮಾಜಿ ಜಿ.ಪಂ. ಸದಸ್ಯ ಡಿ.ಬಿ. ಧರ್ಮಪ್ಪ, ಆಲೂರು-ಸಿದ್ದಾಪುರ ಗ್ರಾ.ಪಂ. ಅಧ್ಯಕ್ಷೆ ವೀಣಾ ರಮೇಶ್, ತಾ.ಪಂ. ಸದಸ್ಯೆ ಲೀಲಾವತಿ ಮಹೇಶ್, ವಸತಿ ಶಾಲೆ ಪ್ರಾಂಶುಪಾಲೆ ಭಾರತಿ ಹಾಗೂ ಅರಣ್ಯ ವನಪಾಲಕ ಗೋವಿಂದ್‍ರಾಜ್ ಇವರುಗಳು ಶಾಲಾ ಆವರಣದ ಜಾಗದಲ್ಲಿ ಗಿಡವನ್ನು ನೆಡುವದರ ಮೂಲಕ ಪರಿಸರ ದಿನಾಚರಣೆಯನ್ನು ಆಚರಿಸಿದರು.

ಕಾರ್ಯಕ್ರಮದಲ್ಲಿ ಜಾನಕಿ ಕಾಳಪ್ಪ ವಿದ್ಯಾಸಂಸ್ಥೆ ಅಧ್ಯಕ್ಷ ಹೆಚ್.ಕೆ. ಶಿವಪ್ರಕಾಶ್ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಸತಿ ಶಾಲೆ ಪ್ರಾಂಶುಪಾಲೆ ಕೆ.ಎನ್. ಭಾರತಿ, ಡಿ.ಬಿ. ಧರ್ಮಪ್ಪ ಮಾತನಾಡಿದರು.

ತಾ.ಪಂ. ಸದಸ್ಯೆ ಲೀಲಾವತಿ ಮಹೇಶ್, ಗ್ರಾ.ಪಂ. ಅಧ್ಯಕ್ಷೆ ವೀಣಾ ರಮೇಶ್, ಸದಸ್ಯರಾದ ಟಿ.ಪಿ. ವಿಜಯ್, ಸರಸ್ವತಿ, ಗೋಣಿಮರೂರು ಕ್ಲಸ್ಟರ್ ಸಿಆರ್‍ಪಿ ಚಿಣ್ಣಪ್ಪ, ಅರಣ್ಯ ರಕ್ಷಕರಾದ ರುಕ್ಮಯ್ಯ, ವೆಂಕಟೇಶ್, ಶೇಖರ್, ವಸತಿ ಶಾಲೆ ಸಮಿತಿಯ ಶಶಿಧರ್, ಮಲ್ಲೇಶ್, ಶಿಕ್ಷಕರಾದ ಸತೀಶ್, ಅಲೋಕ್, ಮಲ್ಲಿಕಾರ್ಜುನ, ಶಿವಕುಮಾರ್, ಪತ್ರಕರ್ತ ದಿನೇಶ್ ಮಾಲಂಬಿ, ಭಾಸ್ಕರ್ ಮುಳ್ಳೂರು, ಪೋಷಕರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಸಿದ್ದಾಪುರ: ಎಸ್.ಎಸ್.ಎಫ್. ಸಿದ್ದಾಪುರ ಘಟಕದ ವತಿಯಿಂದ ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗಿಡ ನೆಟ್ಟು ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.

ಸಿದ್ದಾಪುರ ಗ್ರಾ.ಪಂ. ಸದಸ್ಯ ರೆಜಿತ್ ಕುಮಾರ್ ಹಾಗೂ ಆರೋಗ್ಯ ವೈದ್ಯಾಧಿಕಾರಿ ಡಾ. ರಾಘವೇಂದ್ರ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭ ಎಸ್.ಎಸ್.ಎಫ್.ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಫೀಕ್, ವಕ್ಫ್ ಬೋರ್ಡ್ ಸದಸ್ಯ ಸಯ್ಯದ್ ಬಾವ, ಸೆಕ್ಟರ್ ಅಧ್ಯಕ್ಷ ಹಸೈನಾರ್ ಸಖಾಫಿ, ಪ್ರಧಾನ ಕಾರ್ಯದರ್ಶಿ ಕೆ.ಪಿ. ಸಿದ್ದಿಕ್, ನೌಫಲ್, ನವೀದ್ ಖಾನ್ ಇನ್ನಿತರರು ಇದ್ದರು.

ಪೊನ್ನಂಪೇಟೆ: ಸಾಯಿಶಂಕರ ವಿದ್ಯಾಸಂಸ್ಥೆಯಿಂದ ಪರಿಸರ ಜಾಥಾ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿಗಳು ಕಾಲೇಜಿನಿಂದ ಪೊನ್ನಂಪೇಟೆ ಮುಖ್ಯರಸ್ತೆಗಳಲ್ಲಿ ಸಂಚರಿಸಿ ವಿಶ್ವ ಪರಿಸರದ ಜಾಗೃತಿ ಮೂಡಿಸುವದರ ಜೊತೆಗೆ ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ಘೋಷಣಾ ಫಲಕಗಳನ್ನು ಹಾಗೂ ಭಾಷಣ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಪರಿಸರವನ್ನು ಸ್ವಚ್ಛವಾಗಿಡುವದರ ಬಗ್ಗೆ ಅರಿವು ಮೂಡಿಸಿದರು.

ಕಾಲೇಜಿನ ಪ್ರಾಂಶುಪಾಲ ಬೀರೆಗೌಡ, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು, ಪ್ರಶಿಕ್ಷಣಾರ್ಥಿಗಳು ಪಾಲ್ಗೊಂಡಿದ್ದರು.ಗೋಣಿಮರೂರು: ಗೋಣಿಮರೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತವಾಗಿ ಶಾಲಾ ಎಸ್‍ಡಿಎಂಸಿ ಸಮಿತಿ ಹಾಗೂ ಧನ್ವಂತರಿ ಯುಕೊ ಕ್ಲಬ್ ವತಿಯಿಂದ ಶಾಲಾ ಆವರಣದ ಜಾಗದಲ್ಲಿ ಅರಣ್ಯ ಇಲಾಖೆಯಿಂದ ವಿತರಿಸಿದ ಗಿಡಗಳನ್ನು ನೆಡುವದರ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಎಸ್‍ಡಿಎಂಸಿ ಅಧ್ಯಕ್ಷ ಸಿದ್ದಲಿಂಗಪ್ಪ, ಸದಸ್ಯರಾದ ಚಂದ್ರಶೇಖರ್, ಕೆಂಪರಾಜು, ಮಾಜಿ ಎಸ್‍ಡಿಎಂಸಿ ಅಧ್ಯಕ್ಷ ಎ.ಬಿ. ಧರ್ಮಪ್ಪ, ಮುಖ್ಯ ಶಿಕ್ಷಕಿ ಸುನಿತ, ಶಿಕ್ಷಕಿಯರಾದ ನಾಗವೇಣಿ, ಸುಜಾತ, ಯುಕೊ ಕ್ಲಬ್ ಸಂಚಾಲಕ ರಾಜಪ್ಪ ಮುಂತಾದವರು ಇದ್ದರು.ಗೋಣಿಕೊಪ್ಪಲು: ಕಾವೇರಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನ ಘಟಕದ ವತಿಯಿಂದ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭ ಕಾಲೇಜು ಆವರಣದಲ್ಲಿ ಸಸಿ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಪ್ರಾಂಶುಪಾಲ ಎಸ್.ಎಸ್. ಮಾದಯ್ಯ, ವಿದ್ಯಾರ್ಥಿಗಳು ಪರಿಸರದ ಸಂರಕ್ಷಣೆಯ ಮಹತ್ವವನ್ನು ತಿಳಿದುಕೊಂಡು, ಪರಿಸರದ ಉಳಿವಿಗಾಗಿ ಕಂಕಣ ತೊಟ್ಟು ಕಾರ್ಯೋನ್ಮುಖರಾಗಬೇಕು.

ಹಳ್ಳಿ ಹಾಗೂ ಪಟ್ಟಣಗಳಲ್ಲಿ ಪರಿಸರ ಉಳಿವಿಗಾಗಿ ಶಿಬಿರಗಳನ್ನು ನಡೆಸುವದರ ಮೂಲಕ ಸಾರ್ವಜನಿಕರಲ್ಲಿ ಅಮೂಲ್ಯವಾದ ಪರಿಸರ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸುವದರ ಜೊತೆಗೆ ಪ್ರತಿಯೊಬ್ಬ ವಿದ್ಯಾರ್ಥಿ ತಮ್ಮ ಮನೆಯ ಆವರಣದಲ್ಲಿ ಕನಿಷ್ಟ ಎರಡು ಗಿಡ ನೆಡುವ ಕೆಲಸವನ್ನು ಇಂದಿನಿಂದಲೇ ಕೈಗೊಳ್ಳಬೇಕೆಂದರು.

ಈ ಸಂದರ್ಭ ರಾಷ್ಟ್ರೀಯ ಸೇವಾ ಯೋಜನಾ ವಿದ್ಯಾರ್ಥಿಗಳು, ಉಪನ್ಯಾಸಕರಾದ ಎಂ.ಕೆ. ಪದ್ಮ, ರಶ್ಮಿ, ಅಕ್ರಂ, ಚೇತನ್ ಚಿಣ್ಣಪ್ಪ ಹಾಜರಿದ್ದರು.

ಪೊನ್ನಂಪೇಟೆ: ಅರಣ್ಯ ಇಲಾಖೆ, ಕೂರ್ಗ್ ವೈಲ್ಡ್ ಲೈಫ್ ಸೊಸೈಟಿ ಮತ್ತು ಹಾತೂರು ಪ್ರೌಢಶಾಲೆ ಇಕೋ ಕ್ಲಬ್ ವತಿಯಿಂದ ಪರಿಸರ ದಿನಾಚರಣೆಯ ಅಂಗವಾಗಿ ಗಿಡ ನೆಟ್ಟು ಜಾಗೃತಿ ಮೂಡಿಸಲಾಯಿತು.

ಹಾತೂರು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮೈದಾನದಲ್ಲಿ ವಿವಿಧ ಬಗೆಯ ಜಮ್ಮು ನೇರಳೆ, ಹಲಸು, ಹೊಂಗೆ, ನೆಲ್ಲಿ ಸೇರಿದಂತೆ ಇತರ ಗಿಡಗಳನ್ನು ನೆಟ್ಟು ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.

ಜಿ.ಪಂ. ಸದಸ್ಯ ಸಿ.ಕೆ. ಬೋಪಣ್ಣ ಮಾತನಾಡಿ, ಕಾರ್ಯಕ್ರಮಗಳಲ್ಲಿ ಅತಿಥಿಗಳಿಗೆ ಹೂವಿನ ಕುಂಡ ಅಥವಾ ಇತರ ವಸ್ತುಗಳನ್ನು ನೀಡುವ ಬದಲು ಗಿಡಗಳನ್ನು ನೀಡಿ ಪರಿಸರ ರಕ್ಷಣೆಗೆ ಮುಂದಾಗಬೇಕು ಎಂದು ಹೇಳಿದರು.

ಹಾತೂರು ಪಂಚಾಯಿತಿ ಅಧ್ಯಕ್ಷೆ ಆಶಾಲತಾ, ಪಿ.ಡಿ.ಓ. ತಿಮ್ಮಯ್ಯ, ಉಪವಲಯ ಅರಣ್ಯಾಧಿಕಾರಿ ಉತ್ತಯ್ಯ, ಅರಣ್ಯ ಸಿಬ್ಬಂದಿ ರಾಘವ ನಾಯಕ್, ರಾಕೇಶ್, ಕೂರ್ಗ್ ವೈಲ್ಡ್ ಲೈಫ್ ಸೊಸೈಟಿ ಸದಸ್ಯ ಕಾಳಪಂಡ ಉತ್ತಯ್ಯ, ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಶಂಭುಲಿಂಗ, ಮುಖ್ಯೋಪಾಧ್ಯಾಯ ಪಿ.ಪಿ. ಚಿಮ್ಮಿ ಹಾಜರಿದ್ದರು.

*ಗೋಣಿಕೊಪ್ಪಲು: ಜೆ.ಸಿ.ಐ. ಪೊನ್ನಂಪೇಟೆ ಗೋಲ್ಡನ್ ಹಾಗೂ ಮಾದಪ್ಪ ಪೆಟ್ರೋಲ್ ಬಂಕ್ ವತಿಯಿಂದ ಗಿಡ ನೆಟ್ಟು ಜಾಗೃತಿ ಮೂಡಿಸಲಾಯಿತು. ಗೋಣಿಕೊಪ್ಪ ವೃತ್ತ ನಿರೀಕ್ಷಕ ಪಿ.ಕೆ. ರಾಜು ರಸ್ತೆ ಬದಿಯಲ್ಲಿ ಗಿಡ ನೆಟ್ಟರು. ನಂತರ ಅನೀಶ್ ಮಾದಪ್ಪ ನೇತೃತ್ವದಲ್ಲಿ ವಾಹನ ಸವಾರರಿಗೆ ಗಿಡಗಳನ್ನು ವಿತರಿಸಿದರು.

ವೃತ್ತ ನಿರೀಕ್ಷಕ ಪಿ.ಕೆ. ರಾಜು ಮಾತನಾಡಿ, ವಿದ್ಯಾರ್ಥಿಗಳಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ. ಪ್ರತಿಯೊಬ್ಬರ ಮನೆಯಲ್ಲೂ ಗಿಡ ನೆಡುವ ಮೂಲಕ ಪರಿಸರ ಉಳಿಸುವ ಕಾರ್ಯ ನಡೆಯಬೇಕು ಎಂದರು.

ಯುಕೋ ಸಂಘಟನೆಯ ಸಂಚಾಲಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಕೊಡಗಿನಲ್ಲಿ ಹೈಟೆನ್ಷನ್ ನೆಪದಲ್ಲಿ ಸಾವಿರಾರು ಮರಗಳನ್ನು ಕಡಿಯಲಾಗಿದೆ. ಆದರೆ ಒಂದೇ ಒಂದು ಗಿಡ ನೆಡುವ ಕಾರ್ಯ ನಡೆದಿಲ್ಲ. ಅರಣ್ಯ ಸಚಿವರು ಗಿಡ ನೆಡಲು ಅನುದಾನ ಬಿಡುಗಡೆ ಮಾಡಿರುವದು ನೋಡಿದರೆ ಹಾಸ್ಯವೆನಿಸುತ್ತದೆ ಎಂದು ಲೇವಡಿ ಮಾಡಿದರು.

ಉದ್ಯಮಿ ಅನೀಶ್ ಮಾದಪ್ಪ ಮಾತನಾಡಿ, ಕಳೆದ 5 ವರ್ಷಗಳಿಂದ ಪರಿಸರದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು. ಪೊನ್ನಂಪೇಟೆ ಗೋಲ್ಡನ್ ಜೆ.ಸಿ.ಐ. ಅಧ್ಯಕ್ಷ ಪೊನ್ನಿಮಾಡ ಪ್ರದೀಪ್, ಮಾದಪ್ಪ ಪೆಟ್ರೋಲ್ ಬಂಕ್ ಮಾಲೀಕರಾದ ಪಾರ್ವತಿ ಅನೀಶ್ ಉಪಸ್ಥಿರಿತರಿದ್ದರು.ಐಗೂರು: ಪ್ರೌಢಶಾಲೆ, ಭುವನಕ್ಕೊಂದು ಸದನ, ಇಕೋ ಕ್ಲಬ್, ವಿಜಯ ಕರ್ನಾಟಕ ಹಸಿರು ಅಭಿಯಾನದ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಶಾಲಾ ಆವರಣದಲ್ಲಿ ಔಷಧೀಯ ಮತ್ತು ಉಪಯುಕ್ತ ಗಿಡಗಳನ್ನು ನೆಡಲಾಯಿತು. ಹಿರಿಯ ಶಿಕ್ಷಕಿ ಅನಿತಾ ಮಾತನಾಡಿದರು. ಪರಿಸರ ದಿನಾಚರಣೆ ಅಂಗವಾಗಿ ಶಾಲಾ ವಿದ್ಯಾರ್ಥಿಗಳು ‘ಬನ್ನಿ ನಾಳೆಗಾಗಿ ಗಿಡ ನೆಡೋಣ’, ‘ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ’ ಎಂಬ ಘೋಷಣೆಯೊಂದಿಗೆ ಮುಖ್ಯ ಬೀದಿಗಳಲ್ಲಿ ಘೋಷಣೆಗಳನ್ನು ಕೂಗುತ್ತಾ, ಪರಿಸರ ಜಾಥಾ ನಡೆಸಿದರು.