ಗೋಣಿಕೊಪ್ಪಲು, ಜೂ. 8: ಪೋಷಕರು ಮಕ್ಕಳಿಗೆ ಸಂಸ್ಕಾರ ಕಲಿಸಿದರೆ ಮಾತ್ರ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ದಿ ನಿಗಮದ ಉಪಾಧ್ಯಕ್ಷೆ ಮಾಂಗೇರ ಪದ್ಮಿನಿ ಪೊನ್ನಪ್ಪ ಅಭಿಪ್ರಾಯಪಟ್ಟರು.

ವೀರಾಜಪೇಟೆ ಅರಮೇರಿ ಎಸ್‍ಎಂಎಸ್ ಶಾಲೆಯಲ್ಲಿ ನಡೆದ ಮಾಸಿಕ ಚಿಂತನಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬಾಲ್ಯದಲ್ಲಿ ವಿದ್ಯೆಯೊಂದಿಗೆ ಸಂಸ್ಕಾರ ಅಳವಡಿಸಿಕೊಳ್ಳಬೇಕು ಈ ನಿಟ್ಟಿನಲ್ಲಿ ಪೋಷಕರು ಕೈಜೋಡಿಸಿದರೆ ಉತ್ತಮ ವ್ಯಕ್ತಿಯಾಗಲು ಸಾಧ್ಯವಿದೆ. ಸ್ಪರ್ಧಾತ್ಮಕ ಯುಗದಲ್ಲಿ ನಾವು ನಮ್ಮ ತನವನ್ನು ಕಳೆದುಕೊಂಡು ಹಣದ ಹಿಂದೆ ಬಿದ್ದಿರುವದು ವಿಪರ್ಯಾಸ. ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಂಡು ವಿಚಾರವಂತರಾಗಬೇಕು. ಪರಿಸರ ರಕ್ಷಣೆಗೂ ಕೈ ಜೋಡಿಸಿ ಹಸಿರು ಉಳಿಸುವಂತಾಗಬೇಕು ಕೊಡಗಿನ ಭೂಮಿ ಇದೀಗ ವಾಣಿಜ್ಯೋದ್ದೇಶಕ್ಕೆ ಮಾರಾಟವಾಗುತ್ತಿರುವದು ಆತಂಕಕಾರಿ ಬೆಳವಣಿಗೆ ಎಂದರು.

ಅರಮೇರಿ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಪ್ರಕೃತಿ ಮೇಲಿನ ನಿರಂತರ ಹಾನಿಯಿಂದ ಕೊಡಗಿನ ಪರಿಸರ ಹಾಳಾಗುತ್ತಿದೆ ಈ ನಿಟ್ಟಿನಲ್ಲಿ ಹಸಿರು ಬೆಳೆಸುವತ್ತ ಪ್ರತಿಯೊಬ್ಬರು ಕೈಜೋಡಿಸಿ ಉತ್ತಮ ವಾತಾವರಣ ನಿರ್ಮಿಸಬೇಕು ಎಂದರು.ಅರಣ್ಯ ಮಹಾವಿದ್ಯಾಲಯದ ಉಪನ್ಯಾಸಕ ಜಡೇಗೌಡ ಅರಣ್ಯ ರಕ್ಷಣೆ ಕುರಿತು ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು. ಈ ಸಂದರ್ಭ ಶಾಲಾ ಪ್ರಾಂಶುಪಾಲ ನಾಯಕ್ ಹಾಜರಿದ್ದರು.