ಸಿದ್ದಾಪುರ, ಜೂ. 9: ತೋಡಿನಿಂದ ಅಕ್ರಮವಾಗಿ ಮರಳು ತೆಗೆದು ಶೇಖರಿಸಿಟ್ಟಿದ್ದ ಸ್ಥಳಕ್ಕೆ ಕಂದಾಯ ಇಲಾಖಾಧಿಕಾರಿಗಳು ಧಾಳಿ ನಡೆಸಿ ಮರಳನ್ನು ಮುಟ್ಟುಗೋಲು ಹಾಕಿಕೊಂಡಿರುವ ಘಟನೆ ಅಮ್ಮತ್ತಿ ಹೋಬಳಿಯ ಕೊಳತೋಡು ಬೈಗೋಡು ಗ್ರಾಮದಲ್ಲಿ ನಡೆದಿದೆ.ಕೊಳತೋಡು-ಬೈಗೋಡು ಗ್ರಾಮದಲ್ಲಿ ದಿನೇಶ್ ಎಂಬವರು ಸಮೀಪದ ತೋಡಿನಿಂದ ಅಕ್ರಮವಾಗಿ ಮರಳು ತೆಗೆದು ಸಂಗ್ರಹಿಸಿಟ್ಟಿದ್ದ ಖಚಿತ ಮಾಹಿತಿಯ ಮೇರೆಗೆ ವೀರಾಜಪೇಟೆ ತಾಲೂಕು ತಹಶೀಲ್ದಾರ್ ಗೋವಿಂದರಾಜು ಮಾರ್ಗದರ್ಶನದಲ್ಲಿ ಅಮ್ಮತ್ತಿ ಹೋಬಳಿ ಕಂದಾಯ ಪರಿವೀಕ್ಷಕ ಅನಿಲ್ ಕುಮಾರ್, ಗ್ರಾಮ ಲೆಕ್ಕಿಗ ಬಿ.ಆರ್. ಮಂಜುನಾಥ್, ನಿಶಾನ್ ಮಧ್ಯರಾತ್ರಿ ಧಾಳಿ ನಡೆಸಿ ಅಂದಾಜು ರೂ. 2 ಲಕ್ಷ ಮೌಲ್ಯದ ಸುಮಾರು 30 ಲೋಡ್‍ನಷ್ಟು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮರಳನ್ನು ಮುಟ್ಟುಗೋಲು ಹಾಕಿಕೊಂಡು ರೂ. 50 ಸಾವಿರ ಹಣ ದಂಡ ವಿಧಿಸಿದ್ದಾರೆ. ಮುಟ್ಟುಗೋಲು ಹಾಕಿದ ಮರಳನ್ನು ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸಲಾಯಿತು. ಕಾರ್ಯಾಚರಣೆಯ ಸಂದರ್ಭ ಅಮ್ಮತ್ತಿ ಹೋಬಳಿಯ ಕಂದಾಯ ಇಲಾಖೆಯ ಸಿಬ್ಬಂದಿಗಳಾದ ಮೋಹನ್, ಹೇಮಂತ್ ಕುಮಾರ್, ರವೀಂದ್ರ ಗಣಿ ಮತ್ತು ಭೂ ವಿಜ್ಞಾನ ಇಲಾಖಾಧಿಕಾರಿ ನಾಗೇಂದ್ರಪ್ಪ, ಲೋಕೋಪಯೋಗಿ ಇಲಾಖಾಧಿಕಾರಿ ಸತೀಶ್ ಇನ್ನಿತರರು ಹಾಜರಿದ್ದರು.