ಕೂಡಿಗೆ, ಜೂ. 9: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿರುವ ಪುರಾತನ ಹಿನ್ನೆಲೆಯುಳ್ಳ ಶ್ರೀ ಉಮಾಮಹೇಶ್ವರ ಕ್ಷೇತ್ರದಲ್ಲಿ 27ನೇ ವರ್ಷದ ಪ್ರತಿಷ್ಠಾಪನಾ ಉತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು.ಉತ್ಸವದ ಅಂಗವಾಗಿ ಬೆಳಗ್ಗಿನಿಂದಲೇ ಗಣಪತಿ ಹೋಮ, ಪ್ರಧಾನ ದೇವರಿಗೆ ಹಾಗೂ ಇತರ ಉಪದೇವತೆಗಳಿಗೆ ವಿಶೇಷ ಅಭಿಷೇಕ, ಅರ್ಚನೆ ಸೇರಿದಂತೆ ಪೂಜಾ ಕೈಂಕರ್ಯಗಳು ನಡೆದವು. ಮಧ್ಯಾಹ್ನ ಮಹಾಮಂಗಳಾರತಿ ನಂತರ ನೆರೆದಿದ್ದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಹಾಗೂ ತೀರ್ಥ ಪ್ರಸಾದ ವಿನಿಯೋಗ ನಡೆಯಿತು.

ಈ ವ್ಯಾಪ್ತಿಯ ಕಾಳಿದೇವರ ಹೊಸೂರು, ಮಾವಿನಹಳ್ಳ, ಮದಲಾಪುರ, ಹಾರಂಗಿ, ಕುಶಾಲನಗರ ವ್ಯಾಪ್ತಿಯ ಅನೇಕರು ಉತ್ಸವದಲ್ಲಿ ಪಾಲ್ಗೊಂಡಿದ್ದರು.

ಈ ಸಂದರ್ಭ ದೇವಾಲಯ ಸಮಿತಿಯ ಅಧ್ಯಕ್ಷ ಟಿ.ಎಂ. ಚಾಮಿ, ಕಾರ್ಯದರ್ಶಿ ವಿ.ಎಲ್. ಸುರೇಶ್ ಸೇರಿದಂತೆ ಆಡಳಿತ ಮಂಡಳಿಯ ನಿರ್ದೇಶಕರು ಹಾಗೂ ಸದಸ್ಯರುಗಳು ಪಾಲ್ಗೊಂಡಿದ್ದರು.