ನವದೆಹಲಿ, ಜೂ. 9: ಕೇಂದ್ರ ಸರ್ಕಾರದ ಉದ್ದೇಶಿತ ಆಧಾರ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ವಿಚಾರಕ್ಕೆ ಸುಪ್ರೀಂ ಕೋರ್ಟ್ ತಾತ್ಕಾಲಿಕ ತಡೆ ನೀಡಿದೆ. ರಾಮನ್ ಮ್ಯಾಗ್ಸಸೆ ಪ್ರಶಸ್ತಿ ವಿಜೇತ ಬೆಜ್ವಾಡ ವಿಲ್ಸನ್, ಕೇರಳದ ಮಾಜಿ ಸಚಿವ ಬಿನೋಯ್ ವಿಶ್ವಂ ಹಾಗೂ ನಿವೃತ್ತ ಸೇನಾಧಿಕಾರಿ ಎಸ್.ಜಿ. ವಂಬಟ್ಕರೆ ಅವರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎ.ಕೆ. ಸಿಕ್ರಿ ಮತ್ತು ಅಶೋಕ್ ಭೂಷಣ್ ನೇತೃತ್ವದ ದ್ವಿಸದಸ್ಯ ಪೀಠ ಅರ್ಜಿ ವಿಚಾರಣೆಯನ್ನು ತಾತ್ಕಾಲಿಕ ಮುಂದೂಡಿದೆ. ಆ ಮೂಲಕ ಆದಾಯ ತೆರಿಗೆ ಸಲ್ಲಿಕೆಗೆ ಆಧಾರ್ ಕಾರ್ಡ್ ಕಡ್ಡಾಯ ವಿಚಾರಕ್ಕೂ ತಾತ್ಕಾಲಿಕ ತಡೆ ನೀಡಿದಂತಾಗಿದೆ. ನಕಲಿ ಪ್ಯಾನ್ ಕಾರ್ಡ್ ದೇಶದ ಬೆಳವಣಿಗೆಯಲ್ಲಿ ದೊಡ್ಡ ಬೆದರಿಕೆಯಾಗಿದ್ದು, ಅದರ ತಡೆಗೆ ಸಂಸತ್ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ರೋಹನ್ ಬೋಪಣ್ಣಗೆ ಅರ್ಜುನ ಪ್ರಶಸ್ತಿಗೆ ಶಿಫಾರಸು
ನವದೆಹಲಿ, ಜೂ. 9: ಪ್ಯಾರಿಸ್‍ನಲ್ಲಿ ಫ್ರೆಂಚ್ ಓಪನ್ ಕಿರೀಟ ಮುಡಿಗೇರಿಸಿಕೊಂಡ ಭಾರತದ ಹೆಮ್ಮೆಯ ಟೆನಿಸ್ ಪಟು, ಕರುನಾಡ ಕುವರ ರೋಹನ್ ಬೋಪಣ್ಣ ಅವರ ಹೆಸರನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಲು ಅಖಿಲ ಭಾರತ ಟೆನಿಸ್ ಸಂಸ್ಥೆ(ಎಐಟಿಎ) ನಿರ್ಧರಿಸಿದೆ. ಬೋಪಣ್ಣ ಅವರು ನಿನ್ನೆಯಷ್ಟೆ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಮಿಶ್ರ ಡಬಲ್ಸ್ ವಿಭಾಗದಲ್ಲಿ ಕೆನಡಾದ ಗೇಬ್ರಿಯೆಲಾ ದಬ್ರೋವ್ಸ್ಕಿ ಜೊತೆ ಗೆಲುವು ಸಾಧಿಸಿದ್ದರು. ಈ ಮೂಲಕ ಲಿಯಾಂಡರ್ ಫೇಸ್, ಮಹೇಶ್ ಭೂಪತಿ, ಸಾನಿಯಾ ಮಿರ್ಜಾ ಬಳಿಕ ಈ ಸಾಧನೆ ಮಾಡಿದ ನಾಲ್ಕನೇ ಭಾರತೀಯ ಟೆನಿಸ್ ಪಟು ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಅರ್ಜುನ ಪ್ರಶಸ್ತಿಗೆ ರೋಹನ್ ಬೋಪಣ್ಣ ಅವರನ್ನು ಹೆಸರನ್ನು ಇಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುತ್ತೇವೆ. ಈ ಹಿಂದೆಯೂ ಹಲವು ಬಾರಿ ಅರ್ಜುನ ಪ್ರಶಸ್ತಿಗೆ ರೋಹನ್ ಬೋಪಣ್ಣ ಅವರ ಹೆಸರನ್ನು ಶಿಫಾರಸು ಮಾಡಿದ್ದೇವೆ. ಆದರೆ ಅವರ ಹೆಸರನ್ನು ಪರಿಗಣಿಸಿಲ್ಲ.
ಶೀಘ್ರದಲ್ಲೆ ವಿಶ್ವನಾಥ್ ಕಾಂಗ್ರೆಸ್‍ಗೆ ರಾಜೀನಾಮೆ
ಮೈಸೂರು, ಜೂ. 9: ರಾಜ್ಯ ಕಾಂಗ್ರೆಸ್ ನಾಯಕರ ವರ್ತನೆಯಿಂದ ಬೇಸತ್ತಿರುವ ಮಾಜಿ ಸಂಸದ ಹೆಚ್. ವಿಶ್ವನಾಥ್ ಶೀಘ್ರದಲ್ಲೇ ಕಾಂಗ್ರೆಸ್‍ಗೆ ರಾಜೀನಾಮೆ ನೀಡುವದಾಗಿ ಹೇಳಿದ್ದಾರೆ. ಇಂದು ಕೆ.ಆರ್. ನಗರದಲ್ಲಿ ಅಭಿಮಾನಿಗಳು ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಹಿರಿಯ ಕಾಂಗ್ರೆಸ್ ನಾಯಕ ಹೆಚ್. ವಿಶ್ವನಾಥ್ ಅವರು, ಅತ್ಯಂತ ನೋವಿನಿಂದ ಪಕ್ಷ ತೊರೆಯಬೇಕಾದ ಪರಿಸ್ಥಿತಿ ಬಂದಿದೆ. ರಾಜೀನಾಮೆ ನೀಡುವ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಮಯ ಈಗ ಬಂದಿದೆ ಎಂದು ಹೇಳಿದ್ದಾರೆ. ಕಾಂಗ್ರೆಸ್‍ಗೆ ರಾಜೀನಾಮೆ ನೀಡಿದ ನಂತರ ಮುಂದೆ ಯಾವ ಪಕ್ಷ ಸೇರಬೇಕು ಎಂಬದರ ಬಗ್ಗೆ ಯಾವದೇ ನಿರ್ಧಾರ ತೆಗೆದುಕೊಂಡಿಲ್ಲ. ಈ ಕುರಿತು, ಅಭಿಮಾನಿಗಳು, ಸ್ನೇಹಿತರು ಹಾಗೂ ಹಿತೈಷಿಗಳೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವದಾಗಿ ಮಾಜಿ ಸಂಸದರು ತಿಳಿಸಿದ್ದಾರೆ. ಅವರು ಇತ್ತೀಚಿಗೆ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದು, ಮೈಸೂರು ನಗರದಲ್ಲಿ ಶಕ್ತಿ ಪ್ರದರ್ಶನದ ಮೂಲಕವೇ ವಿಶ್ವನಾಥ್ ಅವರೊಂದಿಗೆ ಹಳೆ ಮೈಸೂರು ಭಾಗದ ಅವರ ಬೆಂಬಲಿಗರನ್ನು ಪಕ್ಷಕ್ಕೆ ಸ್ವಾಗತಿಸಲು ಜೆಡಿಎಸ್ ನಾಯಕರು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
ಮುಂದಿನ 2 ದಿನಗಳಲ್ಲಿ ರಾಜ್ಯಕ್ಕೆ ಮಳೆ
ಬೆಂಗಳೂರು, ಜೂ. 9: ಮುಂದಿನ ಎರಡು ದಿನಗಳಲ್ಲಿ ರಾಜ್ಯಕ್ಕೆ ನೈರುತ್ಯ ಮುಂಗಾರು ಪ್ರವೇಶಿಸಲಿದೆ. ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ವಾಡಿಕೆಗಿಂತ 2 ದಿನ ಮೊದಲೇ ಮುಂಗಾರು ಕೇರಳವನ್ನು ಪ್ರವೇಶಿಸಿತ್ತು. ಆದರೆ, ಮುಂಗಾರು ದುರ್ಬಲಗೊಂಡಿದೆ. ರಾಜ್ಯದ ಕರಾವಳಿ ಭಾಗದಲ್ಲಿ ಬುಧವಾರ ಮುಂಗಾರು ಪ್ರವೇಶಿಸುವ ಸಾಧ್ಯತೆ ಇದೆ ಎಂದು ಐಎಂಡಿ ನಿರ್ದೇಶಕ ಸುಂದರ್ ಮಹದೇವ್ ಹೇಳಿದ್ದಾರೆ. ಮುಂದಿನ ಎರಡು ದಿನಗಳಲ್ಲಿ ಇಡೀ ರಾಜ್ಯ ಮುಂಗಾರು ಮಳೆಗೆ ಸಾಕ್ಷಿಯಾಗಲಿದೆ. ಕಳೆದ ಕೆಲವು ದಿನಗಳಿಂದ ರಾಜ್ಯದ ಕರಾವಳಿ ಭಾಗದಲ್ಲಿ ಹೆಚ್ಚು ಮಳೆಯಾಗಿದೆ. ದಕ್ಷಿಣ ಹಾಗೂ ಕರಾವಳಿ ಭಾಗದಲ್ಲಿ ಸುಮಾರು 13 ಸೆಂ.ಮೀ. ಮಳೆಯಾಗಿದೆ. ಈ ವೇಳೆ ಸರಿಯಾದ ವೇಳೆಗೆ ರಾಜ್ಯಕ್ಕೆ ಮುಂಗಾರು ಪ್ರವೇಶಿಸಲಿದೆ, ದಕ್ಷಿಣ ಭಾರತದಲ್ಲಿ ಉತ್ತಮ ಮಳೆಯಾಗಲಿದೆ.
ವಿಮಾನ ಪ್ರಯಾಣಕ್ಕೆ ಆಧಾರ್ ಕಡ್ಡಾಯ
ನವದೆಹಲಿ, ಜೂ. 9: ಮಹತ್ವದ ಬೆಳವಣಿಗೆಯಲ್ಲಿ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ವಿಮಾನ ಪ್ರಯಾಣ ಅಥವಾ ವಿಮಾನ ಪ್ರಯಾಣ ಟಿಕೆಟ್ ಬುಕಿಂಗ್‍ಗೆ ಆಧಾರ್ ಅಥವಾ ಪ್ಯಾನ್ ಕಾರ್ಡ್ ನಂತಹ ಶಾಶ್ವತ ಗುರುತಿನ ಚೀಟಿ ಕಡ್ಡಾಯ ಮಾಡಲು ನಿರ್ಧರಿಸಿದೆ. ಕೇಂದ್ರ ಸರ್ಕಾರ ರಚನೆ ಮಾಡಿದ್ದ ತಾಂತ್ರಿಕ ಸಮಿತಿಯ ಶಿಫಾರಸ್ಸಿನ ಮೇರೆಗೆ ಇಂತಹುದೊಂದು ನಿಯಮ ಜಾರಿಗೆ ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಇನ್ನು ಮೂರು ಅಥವಾ ನಾಲ್ಕು ತಿಂಗಳಲ್ಲಿ ದೇಶಾದ್ಯಂತ ನಿಯಮ ಜಾರಿಗೆ ತರಲು ಚಿಂತನೆ ನಡೆಸಿದೆ. ಅಂತೆಯೇ ಇನ್ನು 30 ದಿನಗಳೊಳಗೆ ನಿಯಮಕ್ಕೆ ಸಂಬಂಧಿಸಿದಂತೆ ಶ್ವೇತಪತ್ರ ಹೊರಡಿಸಲೂ ಕೂಡ ಕೇಂದ್ರ ಸರ್ಕಾರ ಮುಂದಾಗಿದೆ. ಅದರಂತೆ ಇನ್ನು ಮುಂದೆ ದೇಶದ ಯಾವದೇ ಪ್ರಜೆ ಕೂಡ ವಿಮಾನದಲ್ಲಿ ಪ್ರಯಾಣಿಸಲು ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಅಥವಾ ಪಾಸ್ ಪೆÇೀರ್ಟ್‍ಗಳನ್ನು ಗುರುತಿನ ಚೀಟಿಯಾಗಿ ನೀಡಬೇಕು.
ಸಿಪಿಐಎಂ ಕಚೇರಿ ಮೇಲೆ ಬಾಂಬ್ ಧಾಳಿ
ಕೊಝಿಕೋಡ್, ಜೂ. 9: ಕೇರಳ ಸಿಪಿಐ (ಎಂ) ಸಮಿತಿ ಕಚೇರಿ ಮೇಲೆ ಅನಾಮಧೇಯ ವ್ಯಕ್ತಿಗಳು ಸ್ಟೀಲ್ ಬಾಂಬ್ ಧಾಳಿ ನಡೆಸಿದ್ದಾರೆ. ಕಳೆದ ರಾತ್ರಿ 12.45 ರ ಸುಮಾರಿಗೆ ಸಿಪಿಐ (ಎಂ) ಕಚೇರಿ ಮೇಲೆ ಬಾಂಬ್ ಧಾಳಿ ನಡೆಸಲಾಗಿದ್ದು, ಘಟನೆಯಲ್ಲಿ ಯಾವದೇ ಸಾವು-ನೋವುಗಳಾಗಲೀ, ನಷ್ಟಗಳಾಗಲೀ ಸಂಭವಿಸಿಲ್ಲ. ಕೆಲವು ದಿನಗಳ ಹಿಂದಷ್ಟೇ ತಿರುವನಂತಪುರಂನಲ್ಲಿರುವ ಬಿಜೆಪಿ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ಎಸೆಯಲಾಗಿತ್ತು. ಇದರ ಬೆನ್ನಲ್ಲೇ ಇದೀಗ ಸಿಪಿಐ (ಎಂ) ಕಚೇರಿ ಮೇಲೆ ಸ್ಟೀಲ್ ಬಾಂಬ್ ಧಾಳಿ ನಡೆಸಲಾಗಿದೆ. ಸ್ಟೀಲ್ ಬಾಂಬ್ ಧಾಳಿಗೆ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿರುವ ಸಿಪಿಐ (ಎಂ) ನಾಯಕರು ಮುಷ್ಕರಕ್ಕೆ ಕರೆ ನೀಡಿದ್ದಾರೆ.
ಇಸಿಇಸ್‍ನಿಂದ ಚೀನಾದ ಇಬ್ಬರು ಶಿಕ್ಷಕರ ಹತ್ಯೆ
ಕ್ವೆಟ್ಟಾ, ಜೂ. 9: ಪಾಕಿಸ್ತಾನದಲ್ಲಿದ್ದ ಚೀನಾದ ಇಬ್ಬರು ಶಿಕ್ಷಕರನ್ನು ಅಪಹರಿಸಿ ಹತ್ಯೆ ಮಾಡಿರುವದಾಗಿ ಇಸ್ಲಾಮಿಕ್ ಉಗ್ರ ಸಂಘಟನೆ ಹೇಳಿದೆ. ಚೀನಾ-ಪಾಕಿಸ್ತಾನ ಎಕಾನಾಮಿಕ್ ಕಾರಿಡಾರ್ ಯೋಜನೆ(ಸಿಪಿಇಸಿ)ಗಾಗಿ ಚೀನಾ ಪಾಕಿಸ್ತಾನದೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದ್ದು, ಪಾಕ್‍ನಲ್ಲಿರುವ ತನ್ನ ನೌಕರರ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಆದರೆ ಈ ಘಟನೆ ಚೀನಾವನ್ನು ವಿಚಲಿತಗೊಳಿಸಿದ್ದು, ಚೀನಾದ ಮುಂದಿನ ನಡೆ ಕುತೂಹಲ ಮೂಡಿಸಿದೆ. ತನ್ನ ಪರಮಾಪ್ತ ರಾಷ್ಟ್ರದಲ್ಲಿ ತನ್ನದೇ ಇಬ್ಬರು ಪ್ರಜೆಗಳನ್ನು ಉಗ್ರರು ಅಪಹರಿಸಿ ಕೊಂದಿರುವ ವರದಿಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚೀನಾ, ಶಿಕ್ಷಕರನ್ನು ಅಪಹರಿಸಿ ಹತ್ಯೆ ಮಾಡಿರುವದರ ಬಗೆಗಿನ ವರದಿ ಆತಂಕಕಾರಿಯಾಗಿದೆ.
17 ತಿಂಗಳ ನಂತರ ಮೋದಿ-ಷರೀಫ್ ಭೇಟಿ
ಕಜಕಿಸ್ತಾನ, ಜೂ. 9: ಬರೋಬ್ಬರಿ 17 ತಿಂಗಳ ನಂತರ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಭೇಟಿಯಾಗಿ ಶುಭಾಶಯ ವಿನಿಮಯ ಮಾಡಿಕೊಂಡಿದ್ದಾರೆ. ಕಜಕಿಸ್ತಾನದ ರಾಜಧಾನಿ ಅಸ್ತಾನದಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಘದ(ಎಸ್ಸಿಒ) ಶೃಂಗ ಸಭೆಗಾಗಿ ಆಗಮಿಸಿರುವ ಭಾರತ, ಪಾಕಿಸ್ತಾನ ಪ್ರಧಾನ ಮಂತ್ರಿಗಳು ಇಲ್ಲಿನ ಒಪೆರಾ ಹೌಸ್‍ನಲ್ಲಿ ಭೇಟಿಯಾಗಿದ್ದಾರೆ.
ತಂಬಾಕು ಸೇವಿಸುವವರ ಸಂಖ್ಯೆಯಲ್ಲಿ ಇಳಿಕೆ
ನವದೆಹಲಿ, ಜೂ. 9: ದೇಶದ ಒಟ್ಟು ತಂಬಾಕು ಸೇವಿಸುವವರ ಸಂಖ್ಯೆಯಲ್ಲಿ 81 ಲಕ್ಷದಷ್ಟು ಇಳಿಕೆಯಾಗಿರುವದು ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಅಂಕಿ-ಅಂಶಗಳಿಂದ ತಿಳಿದುಬಂದಿದೆ. ಈ ಪೈಕಿ ತಂಬಾಕು ಸೇವಿಸುವ ಯುವ ಜನರ ಪ್ರಮಾಣ ಕಳೆದ ಕೆಲ ವರ್ಷಗಳಲ್ಲಿ ಗಣನೀಯವಾಗಿ ಇಳಿಕೆಯಾಗಿದೆ. 15 ವರ್ಷ ವಯಸ್ಸಿನಿಂದ 24 ವರ್ಷ ವಯಸ್ಸಿನ ಒಳಗಿನ ತಂಬಾಕು ಸೇವಿಸುವವರ ಪ್ರಮಾಣ 2016-17ನೇ ಸಾಲಿನಲ್ಲಿ ಶೇ. 12.4 ಕ್ಕೆ ಇಳಿಕೆಯಾಗಿದೆ. ಇದು 2009-10ರಲ್ಲಿ ಶೇ. 18.4 ರಷ್ಟಿತ್ತು. ‘ತಂಬಾಕು ಸೇವಿಸುವ ಯುವ ಜನರ ಪ್ರಮಾಣ ಇಳಿಕೆಯಾಗಿರುವದು ಸಂತಸ ಮೂಡಿಸಿದೆ’ ಎಂದು ಆರೋಗ್ಯ ಸಚಿವ ಜೆ.ಪಿ. ನಡ್ಡಾ ತಿಳಿಸಿದ್ದಾರೆ.