ಮಡಿಕೇರಿ, ಜೂ. 9: ಟೆನ್ನಿಸ್ ಆಟದಲ್ಲಿ ಸಾಧನೆ ತೋರುವದು ಹೇಳಿದಷ್ಟು ಸುಲಭವಲ್ಲ. ಇದರಲ್ಲಿ ಅಪಾರ ಪರಿಶ್ರಮವಿದೆ. ಸತತ 14 ವರ್ಷಗಳ ಸುದೀರ್ಘ ಅವಧಿಯ ಪರಿಶ್ರಮಪಟ್ಟಿರುವ ಭಾರತದ ಖ್ಯಾತ ಟೆನ್ನಿಸ್ ಆಟಗಾರ ಕೊಡಗಿನ ಯುವಕ ಮಚ್ಚಂಡ ರೋಹನ್ ಬೋಪಣ್ಣ ಅವರಿಗೆ ಕೊನೆಗೂ ದೊಡ್ಡ ಯಶಸ್ಸೊಂದು ದೊರೆತಿದ್ದು, ಇದು ಕ್ರೀಡಾ ಜಿಲ್ಲೆ ಎಂಬ ಖ್ಯಾತಿಯ ಕೊಡಗಿಗೆ ಮತ್ತೊಂದು ಹೆಮ್ಮೆಯ ಗರಿಯಾಗಿದೆ.
14 ವರ್ಷದ ಅವಿರತ ಶ್ರಮದ ಬಳಿಕ ರೋಹನ್ ಬೋಪಣ್ಣ ವೃತ್ತಿ ಜೀವನದಲ್ಲಿ ಚೊಚ್ಚಲ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳಿಸುವದರ ಮೂಲಕ ದೇಶಕ್ಕೆ ಕೀರ್ತಿ ತಂದಿದ್ದಾರೆ. ಕೊಡಗಿನ ಮಾದಾಪುರ ಮೂಲದ ರೋಹನ್ ಪ್ರತಿಷ್ಠಿತ ಫ್ರೆಂಚ್ ಓಪನ್ ಟೂರ್ನಿಯ ಮಿಶ್ರ ಡಬಲ್ಸ್ ಚಾಂಪಿಯನ್‍ಶಿಪ್‍ನಲ್ಲಿ ಜತೆಗಾರ್ತಿ ಕೆನಡಾದ ಗ್ಯಾಬ್ರಿಯೆಲಾದಬ್ರೋಸ್ಕಿ ಅವರೊಂದಿಗೆ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ. ಈ ಸಾಧನೆ ಮಾಡಿರುವ ಪ್ರಥಮ ಕನ್ನಡಿಗ ಎಂಬ ಕೀರ್ತಿಗೂ ಇವರು ಪಾತ್ರರಾಗಿದ್ದಾರೆ.
ವೃತ್ತಿ ಜೀವನದಲ್ಲಿ ಎರಡನೇ ಬಾರಿಗೆ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಹಂತಕ್ಕೆ ತಲಪಿರುವ ರೋಹನ್, ಎರಡನೇ ಬಾರಿ ದೊರೆತ ಅವಕಾಶದಲ್ಲಿ ಯಶಸ್ಸು ಕಂಡಿದ್ದಾರೆ. ಈ ಮೂಲಕ ಮಹೇಶ್ ಭೂಪತಿ, ಲಿಯಾಂಡರ್ ಪೇಸ್ ಮತ್ತು ಸಾನಿಯಾ ಮಿರ್ಜಾ ಬಳಿಕ ಇದೀಗ ಗ್ರ್ಯಾಂಡ್ ಸ್ಲಾಂ ಪ್ರಶಸ್ತಿ ಗಳಿಸಿರುವ ದೇಶದ 4ನೇ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಈ ಹಿಂದೆ 2010ರಲ್ಲಿ ಯು.ಎಸ್. ಓಪನ್ ಟೂರ್ನಿಯಲ್ಲಿ ಪಾಕಿಸ್ತಾನದ ಖುರೈಷಿ ಜೋಡಿಯೊಂದಿಗೆ ಪ್ರಶಸ್ತಿ ಹಂತಕ್ಕೆ ತಲುಪಿದ್ದ ರೋಹನ್ ಫೈನಲ್‍ನಲ್ಲಿ ಅಮೇರಿಕಾದ ಬಾಬ್ - ಮೈಕ್ ಜೋಡಿ ಎದುರು ಸೋಲು ಅನುಭವಿಸಿ ನಿರಾಶೆಗೊಳಗಾಗಿದ್ದರು. ಇದೀಗ 7 ವರ್ಷಗಳ ಬಳಿಕ ಪ್ಯಾರೀಸ್‍ನಲ್ಲಿ ಗುರುವಾರ ನಡೆದ ಫೈನಲ್‍ನಲ್ಲಿ ವಿಶ್ವದ 7ನೇ ಶ್ರೇಯಾಂಕದ ಇಂಡೋ - ಕೆನಡಾ ಜೋಡಿಯಾದ ರೋಹನ್ ಹಾಗೂ ಗ್ಯಾಬ್ರಿಯೆಲಾ, ಜರ್ಮನಿಯ ಅನ್ನಾಲೀನಾ ಗ್ರೋಯೆನ್ ಫೆಲ್ಡ್ ಹಾಗೂ ಕೊಲಂಬಿಯಾದ ರಾಬರ್ಟ್ ಫರಾ ಜೋಡಿಯನ್ನು ಒಂದು ಗಂಟೆ ಆರು ನಿಮಿಷ ಹೋರಾಟದಲ್ಲಿ 2-6, 6-2, 12-10 ರಿಂದ ಸೋಲಿಸುವ ಮೂಲಕ ಪ್ರತಿಷ್ಠಿತ ಫ್ರೆಂಚ್ ಓಪನ್ ಗ್ರಾಂಡ್ ಸ್ಲಾಂ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಪೋಷಕರ ಹರ್ಷ
ಪುತ್ರನ ಸಾಧನೆ ಬಗ್ಗೆ ಅವರ ಪೋಷಕರು ಹರ್ಷ ವ್ಯಕ್ತಪಡಿಸಿದ್ದಾರೆ. ತುಂಬ ಸಂತಸವಾಗಿದೆ ಕನಸು ನನಸಾಗಿದೆ. ಎಷ್ಟೋ ವರ್ಷಗಳ ಪರಿಶ್ರಮಕ್ಕೆ ಇದೀಗ ಪ್ರತಿಫಲ ದೊರೆತಂತಾಗಿದ್ದು, ವಿಶ್ವಮಟ್ಟದಲ್ಲಿ ಭಾರತವನ್ನು ಗುರುತಿಸುವಂತಹ ಮಾಡಿದ ಪುತ್ರನ ಸಾಧನೆ ಬಗ್ಗೆ ಹೆಮ್ಮೆಯಾಗಿರುವದಾಗಿ ಮಾದಾಪುರದಲ್ಲಿರುವ ರೋಹನ್ ಅವರ ತಾಯಿ ಮಲ್ಲಿಕಾ ಬೋಪಣ್ಣ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದರು.
-ಶಶಿ ಸೋಮಯ್ಯ