ಮಡಿಕೇರಿ, ಜೂ. 9: ಕೊಡಗು ಜಿಲ್ಲೆಯಲ್ಲಿ ವಸತಿ ರಹಿತರ ಬಗ್ಗೆ ಸದನದಲ್ಲಿ ಶಾಸಕ ಕೆ.ಜಿ. ಬೋಪಯ್ಯ ಪ್ರಶ್ನೆಗೆ ವಸತಿ ಸಚಿವ ಎಂ. ಕೃಷ್ಣಪ್ಪ ಮಾಹಿತಿ ನೀಡಿ, ಜಿಲ್ಲೆಯಲ್ಲಿ 9,786 ನಿವೇಶನ ರಹಿತರು ಇರುವದು ಕಂಡು ಬಂದಿದೆ. ಗ್ರಾಮೀಣ ನಿವೇಶನ ಯೋಜನೆಯಡಿ 1,402, ವಾಜಪೇಯಿ ನಗರ ನಿವೇಶನ ಯೋಜನೆಯಡಿ 165 ನಿವೇಶನಗಳು ಹೀಗೆ ಒಟ್ಟು 1567 ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಉತ್ತರ ನೀಡಿದರು. ಜಿಲ್ಲೆಯಲ್ಲಿ ಒಟ್ಟಾರೆ 9,786 ನಿವೇಶನ ರಹಿತರಿಗೆ ಹಕ್ಕು ಪತ್ರ ನೀಡಲು ಬಾಕಿ ಇದ್ದು, ಬಾಕಿ ಇರುವ ನಿವೇಶನ ರಹಿತರಿಗೆ ನಿವೇಶನ ಸಹಿತ ವಸತಿ ಸ್ಥಳೀಯವಾಗಿ ಲಭ್ಯವಾಗಿರುವ ಸರ್ಕಾರಿ ಜಮೀನನ್ನು ಗುರುತಿಸಿ ನಿವೇಶನ ಹಂಚಿಕೆ ಮಾಡಲಾಗುತ್ತಿದೆ. ಸರ್ಕಾರಿ ಜಮೀನು ಲಭ್ಯವಿಲ್ಲದ ಕಡೆಗಳಲ್ಲಿ ವಸತಿಗೆ ಸೂಕ್ತವಾದ ಖಾಸಗಿ ಜಮೀನನ್ನು ಭೂ ಮಾಲೀಕರ ಸಹಮತದೊಂದಿಗೆ ಖರೀದಿಸಲು ಜಿಲ್ಲಾಧಿಕಾರಿ ಅವರ ನೇತೃತ್ವದಲ್ಲಿ ಜಿಲ್ಲಾ ಸಮಿತಿ ರಚಿಸಲಾಗಿದ್ದು, ಆ ಮೂಲಕ ಭೂಮಿ ಖರೀದಿಸುವ ಪ್ರಕ್ರಿಯೆ ನಡೆಯಲಿದೆ ಎಂದು ಸಚಿವರು ತಿಳಿಸಿದ್ದಾರೆ.

ಜಿಲ್ಲೆಯ ವೀರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 2009 ರಲ್ಲಿ ಒಳಾಂಗಣ ಕ್ರೀಡಾಂಗಣಕ್ಕೆ ಮುಂಗಡ ಪತ್ರ ಘೋಷಣೆಯಾಗಿದ್ದರೂ ಕಾಮಗಾರಿ ಅರ್ಧದಲ್ಲೇ ನಿಂತು ಸೌಕರ್ಯ ಒದಗಿಸಲು ಹೋಗಿದ್ದು, ಕ್ರೀಡಾಪಟುಗಳಿಗೆ ತೊಂದರೆಯಾಗುತ್ತಿರುವದರಿಂದ ಕಾಮಗಾರಿಯನ್ನು ಪೂರ್ಣ ಗೊಳಿಸಲು ಕೆ.ಜಿ. ಬೋಪಯ್ಯ ಅವರು ಕ್ರೀಡಾ ಸಚಿವರ ಗಮನ ಸೆಳೆದಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಕ್ರೀಡಾ ಸಚಿವರು ಈಗಾಗಲೇ ವಿವಿಧ ಹಂತದಲ್ಲಿ ಹಣ ಬಿಡುಗಡೆಯಾಗಿದ್ದು, ಒಳಾಂಗಣ ಕ್ರೀಡಾಂಗಣ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ. ಆದರೆ ಕಾಮಗಾರಿ ನಿರೀಕ್ಷಿತ ಪ್ರಗತಿ ಸಾಧಿಸದಿರುವದಕ್ಕೆ ಸಂಬಂಧಪಟ್ಟ ಗುತ್ತಿಗೆದಾರರಿಗೆ ನೋಟೀಸು ಜಾರಿ ಮಾಡಲಾಗಿದೆ. ಈ ಪ್ರಸ್ತುತ ಸಾಲಿನಲ್ಲಿಯೇ ಕಾಮಗಾರಿ ಪೂರ್ಣಗೊಳಿಸಲಾಗುವದು ಎಂದು ತಿಳಿಸಿದ್ದಾರೆ.