ಮಡಿಕೇರಿ, ಜೂ. 9: ಅಂತರ್ರಾಷ್ಟ್ರೀಯ ಯೋಗ ದಿನಾಚರಣೆಯನ್ನು ತಾ. 21 ರಂದು ಆಚರಿಸಬೇಕಿದ್ದು, ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಆಯುಷ್ ಅಧಿಕಾರಿ ರಾಮಚಂದ್ರ ಅವರು ಮಾಹಿತಿ ನೀಡಿ ಅಂತರ್ರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಯೋಗ ಪ್ರದರ್ಶನ ಕಾರ್ಯಕ್ರಮವನ್ನು ಆಯೋಜಿಸ ಬೇಕಿದ್ದು, ಅದಕ್ಕಾಗಿ ಅಗತ್ಯ ಸಹಕಾರಕ್ಕೆ ಮನವಿ ಮಾಡಿದರು.
ಯೋಗ ದಿನಾಚರಣೆ ಆಚರಿಸುವ ಸಂಬಂಧ ನಗರದಲ್ಲಿ ಯಾವದಾದರೂ ಉದ್ಯಾನವನಕ್ಕೆ ‘ಯೋಗ ಉದ್ಯಾನವನ’ ಎಂದು ನಾಮ ನಿರ್ದೇಶನ ಮಾಡಬೇಕಿದೆ. ಆ ನಿಟ್ಟಿನಲ್ಲಿ ಅಗತ್ಯ ಸಹಕಾರ ನೀಡುವಂತೆ ಪೌರಾಯುಕ್ತರಲ್ಲಿ ಮನವಿ ಮಾಡಿದರು.
ಆರ್ಟ್ ಆಫ್ ಲಿವಿಂಗ್ ವತಿಯಿಂದ ಶಾಲಾ-ಕಾಲೇಜುಗಳಲ್ಲಿ ಯೋಗ ಉಚಿತ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ. ಯೋಗ ದಿನಾಚರಣೆ ಯಶಸ್ಸುಗೊಳಿಸುವ ನಿಟ್ಟಿನಲ್ಲಿ ತಾ.ಪಂ. ಇಓಗಳನ್ನು ಕಾರ್ಯಕ್ರಮದ ಅನುಷ್ಠಾನ ಅಧಿಕಾರಿಯಾಗಿ ನಿಯೋಜಿಸಲಾಗಿದೆ. ಗ್ರಾ.ಪಂ. ಮಟ್ಟದಲ್ಲಿ ಪಿಡಿಓಗಳನ್ನು ನೋಡೆಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಯೋಗ ದಿನಾಚರಣೆ ಸಂದರ್ಭ ನಗದು ಬಹುಮಾನ, ಸ್ಮರಣಿಕೆ, ಪ್ರಶಸ್ತಿ ಪತ್ರವನ್ನು ಯೋಗ ದಿನಾಚರಣೆ ಅಂಗವಾಗಿ ಗ್ರಾ.ಪಂ., ತಾಲೂಕು ಹಾಗೂ ಜಿಲ್ಲಾಮಟ್ಟದಲ್ಲಿ ಬಹುಮಾನ ನೀಡಬೇಕಿದೆ ಎಂದರು. ಆರ್ಟ್ ಆಫ್ ಲಿವಿಂಗ್, ಟೀಚರ್ಸ್ ಕೋ ಆರ್ಡಿನೇಟರ್ ರಾಜಪ್ಪ, ಡಿಡಿಸಿ ಆರ್ಟ್ ಲಿವಿಂಗ್ ಆಗಿರುವ ಕೆ.ಡಬ್ಲ್ಯೂ. ಬೋಪಯ್ಯ, ಯೋಗ ಶಿಕ್ಷಕ ಮಹೇಶ್ ಕುಮಾರ್ ನೇತೃತ್ವದಲ್ಲಿ ಅಂತರ್ರಾಷ್ಟ್ರೀಯ ಯೋಗ ದಿನಾಚರಣೆಗೂ ಮೊದಲು ತಾ. 18 ರಂದು ಬೆಳಿಗ್ಗೆ 7 ಗಂಟೆಗೆ ನಗರದ ಪ್ರಮುಖ ರಸ್ತೆಗಳಲ್ಲಿ ಯೋಗ ಜಾಥಾ ನಡೆಯಲಿದೆ ಎಂದು ಜಿಲ್ಲಾ ಆಯುಷ್ ಅಧಿಕಾರಿ ರಾಮಚಂದ್ರ ಮಾಹಿತಿ ನೀಡಿದರು. ಸಭೆಯಲ್ಲಿ ನಗರಸಭೆ ಪೌರಾಯುಕ್ತೆ ಬಿ. ಶುಭಾ, ಬಿ.ಸಿ.ಎಂ. ಅಧಿಕಾರಿ ಕೆ.ವಿ. ಸುರೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶಿವಕುಮಾರ, ಜಿಲ್ಲಾಸ್ಪತ್ರೆಯ ಡಾ. ಶುಭಾ, ಜಿಲ್ಲಾ ಉದ್ಯೋಗಾಧಿಕಾರಿ ಸಿ. ಜಗನ್ನಾಥ, ಕೆ.ಡಬ್ಲ್ಯೂ. ಬೋಪಯ್ಯ, ರಾಜಪ್ಪ, ಮಹೇಶ್ ಕುಮಾರ್ ಇತರರು ಇದ್ದರು.