ಶ್ರೀಮಂಗಲ, ಜೂ. 9: ಕುಟ್ಟ ಗ್ರಾ.ಪಂ. ವ್ಯಾಪ್ತಿಯ ನಾತಂಗಲ್, ಉಳ್ಳಿಪಾರೆಯ 40 ಕುಟುಂಬಗಳಿಗೆ ಕುಡಿಯುವ ನೀರಿನ ಸಂಪರ್ಕವನ್ನು ಗ್ರಾ.ಪಂ.ನಿಂದ ಕಡಿತ ಮಾಡಲಾಗಿದೆ ಎಂದು ಕುಟ್ಟದ ಗ್ರಾಮಸ್ಥರಾದ ರೆನ್ನಿ ಹಾಗೂ ಇತರರು ಮಾಡಿರುವ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಕುಟ್ಟ ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಮತ್ತು ಪಿ.ಡಿ.ಓ. ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಸ್ಥಳಕ್ಕೆ ಮಾಧ್ಯಮದವರನ್ನು ಭೇಟಿ ಮಾಡಿ ವಾಸ್ತವಾಂಶವನ್ನು ವಿವರಿಸಿದ್ದಾರೆ. ಕುಟ್ಟ ಗ್ರಾ.ಪಂ. ವ್ಯಾಪ್ತಿಯಲ್ಲಿ ಗ್ರಾ.ಪಂ.ನಿಂದ ಕುಡಿಯುವ ನೀರಿನ ಸಂಪರ್ಕ ಪಡೆಯಲು ರೂ. 2 ಸಾವಿರ ಪಾವತಿಸಬೇಕಾಗಿದೆ. ನಂತರ ಪ್ರತಿ ತಿಂಗಳು ರೂ.100 ಶುಲ್ಕ ನೀಡಬೇಕಾಗಿದೆ. ಅದರಂತೆ ನಾತಂಗಲ್ ಹಾಗೂ ಉಳ್ಳಿಪಾರೆಯ ಹಲವಾರು ನಿವಾಸಿಗಳಿಗೆ ಬೋರ್‍ವೆಲ್‍ನಿಂದ ನೀರನ್ನು ಟ್ಯಾಂಕ್‍ಗೆ ಸಂಪರ್ಕ ನೀಡಿ ಟ್ಯಾಂಕ್‍ನಿಂದ ಸಂಪರ್ಕ ಹೊಂದಿಕೊಂಡಿರುವ ಕುಟುಂಬಗಳಿಗೆ ಪೈಪ್‍ಲೈನ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಗ್ರಾ.ಪಂ. ಮೇಲೆ ಆರೋಪ ಮಾಡಿರುವ ರೆನ್ನಿ ರೂ. 2 ಸಾವಿರ ಪಾವತಿಸದೆ ಸಂಪರ್ಕ ಪಡೆದುಕೊಂಡಿದ್ದು, ನಿಯಮಾನುಸಾರ ನೋಟೀಸ್ ಜಾರಿ ಮಾಡಿ, ಮುಂಗಡ ಪಾವತಿಸಲು ಕೇಳಿದ್ದರೂ ಅದಕ್ಕೆ ಸ್ಪಂದಿಸಿಲ್ಲ. ಈ ಹಿನ್ನೆಲೆ ಒಂದು ಸಂಪರ್ಕವನ್ನು ಮಾತ್ರ ಕಡಿತ ಮಾಡಲಾಗಿದೆ ಎಂದು ಗ್ರಾ.ಪಂ. ಸ್ಪಷ್ಟಪಡಿಸಿದೆ. ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷೆ ಲೀಲಾವತಿ, ಉಪಾಧ್ಯಕ್ಷ ಹೊಟ್ಟೇಂಗಡ ಪ್ರಕಾಶ್ ಉತ್ತಪ್ಪ, ಸದಸ್ಯ ಮಾರಾ, ಪಿ.ಡಿ.ಓ. ಬಲರಾಮೇಗೌಡ ಹಾಗೂ ಗ್ರಾಮಸ್ಥರು ಹಾಜರಿದ್ದರು.