ಮಡಿಕೇರಿ, ಜೂ. 9: ಇಲ್ಲಿನ ಐತಿಹಾಸಿಕ ಕೋಟೆಯ ಮೇಲ್ಚಾವಣಿ ಹೆಂಚುಗಳು ನಿನ್ನೆಯ ಗಾಳಿ - ಮಳೆಯಿಂದ ಮತ್ತೆ ನೆಲಕಚ್ಚಿರುವ ದೃಶ್ಯ ಕಂಡು ಬಂದಿದೆ. ಈ ಹಿಂದೆ ಅಲ್ಪ ಸ್ವಲ್ಪ ಬಿದ್ದು ಹೋಗಿದ್ದ ಮಾಡು, ಹೆಂಚುಗಳು ನಿನ್ನೆ ನೂರಾರು ಸಂಖ್ಯೆಯಲ್ಲಿ ಕೋಟೆ ಆವರಣದಲ್ಲಿ ಒಡೆದು ಬಿದ್ದಿರುವದು ಗೋಚರಿಸಿದೆ.

ಪ್ರಸಕ್ತ ಮಳೆಗಾಲದಲ್ಲಿ ಮೊದಲು ಮೇಲ್ಚಾವಣಿ ದುರಸ್ತಿಗೊಳಿಸದಿದ್ದರೆ, ಕೋಟೆಯ ಕಟ್ಟಡಕ್ಕೂ ಅಪಾಯ ಎದುರಾಗುವ ಮುನ್ಸೂಚನೆ ಇದೆಯೆನ್ನಬಹುದು. ಪದೇ ಪದೇ ಮಾಡು, ಹೆಂಚುಗಳು ಜಾರಿ ಬಿದ್ದು ಒಡೆದು ಹೋಗುತ್ತಿದ್ದು, ಹಗಲು ವೇಳೆಯಾಗಿದ್ದರೆ ಕೆಳಗೆ ನಿಲ್ಲಿಸುವ ವಾಹನಗಳಿಗೆ ಅಥವಾ ಕೋಟೆ ಆವರಣದಲ್ಲಿ ಸುಳಿದಾಡುತ್ತಿದ್ದವರ ಪ್ರಾಣಕ್ಕೆ ಅಪಾಯ ಎದುರಾಗುತ್ತಿತ್ತು. ಇತ್ತ ಪ್ರಾಚ್ಯವಸ್ತು ಇಲಾಖೆ ಎಚ್ಚೆತ್ತುಕೊಳ್ಳಬೇಕಿದೆ.