ವೀರಾಜಪೇಟೆ, ಜೂ. 9: ಪರಿಸರ ಮತ್ತು ಅರಣ್ಯವನ್ನು ಸಂರಕ್ಷಿಸುವ ಬಗ್ಗೆ ವಿದ್ಯಾರ್ಥಿಗಳಿಗೆ ಪಾಠದೊಂದಿಗೆ ಕಾನೂನಿನ ಮಾಹಿತಿಯನ್ನು ನೀಡುವಂತಾಗಬೇಕು ಎಂದು ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಡಾ. ಜಡೇಗೌಡ ಹೇಳಿದರು.
ವೀರಾಜಪೇಟೆಗೆ ಸಮೀಪದ ಅರಮೇರಿ ಕಳಂಚೇರಿ ಮಠದ ಲಿಂಗರಾಜೇಂದ್ರ ಪ್ರಸಾದ ಭವನದಲ್ಲಿ ನಡೆದ ‘ಹೊಂಬೆಳಕು’ ಕಿರಣ 168 ನೇ ಮಾಸಿಕ ತತ್ತ್ವಚಿಂತನಗೋಷ್ಠಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಜಡೇಗೌಡ ತಮ್ಮ ಉಪನ್ಯಾಸದಲ್ಲಿ ವರ್ಷಕ್ಕೊಮ್ಮೆ ಪರಿಸರ ದಿನಾಚರಣೆಯನ್ನು ಆಚರಿಸುತ್ತೇವೆ ಗಿಡ ನೆಡುವದು ಮರ ಬೆಳೆಸುವದರಿಂದ ಮರಗಳು ನಮಗೆ ಬೇಕಾಗಿರುವದನ್ನು ನೀಡುತ್ತದೆ. ಆದರೆ ಮಾನವನ ದುರಾಸೆಯಿಂದ ಅರಣ್ಯಗಳು ನಾಶವಾಗುತ್ತಿದ್ದು ಅರಣ್ಯಗಳಿಂದ ಎಲ್ಲವನ್ನು ಪಡೆದುಕೊಂಡು ಅದನ್ನು ಸಂರಕ್ಷಿಸದಿದ್ದರೆ ಮುಂದಿನ ದಿನಗಳಲ್ಲಿ ಏನು ಸಿಗದಂತಾಗುತ್ತದೆ ಆದ್ದರಿಂದ ಅರಣ್ಯದ ಬಗ್ಗೆ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ, ಸಂಘ-ಸಂಸ್ಥೆಗಳಿಗೆ ಹಾಗೂ ಸಾರ್ವಜನಿಕರಿಗೂ ಅರಣ್ಯ ಉಳಿಸುವದು ಅದರಿಂದ ಪ್ರಯೋಜನಗಳೇನು ಎಂಬದನ್ನು ಅರಿವು ಮೂಡಿಸಬೆಕಾಗಿದೆ ಎಂದರಲ್ಲದೆ ಸಾಕ್ಷ್ಯಚಿತ್ರ ಪ್ರದರ್ಶಿಸಿದರು.
ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಪದ್ಮಿನಿ ಪೊನ್ನಪ್ಪ ಕಾರ್ಯಕ್ರಮ ಉದ್ಘಾಟಿಸಿದರು.
ಮಠದ ಪೀಠಾಧಿಪತಿಗಳಾದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರು ತಮ್ಮ ಆಶೀರ್ವಚನದಲ್ಲಿ ಗಿಡ, ಮರ, ಕಾಡೆ ಬದುಕು ಎಂಬಂತೆ ಕೊಡಗಿನ ಪರಿಸರ ಪ್ರಕೃತಿಯನ್ನು ನೋಡಲು ಪ್ರವಾಸಿಗರು ಸಾಕಷ್ಟು ಸಂಖ್ಯೆಯಲ್ಲಿ ಬಂದುಹೋಗುತ್ತಾರೆ ಆದರೆ ಶನಿವಾರ ಮತ್ತು ಭಾನುವಾರ ಮಡಿಕೇರಿ ನೋಡಲು ಬಂದ ಪ್ರವಾಸಿಗರು ಎಲ್ಲಾ ಬೀದಿಗಳಲ್ಲಿ ಕಸವನ್ನು ಸುರಿದು ಹೋಗುತ್ತಿದ್ದಾರೆ. ಕೊಡಗಿನ ವೀರಾಜಪೇಟೆ ತಾಲೂಕಿನಲ್ಲಿ ಎಲ್ಲಿ ನೋಡಿದರಲ್ಲಿ ಭತ್ತದ ಕಣಜ ಎಂದು ಹೆಸರಿತ್ತು. ಆದರೆ ಈಗ ಅನೇಕರು ಗದ್ದೆ ನಾಟಿ ಮಾಡುವದನ್ನೇ ಬಿಟ್ಟಿದ್ದಾರೆ. ಈಗ ನದಿಗಳಲ್ಲಿಯು ನೀರು ಕಡಿಮೆಯಾಗಿದೆ. ಪಶು,ಪಕ್ಷಿ, ಪ್ರಾಣಿಗಳು ತಿಂದ ಹಣ್ಣು ಬೀಜಗಳಿಂದ ಗಿಡ-ಮರಗಳು ಬೆಳೆಯುತ್ತಿವೆ. ಮರಗಳನ್ನು ನಾವುಗಳು ಬೆಳೆಸಬೇಕು, ಪರಿಸರ ಉಳಿಸಬೇಕು, ಅರಣ್ಯವನ್ನು ಸಂರಕ್ಷಿಸುವದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.
ವಿದ್ಯಾಸಂಸ್ಥೆಯ ಪ್ರಾಂಶುಪಾಲ ಎಂ. ಮಧುಸೂದನ್ ನಾಯಕ್ ಸ್ವಾಗತಿಸಿದರು. ಪಕ್ಷಿ ತಜ್ಞ ಡಾ. ನರಸಿಂಹನ್ ನಿರೂಪಿಸಿದರೆ. ಶಿಕ್ಷಕ ದೇವರ್ ವಂದಿಸಿದರು.