ಶ್ರೀಮಂಗಲ, ಜೂ. 9: ದ ಕೊಡಗಿನ ಕಾನೂರು, ಕೋತುರು, ಬೆಕ್ಕೆಸೂಡ್ಲೂರು ಭಾಗಗಳಿಗೆ ಕಳೆದ 15 ದಿನಗಳಿಂದ ಬಿ.ಎಸ್.ಎನ್.ಎಲ್. ಮೊಬೈಲ್ ಹಾಗೂ ಸ್ಥಿರ ದೂರವಾಣಿ ಸಂಪರ್ಕ ರಾತ್ರಿ ಸಮಯದಲ್ಲಿ ಕಾರ್ಯನಿರ್ವಹಿಸದೆ ಸಾರ್ವಜನಿಕರು ಪರದಾಡುವಂತಾಗಿದೆ. ಹಲವು ಬಾರಿ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಪ್ರತ್ಯೇಕವಾಗಿ ದೂರು ದಾಖಲು ಮಾಡಿದರು ಸಮಸ್ಯೆಗೆ ಸ್ಪಂದನೆಯನ್ನು ನೀಡುತ್ತಿಲ್ಲ. ಕೂಡಲೇ ಈ ಬಗ್ಗೆ ಇಲಾಖೆ ಸಮಸ್ಯೆಯನ್ನು ಪರಿಹರಿಸದಿದ್ದಲ್ಲಿ ಕಾನೂರು ಬಿ.ಎಸ್.ಎನ್.ಎಲ್. ಉಪಕೇಂದ್ರಕ್ಕೆ ಬೀಗವನ್ನು ಹಾಕುವದರ ಮೂಲಕ ಪ್ರತಿಭಟನೆಯನ್ನು ಮಾಡಲಾಗುವದು ಮತ್ತು ಈ ಭಾಗದಲ್ಲಿ ಉತ್ತಮ ಸೇವೆಯನ್ನು ನೀಡುತ್ತಿರುವ ಏರ್‍ಟೆಲ್ ಸಂಸ್ಥೆಯೊಂದಿಗೆ ಗ್ರಾಹಕರು ಕೈಜೋಡಿಸಬೇಕಾಗುತ್ತದೆ ಎಂದು ಈ ಭಾಗದ ಪ್ರಮುಖರು ಇಲಾಖೆಯನ್ನು ಎಚ್ಚರಿಸಿದ್ದಾರೆ.

ಈ ಬಗ್ಗೆ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ ಗ್ರಾಮಸ್ಥರು ಬಿ.ಎಸ್.ಎನ್.ಎಲ್. ಉಪ ಕೇಂದ್ರದಲ್ಲಿ ಖಾಯಂ ಆಗಿ ಕೆಲಸ ನಿರ್ವಹಿಸಲು ಒಬ್ಬ ಸಿಬ್ಬಂದಿಯನ್ನು ನೇಮಿಸಿದ್ದು, ಬೆಳಿಗ್ಗೆ 9 ರಿಂದ ಸಂಜೆ 5ರ ವರೆಗೆ ಹಾಗೂ 3 ಗ್ರಾಮಕ್ಕೆ ಒಬ್ಬ ಲೈನ್‍ಮೆನನ್ನು ನೇಮಿಸಿದ್ದು ದಿನ ಪೂರ್ತಿ ನಶೆಯಲ್ಲಿ ತೇಲುತ್ತಿದ್ದು ಇಲ್ಲಿ ಯಾವದೇ ಸಮಸ್ಯೆಯಾದರು ಕುಟ್ಟದಿಂದ ಅಧಿಕಾರಿಗಳು ಬಂದ ನಂತರವೇ ಕೆಲಸ ಆಗುತ್ತದೆ. ಇಲ್ಲಿಯವರಿಗೆ ಸರಿಯಾದ ಸೇವೆಯನ್ನು ಬಿ.ಎಸ್.ಎನ್.ಎಲ್ ನೀಡುತ್ತಿಲ್ಲ ಎಂದು ಗಂಭೀರ ಆರೋಪಮಾಡಿದ್ದಾರೆ.

ಇಲ್ಲಿ ಸುಮಾರು 300ಕ್ಕೂ ಅಧಿಕ ಲ್ಯಾಂಡ್ ಲೈನ್ ಹಾಗೂ 50ಕ್ಕೂ ಅಧಿಕ ಬ್ರಾಡ್ ಬ್ಯಾಂಡ್ ಸಂಪರ್ಕ ಮತ್ತು ಪ್ರತಿ ಮನೆಯಲ್ಲೂ ಮೊಬೈಲ್ ಸಂಪರ್ಕವನ್ನು ಪಡೆದಿದ್ದು ಕಳೆದ ಹಲವು ಸಮಯಗಳಿಂದ ಸಮರ್ಪಕ ಸೇವೆಯನ್ನು ಸಂಸ್ಥೆಯವರು ನೀಡುತ್ತಿಲ್ಲ. 2ಜಿ ಸೇವೆಯನ್ನು ಉನ್ನತೀಕರಣಗೊಳಿಸಲು ಸಂಸದ ಪ್ರತಾಪ್ ಸಿಂಹ ಭರವಸೆ ನೀಡಿದರು; ಇದುವರೆಗೆ ಸಂಪರ್ಕದಲ್ಲಿ ಉನ್ನತಿಕರಣ ಮಾಡಿಲ್ಲ. ಉಪಕೇಂದ್ರದಲ್ಲಿ ವಿದ್ಯುತ್ ಸಮಸ್ಯೆ ನೀಗಿಸಲು 65 ಕೆವಿ ಜನರೇಟರ್ ವ್ಯವಸ್ಥೆ ಇದ್ದು ಇದರಿಂದ ಬ್ಯಾಟರಿಗಳನ್ನು ಚಾರ್ಜ್ ಮಾಡಿ ಸೇವೆಯನ್ನು ನೀಡಬೇಕು. ಆದರೆ ಬ್ಯಾಟರಿಗಳು ಹಳೆಯದಾಗಿದ್ದು ನೂತನ ಬ್ಯಾಟರಿಗಳನ್ನು ಖರೀದಿ ಮಾಡಿದರು ಅದನ್ನು ಜೋಡಿಸದೆ ನೆಲದಲ್ಲಿ ಎಸೆಯಲಾಗಿದೆ. ರಾತ್ರಿ ಸಮಯದಲ್ಲಿ ಕೇಂದ್ರಕ್ಕೆ ಬೀಗ ಹಾಕಿ ನೌಕರ ಮನೆಗೆ ಹೋದರೆ ಸಂಪರ್ಕ ಕಡಿತಗೊಳ್ಳುತ್ತಿದೆ ಎಂದು ವಿವರಿಸಿದರು.

ಬಿ.ಎಸ್.ಎನ್.ಎಲ್. ಕೇವಲ ನಾಮಕಾವÀಸ್ಥೆಯ ಸಂಸ್ಥೆಯಾಗಿ ಉಳಿದುಕೊಂಡಿದ್ದು, ಇದರಿಂದ ಈ ಭಾಗದ ಜನರಿಗೆ ಯಾವದೇ ಪ್ರಯೋಜನವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಈ ಉಪಕೇಂದ್ರವನ್ನು ಮುಚ್ಚುವದರ ಮೂಲಕ ಈ ಸ್ಥಳವನ್ನು ದಾನಿಗಳಿಗೆ ಮರು ಪಾವತಿಸುವದೆ ಉತ್ತಮ ಎಂದು ತಿಳಿಸಿದ್ದಾರೆ.

ಈ ಸಂದರ್ಭ ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಚೊಟ್ಟೆಕ್‍ಮಾಡ ರಾಜೀವ್ ಬೋಪಯ್ಯ, ಕಾನೂರು ಪ್ರಾಥಮಿಕ ಕೃಷಿ ಪತ್ತಿನ ಅಧ್ಯಕ್ಷ ಅಳಮೇಂಗಡ ವಿವೇಕ್ ಅಯ್ಯಪ್ಪ, ಉಪಾಧ್ಯಕ್ಷ ಮಣಿ ನಂಜಪ್ಪ, ಸೇವಾ ಸಂಘದ ಅಧ್ಯಕ್ಷ ಕೇಚÀಮಾಡ ದಿನೇಶ್, ಸಂಘದ ಕಾರ್ಯದರ್ಶಿ ಪೋರಂಗಡ ಬೋಪಣ್ಣ, ಕೋದೇಂಗಡ ನರೇಂದ್ರ, ಚೆಪ್ಪುಡಿರ ಕೃಪ, ಚಿರಿಯಪಂಡ ಡ್ಯಾನಿ ಪೊನ್ನಪ್ಪ, ಬಸಪ್ಪ, ಚೊಟ್ಟೆಕ್‍ಮಾಡ ರಾಬೀನ್, ಬಿದ್ದಪ್ಪ, ಕಟ್ಟೆಂಗಡ ಸುಜಿ, ಕೇಚಮಾಡ ವಿಶ್ವಾಸ್, ರಾಕೇಶ್, ಚೇಂದಿರ ಮೊಣ್ಣಪ್ಪ ಹಾಜರಿದ್ದರು.