ಮಡಿಕೇರಿ, ಜೂ. 9: ಯುವ ಭವನ ಕಟ್ಟಡವನ್ನು ಯುವ ಸಂಘಗಳ ಕಾರ್ಯಚಟುವಟಿಕೆÀಗಳಿಗೆ ಬಿಟ್ಟು ಕೊಡದಿದ್ದಲ್ಲಿ ಜಿಲ್ಲಾಡಳಿತ ಭವನದೆದುರು ಅಹೋರಾತ್ರಿ ಧರಣಿ ನಡೆಸುವದರೊಂದಿಗೆ ರಾಜ್ಯಾದ್ಯಂತ ಪ್ರತಿಭಟನೆ ಕೈಗೊಳ್ಳುವದಾಗಿ ಜಿಲ್ಲಾ ಯುವ ಒಕ್ಕೂಟ ಎಚ್ಚರಿಕೆ ನೀಡಿದೆ.

ಜಿಲ್ಲಾ ಯುವ ಒಕ್ಕೂಟದ ನೇತೃತ್ವದಲ್ಲಿ ಮಡಿಕೇರಿ, ಸೋಮವಾರಪೇಟೆ ಹಾಗೂ ವೀರಾಜಪೇಟೆ ತಾಲೂಕು ಯುವ ಒಕ್ಕೂಟಗಳು ಮತ್ತು ಜಿಲ್ಲೆಯ ವಿವಿಧ ಯುವ ಸಂಘಗಳ ಆಶ್ರಯದಲ್ಲಿ ಕಾರ್ಯಕರ್ತರು ಜಿಲ್ಲಾಡಳಿತ ಭವನಕ್ಕೆ ಮೆರವಣಿಗೆಯಲ್ಲಿ ಸಾಗಿ ಬಂದು ಯುವ ಭವನ ಕಟ್ಟಡವನ್ನು ಬಿಟ್ಟುಕೊಡುವಂತೆ ಆಗ್ರಹಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಜಿಲ್ಲಾ ಯುವ ಒಕ್ಕೂಟದ ಸುದೀರ್ಘ ಹೋರಾಟ ಮತ್ತು ಪ್ರಯತ್ನದಿಂದಾಗಿ ನಿರ್ಮಾಣವಾದ ಯುವ ಭವನವನ್ನು 2013ರಲ್ಲಿ ಮಹಿಳಾ ಕಾಲೇಜು ಆರಂಭಕ್ಕೆಂದು ಕೇವಲ 6 ತಿಂಗಳ ಅವಧಿಗೆ ನೀಡಲಾಗಿತ್ತು. ಇದೀಗ ನಾಲ್ಕು ವರ್ಷ ಕಳೆದರೂ ಭವನವನ್ನು ಬಿಟ್ಟುಕೊಡದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಯುವ ಸಂಘಗಳ ಕಾರ್ಯಕರ್ತರು ತಕ್ಷಣ ಯುವ ಸಂಘಗಳ ಕಾರ್ಯಚಟುವಟಿಕೆಗಳಿಗೆ ಬಿಟ್ಟುಕೊಡುವಂತೆ ಆಗ್ರಹಿಸಿದರು.

ಈ ಸಂದರ್ಭ ಜಿಲ್ಲಾ ಯುವ ಒಕ್ಕೂಟದ ಮಾಜಿ ಅಧ್ಯಕ್ಷ ಟಾಟು ಮೊಣ್ಣಪ್ಪ ಮಾತನಾಡಿ, ಕರ್ನಾಟಕದಲ್ಲಿಯೇ ಪ್ರಥಮ ಯುವ ಭವನವನ್ನು ಮಡಿಕೇರಿಯಲ್ಲಿ ನಿರ್ಮಾಣ ಮಾಡಲಾಗಿದೆ. 2013ರಲ್ಲಿ ಆಗಿನ ಶಾಸಕರ ಮನವಿಯ ಮೇರೆಗೆ ಮಹಿಳಾ ಕಾಲೇಜು ಆರಂಭಕ್ಕೆ 6 ತಿಂಗಳ ಅವಧಿಗೆ ಯುವ ಭವನವನ್ನು ಬಿಟ್ಟುಕೊಡಲಾಗಿತ್ತು. ಬಳಿಕ ಶಾಸಕರು ಸೇರಿದಂತೆ ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿ ಭವನವನ್ನು ಬಿಟ್ಟುಕೊಡುವಂತೆ ಆಗ್ರಹಿಸಿದರೂ ಯಾರೂ ಕೂಡ ಸ್ಪಂದಿಸದೇ ನಿರ್ಲಕ್ಷ್ಯ ತೋರಿದ್ದಾರೆ. ಅಲ್ಲದೆ ಮಹಿಳಾ ಕಾಲೇಜಿಗೆ ರಾಜ್ಯ ಸರ್ಕಾರ ರೂ. 2 ಕೋಟಿ ಅನುದಾನ ಕಲ್ಪಿಸಿದ್ದರೂ ಜಾಗ ಗುರುತಿಸಲು ಸಂಬಂಧಿಸಿದ ಇಲಾಖೆ ಹಾಗೂ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿದರು. ಯುವ ಭವನವನ್ನು ಒಂದು ತಿಂಗಳೊಳಗೆ ಬಿಟ್ಟುಕೊಡದಿದ್ದಲ್ಲಿ ಜಿಲ್ಲಾಡಳಿತ ಭವನದೆದುರು ಅಹೋರಾತ್ರಿ ಧರಣಿ ಕೈಗೊಳ್ಳುವದಾಗಿ ಎಚ್ಚರಿಕೆ ನೀಡಿದರು.

ಜಿಲ್ಲಾ ಯುವ ಒಕ್ಕೂಟದ ಸ್ಥಾಪಕ ಅಧ್ಯಕ್ಷ ಗಿರೀಶ್ ತಾಳತ್‍ಮನೆ ಮಾತನಾಡಿ, ಯುವ ಸಂಘಗಳ ಕಾರ್ಯಚಟುವಟಿಕೆ ಕೈಗೊಳ್ಳಲು ಯುವ ಭವನ ಇದ್ದರೂ ಬಾಡಿಗೆ ಕಟ್ಟಡದಲ್ಲಿ ಚಟುವಟಿಕೆಗಳನ್ನು ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ. ಸಂಬಂಧಿಸಿದವರು ತಕ್ಷಣ ಯುವ ಭವನ ಕಟ್ಟಡವನ್ನು ಬಿಟ್ಟುಕೊಡುವಂತೆ ಆಗ್ರಹಿಸಿದ ಅವರು ಇಲ್ಲದಿದ್ದಲ್ಲಿ ರಾಜ್ಯಾದ್ಯಂತ ಹೋರಾಟ ಕೈಗೊಳ್ಳುವದಾಗಿ ಎಚ್ಚರಿಕೆ ನೀಡಿದರು.

ಈ ಸಂದರ್ಭ ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಮಂಡುವಂಡ ಬಿ. ಜೋಯಪ್ಪ, ಕಾರ್ಯದರ್ಶಿ ಪಿ.ಪಿ. ಸುಕುಮಾರ್, ಮಡಿಕೇರಿ ತಾಲೂಕು ಅಧ್ಯಕ್ಷ ನವೀನ್ ದೇರಳ, ಸೋಮವಾರಪೇಟೆ ತಾಲೂಕು ಅಧ್ಯಕ್ಷ ರವಿ, ವೀರಾಜಪೇಟೆ ತಾಲೂಕು ಅಧ್ಯಕ್ಷೆ ಶೀಲಾ ಬೋಪಣ್ಣ, ಮಾಜಿ ಜಿಲ್ಲಾಧ್ಯಕ್ಷರಾದ ಎಂ.ಕೆ. ವೆಂಕಟೇಶ್, ಕಂದಾ ದೇವಯ್ಯ, ಮಾಜಿ ಜಿ.ಪಂ. ಅಧ್ಯಕ್ಷ ಶಾಂತೆಯಂಡ ರವಿಕುಶಾಲಪ್ಪ, ಮಾಜಿ ಉಪಾಧ್ಯಕ್ಷೆ ಅಲ್ಲಾರಂಡ ಬೀನಾ ಬೊಳ್ಳಮ್ಮ ಹಾಗೂ ವಿವಿಧ ಯುವ ಸಂಘಗಳ ಪದಾಧಿಕಾರಿಗಳು ಇದ್ದರು.