ಭಾಗಮಂಡಲ, ಜೂ. 9: ಕಾವೇರಿ ವನ್ಯಧಾಮವನ್ನು ಸೂಕ್ಷ್ಮ ಪರಿಸರ ತಾಣ ವ್ಯಾಪ್ತಿಗೆ ಸೇರ್ಪಡೆಗೊಳಿಸಿರುವದನ್ನು ವಿರೋಧಿಸಿ ಭಾಗಮಂಡಲದ ಕಸ್ತೂರಿ ರಂಗನ್ ವಿರೋಧಿ ಸಮಿತಿ ಕರೆ ನೀಡಿದ ಭಾಗಮಂಡಲ ಬಂದ್‍ಗೆ ಸಂಪೂರ್ಣ ಬೆಂಬಲ ವ್ಯಕ್ತ ಗೊಂಡಿದ್ದು, ಬಂದ್ ಸಂಪೂರ್ಣ ಯಶಸ್ವಿಯಾಗಿದೆ. ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಯಾವದೇ ಅಂಗಡಿ, ಮುಂಗಟ್ಟುಗಳು ತೆರೆಯದೆ ಬಂದ್‍ಗೆ ಸಹಕರಿಸಿದವು. ವಾಹನಗಳ ಸಂಚಾರ ಮಧ್ಯಾಹ್ನದವರೆಗೆ ಸ್ಥಗಿತಗೊಂಡಿತ್ತು.ಸೂಕ್ಷ್ಮ ಪರಿಸರ ತಾಣ ಹಾಗೂ ಕಸ್ತೂರಿ ರಂಗನ್ ವರದಿಗೆ ಜಿಲ್ಲೆಯಾದ್ಯಂತ ತೀವ್ರ ವಿರೋಧವಿದ್ದರೂ, ತಲಕಾವೇರಿ ವನ್ಯಧಾಮವನ್ನು ಸೂಕ್ಷ್ಮ ಪರಿಸರ ತಾಣ ವ್ಯಾಪ್ತಿಗೆ ಸೇರ್ಪಡೆ ಗೊಳಿಸಿರುವದರ ಬಗ್ಗೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಬೆಳಿಗ್ಗೆ 6 ಗಂಟೆಯಿಂದಲೇ ಮಡಿಕೇರಿ ರಸ್ತೆಯ ಪ್ರವೇಶದ್ವಾರ, ಕರಿಕೆ ರಸ್ತೆ ಹಾಗೂ ಅಯ್ಯಂಗೇರಿ ರಸ್ತೆಗಳನ್ನು ಬಂದ್ ಮಾಡಲಾಯಿತು. ಬೆಳಿಗ್ಗೆ ಅಷ್ಟೊಂದು ವಾಹನ ಸಂಚಾರ ಇರಲಿಲ್ಲವಾದರೂ 10 ಗಂಟೆಯಾಗುತ್ತಲೇ ಪ್ರವಾಸಿಗರು ಹಾಗೂ ಯಾತ್ರಿಕರ ವಾಹನಗಳು ಆಗಮಿಸಲಾರಂಭಿಸಿದವು.
ವಿದ್ಯಾರ್ಥಿಗಳ ಬವಣೆ : ಇಂದು ಬಂದ್ ಆಚರಿಸಲಾಗುವದೆಂದು ಮಾಹಿತಿ ಇದ್ದರೂ ಕೂಡ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡದೇ ಇದ್ದುದರಿಂದ ಬಹುತೇಕ ವಿದ್ಯಾರ್ಥಿಗಳು, ಶಿಕ್ಷಕರು ಬವಣೆ ಪಡುವಂತಾಯಿತು. ನಡೆದು ಹೋಗುವ ವಿದ್ಯಾರ್ಥಿಗಳು ಶಾಲೆಗೆ ತೆರಳಿದರೆ, ಬಸ್ ಹಾಗೂ ಶಾಲಾ ವಾಹನಗಳನ್ನು ಅವಲಂಭಿಸಿದ್ದವರು ತೆರಳಲಾರದೆ ಮನೆಯಲ್ಲೇ ಕಳೆಯುವಂತಾಯಿತು.
ಪೊಲೀಸ್‍ರೊಂದಿಗೆ ಚಕಮಕಿ : ರಸ್ತೆ ತಡೆಯಿಂದಾಗಿ ವಾಹನಗಳು ರಸ್ತೆಯುದ್ದಕ್ಕೂ ಜಮಾವಣೆಗೊಂಡ ಹಿನ್ನೆಲೆಯಲ್ಲಿ ವೃತ್ತ ನಿರೀಕ್ಷಕ ಪ್ರದೀಪ್, ಠಾಣಾಧಿಕಾರಿ ಸದಾಶಿವಯ್ಯ, ನಾಪೋಕ್ಲು ಠಾಣಾಧಿಕಾರಿ ವೆಂಕಟೇಶ್ ಅವರುಗಳು ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರು.
ಈ ಸಂದರ್ಭ ಪರಸ್ಪರ ಮಾತಿನ ಚಕಮಕಿಯೂ ನಡೆಯಿತು. ನಂತರ ಮಧ್ಯಾಹ್ನ 2 ಗಂಟೆ ಬಳಿಕ ವಾಹನಗಳಿಗೆ ತೆರಳಲು ಅವಕಾಶ ನೀಡಲಾಯಿತು.
ಕಚೇರಿಗೆ ಮುತ್ತಿಗೆ : ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಗ್ರಾಮಸ್ಥರ ಆಕ್ರೋಶ ಒಂದು ಹಂತದಲ್ಲಿ ಅರಣ್ಯ ಇಲಾಖೆಯತ್ತ ತಿರುಗಿತು. ವಲಯ ಅರಣ್ಯ ಕಚೇರಿಗೆ ತೆರಳಿ ಮುತ್ತಿಗೆ ಹಾಕಲು ಯತ್ನಿಸಿದರು. ಆದರೆ, ಅದುವರೆಗೆ ತೆರೆದಿದ್ದ ಇಲಾಖಾ ಕಚೇರಿ ಪ್ರತಿಭಟನಾಕಾರರು ಆಗಮಿಸುತ್ತಿರುವ ಸುಳಿವು ಅರಿತ ಬೆನ್ನಲ್ಲೇ ಮುಚ್ಚಿಕೊಂಡಿತು. ಬಾಗಿಲು ಮುಚ್ಚಿದ್ದ ಕಚೇರಿಯೆದುರೇ ಗ್ರಾಮಸ್ಥರು ತಮ್ಮ ಆಕ್ರೋಶ ವ್ಯಕ್ತಪಡಿಸಿ ಹಿಂತೆರಳಿದರು.
ಆದೇಶ ಹಿಂತೆಗೆತಕ್ಕೆ ಆಗ್ರಹ : ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಗ್ರಾ.ಪಂ. ಮಾಜಿ ಸದಸ್ಯ ಕಾಳನ ರವಿ, ಸೂಕ್ಷ್ಮ ಪರಿಸರ ತಾಣದ ವ್ಯಾಪ್ತಿಯಲ್ಲಿನ ಬಫರ್‍ಜೋನ್ ಮಿತಿಯನ್ನು ಅರಣ್ಯ ಇಲಾಖೆಯ ಹದ್ದುಬಸ್ತಿನಲ್ಲಿಯೇ ಇಡಬೇಕು. ಯಾವದೇ ಕಾರಣಕ್ಕೂ ವಿಸ್ತರಣೆ ಮಾಡಬಾರದು. ಇದರ ವಿರುದ್ಧ ಅನಿರ್ದಿಷ್ಟಾವದಿ ಹೋರಾಟ ಮಾಡಲಿದ್ದು, ಎಲ್ಲರೂ ಪಕ್ಷಬೇಧ ಮರೆತು ಪಾಲ್ಗೊಂಡಿದ್ದಾರೆ. ಪರಿಸರವಾದಿಗಳು ಹಾಗೂ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ಕುಮಾರ್ ಅವರುಗಳನ್ನು ಗಡೀಪಾರು ಮಾಡಬೇಕೆಂದು ಆಗ್ರಹಿಸಿದರು.
ಇದು ನಮ್ಮ ಅಳಿವು-ಉಳಿವಿನ ಪ್ರಶ್ನೆಯಾಗಿದ್ದು, ಮುಂದಿನ ಪೀಳಿಗೆಯ ಬದುಕಿಗಾಗಿ ಹೋರಾಟ ಹಮ್ಮಿಕೊಳ್ಳಲಾಗಿದೆ. ನಾಳೆಯಿಂದ ವಲಯ ಅರಣ್ಯಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸುವದಾಗಿ ಹೇಳಿದರು.
ವಕೀಲ ಸುನಿಲ್ ಪತ್ರಾವೋ ಮಾತನಾಡಿ, ಸೂಕ್ಷ್ಮ ಪರಿಸರ ತಾಣದ ಆದೇಶವನ್ನು ಹಿಂಪಡೆಯಬೇಕು. ಬಫರ್‍ಜೋನ್ ವ್ಯಾಪ್ತಿಯನ್ನು ಶೂನ್ಯ ಮಿತಿಗೆ ತರಬೇಕು. ಸೂಕ್ಷ್ಮ ಪರಿಸರ ತಾಣ ಹಾಗೂ ಕಸ್ತೂರಿರಂಗನ್ ವರದಿಗೆ ಈ ಹಿಂದಿನಿಂದಲೂ ವಿರೋಧವಿದ್ದರೂ ಹೇಗೆ ಅನುಷ್ಠಾನಗೊಂಡಿತೆಂದು ಪ್ರಶ್ನಿಸಿದರು. ಇಲ್ಲಿ ಅಧಿಕಾರಿಗಳ ದಾರಿ ತಪ್ಪಿಸುವ ಕೆÀಲಸ ಆಗಿದೆ. ಮಾರಕವಾಗಿರುವ ಯೋಜನೆ ಬಗ್ಗೆ ರಾಜ್ಯ ಹಾಗೂ ಕೇಂದ್ರ ಸರಕಾರ ಗಂಭೀರವಾಗಿ ಚಿಂತನೆ ಮಾಡಬೇಕಿದೆ. ಇಲ್ಲವಾದರೆ ನೆಲೆಯಿಲ್ಲದಂತಾಗುತ್ತದೆ ಎಂದರು.
ನಾಗರಿಕ ಹೋರಾಟ ಸಮಿತಿ ಅಧ್ಯಕ್ಷ ಕುದುಕುಳಿ ಭರತ್ ಮಾತನಾಡಿ, ಈ ಯೋಜನೆಯಿಂದ ದಿನನಿತ್ಯದ ಬದುಕಿಗೆ ತೊಂದರೆಯಾಗಲಿದೆ. ಕೃಷಿಕರ ಬದುಕಿಗೆ ಮಾರಕವಾಗಲಿದೆ. ನಿರಂತರ ಹೋರಾಟ ಮಾಡಬೇಕಾಗಿದೆ. ಕೇರಳದಲ್ಲಿ ಗ್ರಾಮಗಳನ್ನು ಕೈಬಿಟ್ಟ ಹಾಗೆ ಇಲ್ಲಿಯೂ ಕೈಬಿಡಬೇಕೆಂದು ಆಗ್ರಹಿಸಿದರು.
ಅಯ್ಯಂಗೇರಿ ಗ್ರಾ.ಪಂ. ಸದಸ್ಯ ಕುಯ್ಯಮುಡಿ ಮನೋಜ್ ಮಾತನಾಡಿ, ಸೂಕ್ಷ್ಮ ಪರಿಸರ ತಾಣದಿಂದಾಗಿ ಮುಂದಿನ ದಿನಗಳಲ್ಲಿ ಭಾಗಮಂಡಲ ಹಾಗೂ ತಲಕಾವೇರಿ ಕ್ಷೇತ್ರಗಳಲ್ಲಿ ಜಾತ್ರೆಗೆ ತೊಂದರೆ ಯಾಗಲಿದೆ. ತಲಕಾವೇರಿಯಲ್ಲಿ ನಿತ್ಯ ಪೂಜಾ ಕಾರ್ಯಕ್ಕೂ ತೊಂದರೆ ಯಾಗುವ ಸಂಭವವಿದೆ. ರಸ್ತೆ ಅಭಿವೃದ್ಧಿ ಮಾಡುವಂತಿಲ್ಲ. ರೈತರಿಗೆ ಸಾಲ ಪಡೆಯಲೂ ಕೂಡ ಸಾಧ್ಯವಿಲ್ಲ ದಂತಾಗುತ್ತದೆ. ಕಾರ್ಮಿಕರ ಕೊರತೆ ಇರುವಾಗ ಯಂತ್ರಗಳಿಂದ ಕೆಲಸ ಮಾಡಿಸಲೂ ಸಾಧ್ಯವಾಗ ದಂತಹ ಪರಿಸ್ಥಿತಿ ನಿರ್ಮಾಣ ವಾಗಲಿದೆ. ಈ ನಿಟ್ಟಿನಲ್ಲಿ ನಿರಂತರ ಹೋರಾಟ ಅನಿವಾರ್ಯವೆಂದರು.
ಬಂದ್ ವೇಳೆ ಯಾವದೇ ಅಹಿತಕರ ಘಟನೆಗಳು ಸಂಭವಿಸದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಪ್ರತಿಭಟನೆಯಲ್ಲಿ ಜಿ.ಪಂ. ಸದಸ್ಯ ಕುಮಾರ್, ಮಾಜಿ ಸದಸ್ಯ ಪಿ.ಎಂ. ರಾಜೀವ್, ಗ್ರಾ.ಪಂ. ಸದಸ್ಯರುಗಳಾದ ರಾಜಾರೈ, ಪುರುಷೋತ್ತಮ, ಭಾಸ್ಕರ, ಭವಾನಿ ಹರೀಶ್, ಪೂರ್ಣಿಮಾ ಸೇರಿದಂತೆ ಎಲ್ಲ ಸದಸ್ಯರುಗಳು, ರವಿ ಹೆಬ್ಬಾರ್, ಹೊಸೂರು ಸತೀಶ್ ಕುಮಾರ್, ದೇವಂಗೋಡಿ ಹರ್ಷ, ಕುದುಪಜೆ ಪಳಂಗಪ್ಪ ಇನ್ನಿತರ ಪ್ರಮುಖರು ಭಾಗವಹಿಸಿದ್ದರು.(ಮೊದಲ ಪುಟದಿಂದ) ನಗರಾಭಿವೃದ್ಧಿಗೆ ಸಾಕಷ್ಟು ಅನುದಾನದ ಕೊರತೆ ಇದೆ. ವೀರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಒಳಪಡದ ಗ್ರಾಮಗಳಿಗೂ ನೀರು ಸರಬರಾಜು ಮಾಡಲಾಗುತ್ತಿದೆ. ಕೊಡಗು ಜಿಲ್ಲೆಯ ಕಾವೇರಿ ನೀರನ್ನು ಬೆಂಗಳೂರಿನ ಜನತೆಯೂ ಬಳಸುತ್ತಿದ್ದು, ಈ ನಿಟ್ಟಿನಲ್ಲಿ ವಿಶೇಷವಾಗಿ ಪರಿಗಣಿಸಿ ಪುರಸಭೆಯಾಗಿ ಪರಿವರ್ತಿಸಲು ಶಾಸಕ ಬೋಪಯ್ಯ ಇದೇ ಸಂದರ್ಭ ಮನವಿ ಮಾಡಿದರು.
ನಗರೋತ್ಥಾನ ಯೋಜನೆಯಡಿ ವೀರಾಜಪೇಟೆಗೆ 2016-17, 2017-18 ರಲ್ಲಿ ಎಷ್ಟು ಹಣ ಬಿಡುಗಡೆ ಯಾಗಿದೆ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸಿಎಂಎಸ್, ಎಂಟಿಡಿಪಿ ನಗರೋತ್ಥಾನ ಹಂತ-2 ರ ಯೋಜನೆಯಡಿ ವೀರಾಜಪೇಟೆ ಪಟ್ಟಣಕ್ಕೆ ರೂ.500 ಲಕ್ಷ ಮೊತ್ತವು ಹಂಚಿಕೆಯಾಗಿದ್ದು, ಕಾಮಗಾರಿಗಳ ಟೆಂಡರ್ ಪ್ರೀಮಿಯಂ ಸೇರಿ ಹಂಚಿಕೆ ಮೊತ್ತವನ್ನು ರೂ.529.31 ಲಕ್ಷಗಳಿಗೆ ನಿಗದಿಪಡಿಸಲಾಗಿದೆ. ವೀರಾಜಪೇಟೆ ಪಟ್ಟಣ ಪಂಚಾಯಿತಿಗೆ ಮಾರ್ಚ್ 2016 ಅಂತ್ಯದವರೆಗೂ ರೂ.433.59 ಲಕ್ಷಗಳನ್ನು ಬಿಡುಗಡೆ ಮಾಡಲಾಗಿದೆ. 2016-17 ನೇ ಸಾಲಿನಲ್ಲಿ ರೂ.91.44 ಲಕ್ಷ ಬಿಡುಗಡೆ ಮಾಡಲಾಗಿದೆ. ಬಿಡುಗಡೆಯಾದ ಒಟ್ಟು ಮೊತ್ತ ರೂ.525.03 ಲಕ್ಷಗಳಾಗಿದ್ದು ಎಲ್ಲವೂ ಖರ್ಚಾಗಿರುತ್ತದೆ. ಕಾಮಗಾರಿಗಳ ಪ್ರಗತಿಯನ್ನಾಧರಿಸಿ ಅನುದಾನವನ್ನು ಬಿಡುಗಡೆ ಮಾಡಲಾಗುತ್ತಿದ್ದು, ಯಾವದೇ ಅನುದಾನದ ಕೊರತೆ ಇಲ್ಲ ಎಂದು ಸಚಿವ ಈಶ್ವರ ಖಂಡ್ರೆ ಮಾಹಿತಿ ನೀಡಿದ್ದಾರೆ.
ನಗರೋತ್ಥಾನ 3ನೇ ಹಂತದ ಯೋಜನೆಯ ಮಾರ್ಗಸೂಚಿಗಳನ್ನು 29-11-2016ರ ಆದೇಶದಲ್ಲಿ ಹೊರಡಿಸಲಾಗಿದೆ. ಸದರಿ ಯೋಜನೆಯಡಿ ರಾಜ್ಯದ ಎಲ್ಲಾ 264 ನಗರ ಸ್ಥಳೀಯ ಸಂಸ್ಥೆಗಳಿಗೆ ರೂ.284700.00 ಲಕ್ಷ ಮೊತ್ತ ನಿಗಧಿಪಡಿಸಿದ್ದು, ಇದರಲ್ಲಿ ವೀರಾಜಪೇಟೆ ಪಟ್ಟಣ ಪಂಚಾಯಿತಿಗೆ ರೂ.200.00 ಲಕ್ಷ ಮೊತ್ತವನ್ನು ನಿಗದಿಪಡಿಸಲಾಗಿದೆ ಎಂದು ಶಾಸಕ ಬೋಪಯ್ಯ ಅವರ ಪ್ರಶ್ನೆಗೆ ಉತ್ತರಿಸಿದರು.
ರಸ್ತೆ ಅಭಿವೃದ್ಧಿಗೆ ರೂ. 50 ಕೋಟಿ
2016-17ರ ಸಾಲಿನ ಆಯವ್ಯಯ ಭಾಷಣದಲ್ಲಿ ಘೋಷಿಸಿದಂತೆ ಕೊಡಗು ಜಿಲ್ಲೆಯ ರಸ್ತೆಗಳ ಅಭಿವೃದ್ಧಿಗಾಗಿ ರೂ. 50 ಕೋಟಿ ಅನುದಾನ ಒದಗಿಸಲಾಗಿದೆ ಎಂದು ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಶಾಸಕರ ಪ್ರಶ್ನೆಗೆ ಉತ್ತರಿಸಿದರು.
ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ 28 ಕಾಮಗಾರಿಗಳಿಗೆ ರೂ.1080 ಲಕ್ಷ ಅಂದಾಜು ಮೊತ್ತ, ಸೋಮವಾರಪೇಟೆ ತಾಲೂಕಿನ 52 ಕಾಮಗಾರಿಗಳಿಗೆ ರೂ. 1680 ಲಕ್ಷ ಅಂದಾಜು ಮೊತ್ತ ಹಾಗೂ ವೀರಾಜಪೇಟೆ ತಾಲೂಕಿನ ಒಟ್ಟು 122 ಕಾಮಗಾರಿಗಳಿಗೆ ಒಟ್ಟು ರೂ.2240 ಲಕ್ಷ ಒಳಗೊಂಡಂತೆ ಒಟ್ಟು ರೂ.50 ಕೋಟಿ ನಿಗದಿಪಡಿಸಲಾಗಿದ್ದು, ಯಾವದೇ ಕಾಮಗಾರಿಗಳು ಇನ್ನೂ ಪ್ರಾರಂಭಗೊಂಡಿಲ್ಲ ಎಂದು ಮಾಹಿತಿ ನೀಡಿದರು. ಮಧ್ಯಾಹ್ನದವರೆಗೆ ಮಾತ್ರ್ರ ಕಲಾಪಗಳು ನಡೆದವು. ಬಳಿಕ ವಿಧಾನ ಪರಿಷತ್ ಹಾಗೂ ವಿಧಾನ ಸಭಾ ಕಲಾಪವನ್ನು ಸೋಮವಾರದವರೆಗೆ ಸಭಾಪತಿಗಳು ಹಾಗೂ ಸಭಾಧ್ಯಕ್ಷರು ಮುಂದೂಡಿದರು.