ಮಡಿಕೇರಿ, ಜೂ. 9: ಸೂಕ್ಷ್ಮ ಪರಿಸರ ವಲಯಕ್ಕೆ ಸಂಬಂಧಿಸಿದಂತೆ ಅಧಿಸೂಚನೆ ಹೊರಬಂದಿದ್ದರೂ ಜನಪ್ರತಿನಿಧಿಗಳು ಮೌನವಾಗಿರುವ ಬಗ್ಗೆ ಅಖಿಲ ಕೊಡವ ಸಮಾಜ ಆಕ್ಷೇಪ ವ್ಯಕ್ತಪಡಿಸಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಸಮಾಜದ ಅಧ್ಯಕ್ಷ ಮಾತಂಡ ಎಂ. ಮೊಣ್ಣಪ್ಪ ಅವರು, ಕೇಂದ್ರ ಮಟ್ಟದಲ್ಲಿ ಕೊಡಗನ್ನು ಪ್ರತಿನಿಧಿಸುತ್ತಿರುವ ಹೆಚ್ಚು ಜವಾಬ್ದಾರಿ ಇರುವ ಸಂಸದ ಪ್ರತಾಪ್ ಸಿಂಹ ಅವರು ಗಾಡ್ಗೀಳ್ ವರದಿ, ಕಸ್ತೂರಿರಂಗನ್ ವರದಿಯ ವಿರುದ್ಧದ ಹೋರಾಟದ ಸಂದರ್ಭ ಈ ಬಗ್ಗೆ ಚಿಂತೆಬೇಡ, ಇದನ್ನು ನಮ್ಮ ಹೆಗಲಿಗೆ ಹಾಕಿ ಎಂದಿದ್ದರು.

ಇದೀಗ ಅವರು ತಮ್ಮ ಮಾತನ್ನು ಉಳಿಸಿಕೊಂಡಿಲ್ಲ ಇದೀಗ ಮತ್ತೆ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಕೊಡಗಿನ ಅಸ್ತಿತ್ವ ರಕ್ಷಣೆಗೆ ತಮ್ಮ ಬೆಂಬಲವಿರುವದಾಗಿ ಹೇಳಿಕೆ ನೀಡಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್‍ನವರು ಕೇಂದ್ರವನ್ನು ಬೊಟ್ಟು ಮಾಡುತ್ತಾರೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿರುವದರಿಂದ ಬಿಜೆಪಿಯವರು ಮೌನವಾಗಿದ್ದಾರೆ. ಇದರೊಂದಿಗೆ ಜಿಲ್ಲೆಯ ಇತರ ಜನಪ್ರತಿನಿಧಿಗಳು ಇನ್ನೂ ಈ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿಲ್ಲ. ಇದೇ ರೀತಿಯಾದಲ್ಲಿ ಮುಂದಿನ ಚುನಾವಣೆ ಸಂದರ್ಭ ‘ನೋಟಾ’ ಚಳುವಳಿ ರೂಪಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ. ತಲಕಾವೇರಿ ಹಾಗೂ ಬ್ರಹ್ಮಗಿರಿಯನ್ನು ಸೂಕ್ಷ್ಮ ಪರಿಸರ ತಾಣವೆಂದು ಘೋಷಿಸಿ ಅಧಿಸೂಚನೆ ಹೊರಬಿದ್ದಿದೆ. ಈ ಭಾಗದಲ್ಲಿ ತಲತಲಾಂತರದಿಂದಲೇ ಜನವಸತಿ ಪ್ರದೇಶವಿದೆ. ತಲಕಾವೇರಿ ತಾಣದ ವ್ಯಾಪ್ತಿಯಲ್ಲಿ ಕೈಬುಲಿರ, ಮಣವಟ್ಟಿರ, ನೆರವಂಡ, ಮೂವೆರ, ಬ್ರಹ್ಮಗಿರಿಯ ಮರೆನಾಡ ವಿಭಾಗದಲ್ಲಿ ಬೊಳ್ಳೆರ, ಕಾಳಿಮಾಡ, ಕಾಯಪಂಡ, ಬುಟ್ಟಿಯಂಡ ಈ ರೀತಿ ಹಲವಾರು ಕುಟುಂಬಗಳು ಶತಮಾನಗಳಿಂದ ವಾಸಿಸಿಕೊಂಡು ಬರುತ್ತಿರುವದು ಇದಕ್ಕೆ ದಾಖಲೆಯಾಗಿದೆ. ವಿಶಿಷ್ಟ ಸಂಸ್ಕøತಿ ಇರುವದೇ ಈ ಭಾಗದಲ್ಲಿ. ಜಿಲ್ಲೆಯಲ್ಲಿ ಜನರ ಬದುಕು ಆರಂಭವಾಗಿರುವದೇ ಅರಣ್ಯ ಹಾಗೂ ವನ್ಯಜೀವಿಗಳ ನಡುವೆ. ಇದೀಗ ಎಲ್ಲವನ್ನು ಸೂಕ್ಷ್ಮ ತಾಣವೆಂದು ಮಾಡಿ ನಿಯಂತ್ರಣಗಳ ಮೂಲಕ ಅಲ್ಲಿ ನೆಲೆಸಿರುವವರನ್ನು ಅಲ್ಲಿಂದ ಒಕ್ಕಲೆಬ್ಬಿಸುವ ಹುನ್ನಾರ ಇದೆಯೇ ಎಂದು ಪ್ರಶ್ನಿಸಿದ್ದಾರೆ.

ಅನಾದಿಕಾಲದ ಸಂಸ್ಕøತಿಗೂ ಇದು ಧಕ್ಕೆಯಾಗಲಿದೆ. ಸಂಸ್ಕøತಿಯ ತಾಯಿ ಬೇರನ್ನೇ ಅಲುಗಾಡಿಸುವ ಪ್ರಯತ್ನ ಇದಾಗಿದ್ದು, ಅಖಿಲ ಕೊಡವ ಸಮಾಜ ಇದನ್ನು ಖಂಡಿಸುವದಾಗಿ ಮೊಣ್ಣಪ್ಪ ತಿಳಿಸಿದ್ದಾರೆ.

ಸೂಕ್ಷ್ಮ ಪರಿಸರ ತಾಣದ ಲಾಭ-ನಷ್ಟಗಳ ವಿಶ್ಲೇಷಣೆ ಚುನಾವಣೆ ಸಂದರ್ಭದಲ್ಲಿ ರಾಜಕೀಯ ಧುರೀಣರ ಭಾಷಣದಂತಾಗಿದೆ ಎಂದು ಅಭಿಪ್ರಾಯಪಟ್ಟಿರುವ ಅವರು ವಿಶಿಷ್ಟ ಪರಿಸರ, ಭೌಗೋಳಿಕ ವಿಭಿನ್ನತೆಯ ನಡುವೆ ಬದುಕು ಕಂಡಿರುವ ಕೊಡಗಿನವರಿಗೆ ಇತರೆಡೆ ಪುನರ್ವಸತಿ ಕಲ್ಪಿಸಲು ಸಾಧ್ಯವಿದೆಯೇ ಎಂದು ಪ್ರಶ್ನಿಸಿದ್ದಾರೆ. ಜನರ ಬದುಕಿಗೆ ಮಾರಕವಾಗುವ ಯೋಜನೆಗಳ ಅಗತ್ಯವಿಲ್ಲ. ಈ ಬಗ್ಗೆ ಜವಾಬ್ದಾರಿ ಹೊತ್ತವರು ತಕ್ಷಣ ಹೋರಾಟಕ್ಕಿಳಿಯಬೇಕಿದೆ ಎಂದು ಅವರು ಒತ್ತಾಯಿಸಿದ್ದಾರೆ.