ಗುಡ್ಡೆಹೊಸೂರು, ಜೂ. 10: ಇಲ್ಲಿಗೆ ಸಮೀಪದ ಚಿಕ್ಲಿಹೊಳೆ ಜಲಾಶಯದ ನಾಲೆಗಳನ್ನು ಕಾಡು ಕಡಿಯದೆ ಹೂಳೆತ್ತದೆ ಪ್ರತಿವರ್ಷ ನಾಲೆಗಳಿಗೆ ನೀರು ಬಿಡಲಾಗುತ್ತದೆ. ಬೇಸಿಗೆ ಕಾಲದಲ್ಲಿ ಈ ಕಾಮಗಾರಿ ಆರಂಭಿಸಬೇಕು ಆದರೆ ಇಲಾಖೆಗೆ ಮತ್ತು ಅಧಿಕಾರಿಗಳಿಗೆ ನಿದ್ರೆಯೇ ಬಿಡುವದಿಲ್ಲ. ಕಾರಣ ಪ್ರತಿವರ್ಷ ಅದೇ ರಾಗ ಅದೇ ಹಾಡು. ರೈತರು ಈ ವಿಷಯವನ್ನು ಅಧಿಕಾರಿಗಳಲ್ಲಿ ಕೇಳಿದರೆ ಟೆಂಡರ್ ಕರೆಯುವದು ತಡವಾಯಿತು ಎಂಬ ಉತ್ತರ ನೀಡುತ್ತಾರೆ. ಗದ್ದೆ ನಾಟಿ ಮಾಡಲು ಯಾವ ಸಮಯದಲ್ಲಿ ಸಸಿಮಡಿ ತಯಾರು ಮಾಡಬೇಕು ಮತ್ತು ಜಲಾಶಯದಿಂದ ಯಾವ ಸಮಯದಿಂದ ನಾಲೆಗಳಿಗೆ ನೀರು ಹರಿಸಬೇಕು ಎಂಬದು ಅಧಿಕಾರಿಗಳಿಗೆ ಗೊತ್ತಿದ್ದರೂ ಸರಿಯಾದ ಸಮಯದಲ್ಲಿ ಟೆಂಡರ್ ಕರೆಯದೆ ಅಧಿಕಾರಿಗಳ ಲಾಭಕೋಸ್ಕರ ಯಾವದೋ ಸಮಯದಲ್ಲಿ ಟೆಂಡರ್ ಕರೆದು ಗುತ್ತಿಗೆದಾರರಿಂದ ಕೆಲಸ ಮಾಡಿಸುತ್ತಾರೆ.

ಅನೇಕ ವರ್ಷಗಳಿಂದ ಈ ನೀರಿನ ಮತ್ತು ವಿವಿಧ ಕಾರಣಗಳಿಂದ ರೈತರು ಈ ವ್ಯಾಪ್ತಿಯ ತಮ್ಮ ಗದ್ದೆಗಳನ್ನು ಪಾಳುಬಿಡುವಂತಾಗಿದೆ ಇದಕ್ಕೆ ನೇರ ಹೋಣೆಗಾರರು ಅಂದರೆ ಸರಕಾರ, ಇಲಾಖೆಯವರು ಮತ್ತು ಸಂಬಂಧಿಸಿದ ಅಧಿಕಾರಿಗಳು ಎಂದರೆ ತಪ್ಪಾಗಲಾರದು, ಚಿಕ್ಲಿಹೂಳೆ ಜಲಾಶಯ ಅಂದರೆ ಅಧಿಕಾರಿಗಳಿಗೆ ಹಣಗಳಿಕೆಯ ಆಟಿಕೆ ವಸ್ತು ರೀತಿ ಕಾಣುತ್ತಿದೆ!

ಜಲಾಶಯದ ನಾಲಾ ವ್ಯಾಪ್ತಿಯ ಇಂಜಿನಿಯರ್ ಅವರನ್ನು ನಾಲಾ ದುರಸ್ತಿ ಬಗ್ಗೆ ವಿಚಾರಿಸಿದಾಗ ಅವರಿಂದ ದೊರೆಯುವ ಉತ್ತರವೆಂದರೆ ನಾಲೆಯ ಎಡ ದಂಡೆ ಮತ್ತು ಬಲ ದಂಡೆಯ ಹೂಳೆತ್ತುವ ಕಾಮಗಾರಿಗೆ ತಲಾ ರೂ. 2 ಲಕ್ಷ ಸರಕಾರದಿಂದ ಬಿಡುಗಡೆಯಾಗುತ್ತದೆ. ಈ ಹಣದಲ್ಲಿ ಗುತ್ತಿಗೆದಾರ ಹೇಗೆ ಕಾಮಗಾರಿ ನಡೆಸುವದು ಎಂಬ ಮಾಹಿತಿ ನೀಡುತ್ತಾರೆ. ಜಲಾಶಯದ ಉಳಿದ ಕೆಲಸಗಳಿಗೆ ಇದೆ ಹಿರಿಯ ಅಧಿಕಾರಿಗಳು ಸರಕಾರಕ್ಕೆ ಪ್ರಸ್ತಾವನೆ ನೀಡಿ ಹಣ ಬಿಡುಗಡೆಗೆ ಒತ್ತು ನೀಡುತ್ತಾರೆ. ಆದರೆ ಭತ್ತ ಬೆಳೆಯುವ ರೈತರ ಬಗ್ಗೆ ಯಾಕೆ ಈ ಧೋರಣೆ ಎಂಬದು ತಿಳಿಯುತ್ತಿಲ್ಲ. ಜಿಲ್ಲೆಯಲ್ಲಿ ಆಡಳಿತ ವ್ಯವಸ್ಥೆ ಇದೆಯೋ ಮತ್ತು ನೀರಾವರಿ ಇಲಾಖೆ ಇದೆಯೋ ಇಲ್ಲವೋ ಎಂಬದಕ್ಕೆ ಅವರೇ ಉತ್ತರ ನೀಡಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗಳು ಗಮನಹರಿಸುವಂತೆ ಅಲ್ಲಿನ ರೈತರು ಆಗ್ರಹಿಸಿದ್ದಾರೆ. ಈ ಜಲಾಶಯದ ನಾಲಾ ವ್ಯಾಪ್ತಿಯ ಗ್ರಾಮಗಳಾದ ರಂಗಸಮುದ್ರ, ನಂಜರಾಯಪಟ್ಟಣ, ಹೊಸಪಟ್ಟಣ, ಬಾಳುಗೋಡು, ಬೆಟ್ಟಗೇರಿ, ಬಸವನಹಳ್ಳಿ, ಬೊಳ್ಳುರು, ಮಾದಪಟ್ಟಣ, ಗೊಂದಿಬಸವನಹಳ್ಳಿ ಈ ವಿಭಾಗಕ್ಕೆ ನೀರು ಹರಿಸಬೇಕು. ಆದರೆ ಪ್ರತಿವರ್ಷ ಜಲಾಶಯ ತುಂಬಿ ಅಧಿಕ ನೀರು ಕಾವೇರಿ ನದಿ ಸೇರಿದರೂ ರೈತರ ಗದ್ದೆಗಳಿಗೆ ನೀರು ಹರಿಸುವಲ್ಲಿ ಅಧಿಕಾರಿ ವಿಫಲರಾಗುತ್ತಾರೆ. ಮಳೆ ಮುಂದುವರಿದು ಜಲಾಶಯ ಭರ್ತಿಯಾದರು ನಾಲೆ ಮಾತ್ರ ದಟ್ಟ ರಕ್ಷಿತಾರಣ್ಯದಂತಿದೆ. ಒಂದು ವಾರದೊಳಗೆ ನಾಲೆಯ ಹೂಳೆತ್ತುವ ಕಾಮಗಾರಿ ಆರಂಭಿಸದಿದ್ದಲ್ಲಿ ಅಲ್ಲಿನ ನಾಲಾ ವ್ಯಾಪ್ತಿಯ ರೈತರು ಸೇರಿ ಕುಶಾಲನಗರದ ಇಲಾಖಾ ಕಚೇರಿ ಮುಂದೆ ಪ್ರತಿಭಟಿಸಲಾಗುವದೆಂದು ಅಲ್ಲಿಯ ರೈತ ಹಿತರಕ್ಷಣಾ ಸಮಿತಿಯವರು ತಿಳಿಸಿದ್ದಾರೆ.

- ಗಣೇಶ್ ಕುಡೆಕ್ಕಲ್