ಮಡಿಕೇರಿ, ಜೂ.10: ಸಂಪಾಜೆ ಗ್ರಾ.ಪಂ.ವ್ಯಾಪ್ತಿಯ ಪಾಂಬೆಚಾರ್‍ನಿಂದ ಚಡಾವಿನ ಭಾಗಕ್ಕೆ ಶಾಶ್ವತ ಕುಡಿಯುವ ನೀರು ಯೋಜನೆ ಉದ್ಘಾಟನೆ, ಕೂಟೇಲು ಸೇತುವೆ, ಸಂಪಾಜೆ ಮಾದರಿ ಪ್ರಾಥಮಿಕ ಶಾಲೆ ಬೋರ್‍ವೆಲ್, ಅರೆಕಲ್ಲು ಕಾಂಕ್ರೀಟ್ ರಸ್ತೆ ಉದ್ಘಾಟನೆಯನ್ನು ಶಾಸಕರಾದ ಕೆ.ಜಿ.ಬೋಪಯ್ಯ ನೆರವೇರಿಸಿದರು.

ಪಟ್ರಕೋಡಿ ರಸ್ತೆ ಕಾಂಕ್ರೀಟ್ ಉದ್ಘಾಟನೆ, ಕಲ್ಲಾಳ ರಸ್ತೆ ಡಾಮರೀಕರಣ, ನವ ಗ್ರಾಮ ರಸ್ತೆ ಕಾಂಕ್ರೀಟ್, ಕೊಯನಾಡು ಬೈಲು ಭಾಗದ ಕಾಂಕ್ರೀಟ್ ರಸ್ತೆ ಹಾಗೂ ಸಂಪಾಜೆ ರಕ್ತೇಶ್ವರಿ ದೈವಸ್ಥಾನದ ಆವರಣಕ್ಕೆ ಅಳವಡಿಸಿದ ಇಂಟರ್‍ಲಾಕ್ ಉದ್ಘಾಟಿಸಿದರು.

ಹಾಗೆಯೇ ಬೈಲು ಭಾಗದ ಶಿರಾಡಿ ಭಾಗದ ರಸ್ತೆ ಕಾಂಕ್ರೀಟ್ ಶಂಕುಸ್ಥಾಪನೆ, ಕಲ್ಲಾಳ ಪೊನ್ನಾಟಿಯಂಡ ರಸ್ತೆ ಕಾಂಕ್ರೀಟ್ ಶಂಕುಸ್ಥಾಪನೆ, ಗುಡ್ಡೆಗದ್ದೆ ಭಾಗದ ರಸ್ತೆ ಕಾಂಕ್ರೀಟ್ ಶಂಕುಸ್ಥಾಪನೆ, ಎಸ್ಟೇಟ್ ಭಾಗದ ರಸ್ತೆ ಕಾಂಕ್ರೀಟ್ ಶಂಕುಸ್ಥಾಪನೆ, ಮಂಗಳಪಾರೆ ರಸ್ತೆ ಕಾಂಕ್ರೀಟ್, ಅರೆಕಲ್ಲು ಭಾಗದ ರಸ್ತೆ ಕಾಂಕ್ರೀಟ್, ಅರಮನೆ ತೋಟ ಬಾಳೆಹಿತ್ಲು ರಸ್ತೆ ಕಾಂಕ್ರೀಟ್, ಕುಂಟಿಕಾನ ರಸ್ತೆ ಕಾಂಕ್ರೀಟ್ ಕಾಮಗಾರಿಗಳಿಗೆ ಶಾಸಕರಾದ ಕೆ.ಜಿ.ಬೋಪಯ್ಯ ಅವರು ಶಂಕುಸ್ಥಾಪನೆ ಮಾಡಿದರು.

ಸಂಪಾಜೆಯ ಪಯಸ್ವಿನಿ ಸಹಕಾರ ಸದನದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಸಂಪಾಜೆ ಗ್ರಾಮ ಪಂಚಾಯತ್ ಜನತೆಗೆ ಅಭಿನಂದನೆ ಹಾಗೂ ವಿವಿಧ ಕಾಮಗಾರಿಗಳ ಉದ್ಘಾಟನಾ ಮತ್ತು ಶಂಕುಸ್ಥಾಪನೆ ನಂತರ ಶಾಸಕರು ಗ್ರಾ.ಪಂ.ಜನತೆಯ ಪರವಾಗಿ ಗ್ರಾ.ಪಂ.ಅಧ್ಯಕ್ಷರು ಮತ್ತು ಸದಸ್ಯರಿಗೆ ಅಭಿನಂದನೆ ಸಲ್ಲಿಸಿ ಬಳಿಕ ಕೆ.ಜಿ.ಬೋಪಯ್ಯ ಮಾತನಾಡಿದರು.

ಹಿಂದೆ ಸುವರ್ಣ ಗ್ರಾಮ ಯೋಜನೆಯಡಿ ಪ್ರತಿ ವರ್ಷ ಮೂರು ಗ್ರಾಮಗಳನ್ನು ಆಯ್ಕೆಮಾಡಿ ಅಭಿವೃದ್ಧಿ ಕೈಗೊಳ್ಳಲಾಗುತ್ತಿತ್ತು, ಇತ್ತೀಚೆಗೆ ಗ್ರಾಮ ವಿಕಾಸ ಯೋಜನೆಯಡಿ ವರ್ಷಕ್ಕೆ ಒಂದು ಗ್ರಾಮವನ್ನು ಗುರುತಿಸಿ ಅಭಿವೃದ್ಧಿ ಪಡಿಸಬೇಕಿದೆ. ಆದರೂ ಅಭಿವೃದ್ಧಿ ನಿರಂತರವಾಗಿದ್ದು, ಸರ್ಕಾರದ ಕಾರ್ಯಕ್ರಮಗಳನ್ನು ಸದ್ಬಳಕೆ ಮಾಡಿಕೊಂಡು ಸ್ವಾಭಿಮಾನ-ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳುವತ್ತ ಎಲ್ಲಾ ವರ್ಗದ ಜನರು ಮುಂದಾಗಬೇಕಿದೆ.

ಭಾರತ ಸರ್ಕಾರದಿಂದ ಎಲ್ಲಾ ವರ್ಗದ ಜನರ ಬದುಕು ಹಸನುಗೊಳಿಸುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಜೀವನ ಭದ್ರತೆಗಾಗಿ ಜೀವನ್ ಸುರಕ್ಷಾ, ಜೀವನ್ ಜ್ಯೋತಿ, ಅಟಲ್ ಪೆನ್ಷನ್ ಯೋಜನೆ, ಹಾಗೆಯೇ ಮುಂದ್ರಾ ಹೀಗೆ ನಾನಾ ಕಾರ್ಯಕ್ರಮಗಳ ಪ್ರಯೋಜನ ಪಡೆಯುವಂತೆ ಶಾಸಕರು ತಿಳಿಸಿದರು.

ಸಂಪಾಜೆ ಗ್ರಾ.ಪಂ.ಅಧ್ಯಕ್ಷ ಬಾಲಚಂದ್ರ ಕಳಗಿ ಅವರು ಮಾತನಾಡಿ ಸಂಪಾಜೆ ಗ್ರಾ.ಪಂ. ವ್ಯಾಪ್ತಿಯಲ್ಲಿ ನೈಸರ್ಗಿಕ ಸಂಪನ್ಮೂಲ ಬಳಸಿಕೊಂಡು ವಿದ್ಯುತ್, ಕುಡಿಯುವ ನೀರು ಒದಗಿಸಲು ಪ್ರಯತ್ನಿಸಲಾಗಿದೆ. ಸುಮಾರು 8 ಕಡೆಗಳಲ್ಲಿ 630 ಮನೆಗಳಿಗೆ ನೈಸರ್ಗಿಕ ಕುಡಿಯುವ ನೀರು ಪೂರೈಸಲಾಗುತ್ತಿದೆ. ಹಾಗೆಯೇ ವಿದ್ಯುತ್ ಸಂಪರ್ಕ ಕಲ್ಪಿಸಲು ಮುಂದಾಗಿದ್ದು, ಇದೊಂದು ಮಾದರಿ ಎಂದು ಬಾಲಚಂದ್ರ ಕಳಗಿ ನುಡಿದರು.

ಸಂಪಾಜೆ ಗ್ರಾ.ಪಂ.ನಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕಿದ್ದು, ಗ್ರಾ.ಪಂ.ಸಭಾಂಗಣ, ಬಿಎಸ್‍ಎನ್‍ಎಲ್ ನೆಟ್‍ವರ್ಕ್ ಸೌಲಭ್ಯ, ಕೊಯನಾಡು ಸೇತುವೆ, ರಸ್ತೆಯಾಗದಿರುವ ಗ್ರಾಮಗಳಿಗೆ ಡಾಂಬರು ರಸ್ತೆ, ಕಸವಿಲೇವಾರಿಗೆ ಜಾಗ ಒದಗಿಸುವದು, ಬಾಕಿ ಇರುವ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ, ಹೀಗೆ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆಯಬೇಕಿದೆ ಎಂದರು.

ತಾ.ಪಂ.ಸದಸ್ಯ ನಾಗೇಶ್ ಕುಂದಲ್ಪಾಡಿ ಮಾತನಾಡಿ ರಾಷ್ಟ್ರ ಮಟ್ಟದ ಪ್ರಶಸ್ತಿ ಪಡೆಯುವದರ ಜೊತೆಗೆ, ಪ್ರಶಸ್ತಿ ಉಳಿಸಿಕೊಳ್ಳುವಲ್ಲಿ ಎಲ್ಲರೂ ಕೈಜೋಡಿಸಬೇಕಿದೆ, ಆ ದಿಸೆಯಲ್ಲಿ ತೆರಿಗೆ ಪಾವತಿ, ಸ್ವಚ್ಛತೆ ಕಡೆ ವಿಶೇಷ ಗಮನಹರಿಸಬೇಕಿದೆ ಎಂದು ಕಿವಿಮಾತು ಹೇಳಿದರು.

ಜಿಲ್ಲೆಯಲ್ಲಿ ಮುಂಗಾರು ಆರಂಭವಾಗಿದ್ದು, ಸಾಂಕ್ರಾಮಿಕ ರೋಗಗಳಿಂದ ದೂರವಿರಲು ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಆದ್ದರಿಂದ ಆರೋಗ್ಯದ ಕಡೆ ಹೆಚ್ಚಿನ ನಿಗಾ ವಹಿಸಬೇಕು. ಜನ ಸಾಮಾನ್ಯರು ಗುಣಮಟ್ಟದ ಬದುಕು ನಡೆಸುವಂತಾಗ ಬೇಕು. ಆ ದಿಸೆಯಲ್ಲಿ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು ಎಂದು ನಾಗೇಶ್ ಕುಂದಲ್ಪಾಡಿ ಅವರು ತಿಳಿಸಿದರು.

ಜಿ.ಪಂ.ಅಧ್ಯಕ್ಷ ಬಿ.ಎ.ಹರೀಶ್ ಮಾತನಾಡಿ ಸ್ಥಳೀಯ ಸಂಸ್ಥೆಗಳಿಗೆ ತನ್ನದೇ ಆದ ಅಧಿಕಾರವಿದ್ದು, ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಿದಲ್ಲಿ ಗ್ರಾಮೀಣ ಅಭಿವೃದ್ಧಿ ಸಾಧ್ಯ ಎಂದರು.

ಜಿ.ಪಂ.ಸದಸ್ಯ ಕೆ.ಕೆ.ಕುಮಾರ, ಪ್ರಮುಖರಾದ ಎನ್.ಎಸ್. ದೇವಿಪ್ರಸಾದ್, ತಳೂರು ಕಿಶೋರ್ ಕುಮಾರ್, ಎಪಿಎಂಸಿ ಸದಸ್ಯರಾದ ದೇವಪ್ಪ, ಗಣಪತಿ, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಸ್ಥಳೀಯರು ಇದ್ದರು. ಬಸವ ವಸತಿ ಯೋಜನೆಯ ಆದೇಶ ಪತ್ರವನ್ನು ಇದೇ ಸಂದರ್ಭದಲ್ಲಿ ಅರ್ಹರಿಗೆ ಕೆ.ಜಿ.ಬೋಪಯ್ಯ ವಿತರಿಸಿದರು. ಬಳಿಕ ಸಾರ್ವಜನಿಕರ ಅಹವಾಲು ಆಲಿಸಿದರು.

ಆತ್ಮೀಯ ಸನ್ಮಾನ: ದೀನ್ ದಯಾಳ್ ಉಪಾಧ್ಯಾಯ ಸಶಕ್ತೀಕರಣ ರಾಷ್ಟ್ರ ಪ್ರಶಸ್ತಿ ಪಡೆದಿರುವ ಸಂಪಾಜೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಸದಸ್ಯರು ಹಾಗೂ ಆಡಳಿತ ಮಂಡಳಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಕೆ.ಜಿ.ಬೋಪಯ್ಯ ಸನ್ಮಾನಿಸಿದರು.

ಸಂಪಾಜೆ ಗ್ರಾ.ಪಂ.ಅಧ್ಯಕ್ಷರಾದ ಬಾಲಚಂದ್ರ ಕಳಗಿ, ಉಪಾಧ್ಯಕ್ಷರಾದ ಬಿ.ಆರ್.ಸುಂದರ, ಸದಸ್ಯರಾದ ಕುಮಾರ ಚಿದ್ಕಾರ್, ಬಿ.ಎನ್.ರಾಜೇಶ್, ಯಮುನಾ ಗಿರೀಶ್, ಗಿರೀಶ್ ಮೋಹನ್, ಮಾಲತಿ ನಾರಾಯಣ ಅವರನ್ನು ಸನ್ಮಾನಿಸಲಾಯಿತು.