ಭಾಗಮಂಡಲ, ಜೂ. 10: ಕಾವೇರಿ ವನ್ಯಧಾಮವನ್ನು ಸೂಕ್ಷ್ಮ ಪರಿಸರ ತಾಣ ವ್ಯಾಪ್ತಿಗೆ ಸೇರ್ಪಡೆಗೊಳಿಸಿ ಬಫರ್ ಜೋನ್ ಮಿತಿಯನ್ನು 1 ಕಿ.ಮೀ. ವಿಸ್ತರಿಸಿರು ವದನ್ನು ಶೂನ್ಯ ಮಿತಿಗೆ ಇಳಿಸಲು ಅಧಿವೇಶನದಲ್ಲಿ ಪ್ರಸ್ತಾಪಿಸಿ, ಪ್ರಯತ್ನಿಸುವದಾಗಿ ಶಾಸಕ ಕೆ.ಜಿ. ಬೋಪಯ್ಯ ಪ್ರತಿಭಟನಾಕಾರರಿಗೆ ಭರವಸೆ ನೀಡಿದರು.ಸೂಕ್ಷ್ಮ ಪರಿಸರ ತಾಣವನ್ನು ವಿರೋಧಿಸಿ ಇಲ್ಲಿನ ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟ ಸಮಿತಿ ವತಿಯಿಂದ ವಲಯ ಅರಣ್ಯ ಕಚೇರಿ ಎದುರು ಹಮ್ಮಿಕೊಂಡಿದ್ದ ಎರಡನೇ ದಿನದ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಸೋಮವಾರ ಸೂಕ್ಷ್ಮ ಪರಿಸರ ತಾಣದ ವಿಚಾರದ ಬಗ್ಗೆ ಪ್ರಸ್ತಾಪಿಸಲು

(ಮೊದಲ ಪುಟದಿಂದ) ಸಮಾಯಾವಕಾಶ ಕೋರಲಾಗಿದೆ. ಕಂದಾಯ ಹಾಗೂ ಅರಣ್ಯ ಇಲಾಖೆ ಸಚಿವರೊಂದಿಗೆ ಚರ್ಚಿಸಿ ಬಫರ್ ಜೋನ್ ಮಿತಿಯನ್ನು ಸಡಿಲಗೊಳಿಸಲು ಪ್ರಯತ್ನಿಸುವದಾಗಿ ಹೇಳಿದರು.

ಸ್ಥಳಕ್ಕಾಗಮಿಸಿದ ಅರಣ್ಯ ಉಪ ಸಂರಕ್ಷಣಾಧಿಕಾರಿ ಜಯ ಅವರು ಸೂಕ್ಷ್ಮ ಪರಿಸರ ತಾಣದಿಂದ ಯಾವದೇ ತೊಂದರೆಯಿಲ್ಲ. ಕೃಷಿ ಚಟುವಟಿಕೆ, ಮನೆ ಕಟ್ಟಲು ಯಾವದೇ ತೊಂದರೆಯಾಗುವದಿಲ್ಲ. 1 ಕಿಮೀ. ವರೆಗೆ ಮಾತ್ರ ಬಫರ್ ಜೋನ್ ಮಿತಿ ಇರುತ್ತದೆ. ಸೋಮವಾರ ಜಿಲ್ಲಾಧಿಕಾರಿ, ಕಂದಾಯಾಧಿಕಾರಿಗಳ ಸಭೆ ಏರ್ಪಡಿಸಲಾಗಿದೆ. ತಾವುಗಳು ಸಭೆಗೆ ಆಗಮಿಸಿ ತಮ್ಮ ಅಹವಾಲು ಸಲ್ಲಿಸಬಹುದೆಂದು ಮನವಿ ಮಾಡಿದರು.

ಈ ಸಂದರ್ಭ ಮಾತನಾಡಿದ ಕಾಳನ ರವಿ ನಮಗೆ ಯಾವದೇ ಅಹವಾಲು ಇರುವದಿಲ್ಲ. ಈ ಹಿಂದೆಯೇ ಗ್ರಾಮಸ್ಥರೆಲ್ಲ ಸೇರಿ ಗ್ರಾಮ ಸಭೆಯಲ್ಲಿ ನಿರ್ಣಯ ಕೈಗೊಂಡು ಸಲ್ಲಿಸಲಾಗಿದೆ. ನಮ್ಮ ಹೋರಾಟದ ಕೂಗಿಗೆ ಸ್ಪಂದಿಸುವ ಕೆಲಸವಾಗಬೇಕೆಂದು ಹೇಳಿದರು.

ಶಾಸಕರ ಭೇಟಿ ಸಂದರ್ಭ ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಸದಸ್ಯ ಕುಮಾರ್, ತಳೂರು ಕಿಶೋರ್ ಕುಮಾರ್ ಇದ್ದರು.

ಪ್ರತಿಭಟನೆಯಲ್ಲಿ ಕುದುಕುಳಿ ಭರತ್, ಪುರುಷೋತ್ತಮ, ರಾಜಾ ರೈ, ಅಮೆ ಬಾಲಕೃಷ್ಣ, ಅಮೆ ಪದ್ಮಯ್ಯ ಇನ್ನಿತರರಿದ್ದರು.

ವೃತ್ತ ನಿರೀಕ್ಷಕ ಪ್ರದೀಪ್, ಠಾಣಾಧಿಕಾರಿ ಸದಾಶಿವಯ್ಯ, ನಾಪೋಕ್ಲು ಠಾಣಾಧಿಕಾರಿ ವೆಂಕಟೇಶ್, ಸಿಬ್ಬಂದಿಗಳು ಬಂದೋಬಸ್ತ್ ಕಲ್ಪಿಸಿದ್ದರು.