ಮಡಿಕೇರಿ, ಜೂ. 10: ಗುಡು... ಗುಡು... ಗುಡು.... ಎಂಬ ಭಾರೀ ಶಬ್ಧ... ಬಗೆ ಬಗೆಯ ಮಾದರಿ... ಗಾತ್ರದ ಬೈಕ್‍ಗಳು... ಇದರ ಬೆಲೆಯಂತೂ ಹಲವು ಲಕ್ಷಗಳಲ್ಲೇ... ಮಳೆ... ಚಳಿಯ ನಡುವೆ ಉತ್ಸಾಹಭರಿತ ಬೈಕ್ ರೈಡರ್‍ಗಳು... ಸುಖಾಸೀನ ಮಾದರಿಯ ಸೀಟ್‍ಗಳಲ್ಲಿ ಕುಳಿತು ಆರಾಮದಾಯಕವಾಗಿ ಬೈಕ್ ಚಾಲಿಸುತ್ತಿದ್ದ ಸಂಭ್ರಮ ಮಡಿಕೇರಿಯ ಹೊರ ವಲಯದಲ್ಲಿ ವಿಶೇಷ ಗಮನ ಸೆಳೆಯಿತು. ದುಬಾರಿ ಬೆಲೆಯ ಬೈಕ್‍ಗಳಲ್ಲಿ ಮಂಜಿನ ನಗರಿಗೆ ಆಗಮಿಸಿದ್ದ ಇವರೆಲ್ಲ ಕೊಡಗಿನವರಲ್ಲ... ದೇಶದ ವಿವಿಧೆಡೆಗಳಿಂದ ಸುಮಾರು 50ಕ್ಕೂ ಅಧಿಕ ಬೈಕ್‍ಗಳಲ್ಲಿ ಆಗಮಿಸಿದ ಬೈಕ್ ಪ್ರಿಯರು ದೊಡ್ಡ ದೊಡ್ಡ ಕಂಪೆನಿಗಳ ಮಾಲೀಕರು, ಉನ್ನತ ಹುದ್ದೆಯಲ್ಲಿರುವವರಾಗಿದ್ದರು. ಪ್ರತಿಯೊಬ್ಬ ವ್ಯಕ್ತಿಗೆ ಒಂದಲ್ಲಾ ಒಂದು ಹವ್ಯಾಸ ಇರುವದು ಸಹಜ. ಶ್ರೀಮಂತಿಕೆಯ ನಡುವೆ ಇವರಿಗೆ ಇರುವದು ಬೈಕ್ ರೈಡಿಂಗ್‍ನ ಹವ್ಯಾಸ... ಇಂತಹ ಆಸಕ್ತಿ ಇರುವ ಒಂದಷ್ಟು ಮಂದಿ ದೇಶದ ಬೇರೆ ಬೇರೆ ಕಡೆಗಳಿಂದ ಪ್ರತ್ಯೇಕವಾಗಿ ಆಗಮಿಸಿ ನಗರದ ಹೊರ ವಲಯದಲ್ಲಿರುವ ಐಷಾರಾಮಿ ರೆಸಾರ್ಟ್‍ವೊಂದರಲ್ಲಿ ವಾಸ್ತವ್ಯ ಹೂಡಿದ್ದರು. ಶ್ರೀಮಂತ ವ್ಯಕ್ತಿಗಳ ಮೋಜು... ಮಜಾದ ವಿಚಾರ ನಮಗ್ಯಾಕೆಬೇಕು ಎಂದು ಮುಖ ಸಿಂಡರಿಸಬೇಡಿ... ಈ ಹವ್ಯಾಸದೊಂದಿಗೆ ಆಗಮಿಸಿದ್ದವರಲ್ಲಿ ಒಂದಷ್ಟು ಸಾಮಾಜಿಕ ಕಳಕಳಿಯೂ ಇತ್ತು.

(ಮೊದಲ ಪುಟದಿಂದ) ಅಮೇರಿಕಾದ ಪ್ರಥಮ ಮೋಟಾರ್ ಸೈಕಲ್ ಕಂಪೆನಿಯಾದ ಇಂಡಿಯನ್ ಮೋಟಾರ್ ಸೈಕಲ್ ರೈಡರ್ಸ್ ಗ್ರೂಪ್‍ನ ಸದಸ್ಯರಿವರು. ಪುರುಷರು, ಮಹಿಳೆಯರು, ವಯಸ್ಕರು ಸೇರಿದಂತೆ ಒಂದು ತಂಡವಾಗಿ ಗುರುತಿಸಿಕೊಂಡಿರುವ ಇವರು ಪ್ರತಿ ಮೂರು ತಿಂಗಳಿಗೊಮ್ಮೆ ರಾಷ್ಟ್ರದ ವಿವಿಧೆಡೆಗಳಿಗೆ ಬೈಕ್ ರೈಡ್ ಮಾಡಿಕೊಂಡು ತೆರಳುತ್ತಾರೆ. ಇದರೊಂದಿಗೆ ಹೋದ ಕಡೆಗಳಲ್ಲಿ ಒಂದಷ್ಟು ಸಾಮಾಜಿಕ ಕಳಕಳಿ ತೋರುವದು ಈ ತಂಡದ ವಿಶೇಷತೆ. ಈ ವರ್ಷ ಈ ತಂಡದ ಚಿಂತನೆ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಸಹಕಾರ ನೀಡುವದಾಗಿದೆ.

ಅಹಮದಾಬಾದ್, ಮುಂಬಯಿ, ಕೊಚ್ಚಿನ್, ನಾಗಪುರ, ಚೆನ್ನೈ, ದೆಹಲಿ, ಬೆಂಗಳೂರು ಕಡೆಯ ರೈಡರ್‍ಗಳನ್ನು ಒಳಗೊಂಡಿರುವ ಈ ತಂಡದ ಈ ವಾರಾಂತ್ಯದ ಆಯ್ಕೆ ಕೊಡಗು. ಟ್ರಿಪ್‍ನ ಆಯೋಜಕರಾದ ಲಿಕ್ವಿಡ್ ಸ್ಪೇಸ್ ಎಂಟರ್‍ಟೈನ್‍ಮೆಂಟ್ ಸಂಸ್ಥೆಯವರಾದ ಕೊಡಗಿನ ಅಮ್ಮತ್ತಿಯ ನೆಲ್ಲಮಕ್ಕಡ ಲವಿನ್ ಹಾಗೂ ಸಚಿನ್ ಸಹೋದರರು ಅಗತ್ಯ ವ್ಯವಸ್ಥೆ ಕಲ್ಪಿಸಿದ್ದರು.

ಸಾಮಾಜಿಕ ಕಳಕಳಿಯ ಚಿಂತನೆಗೆ ಆರಿಸಿಕೊಂಡಿದ್ದು ಗಾಳಿಬೀಡುವಿನ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಹಾಗೂ ಮಡಿಕೇರಿಯ ಬಾಲ ಭವನದ ವಿದ್ಯಾರ್ಥಿಗಳನ್ನು. ಕೊಡಗಿನಲ್ಲಿ ಮಳೆಗಾಲ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ಇಲ್ಲಿನ ಎಲ್ಲಾ ಮಕ್ಕಳಿಗೆ ರೈನ್‍ಕೋಟ್, ಆಟದ ಸಾಮಗ್ರಿ, ಪೆನ್, ಪೆನ್ಸಿಲ್‍ನಂತಹ ವಸ್ತುಗಳನ್ನು ಮಕ್ಕಳಿಗೆ ಗಾಳಿಬೀಡು ಪ್ರೌಢಶಾಲೆಯಲ್ಲಿ ಉಚಿತವಾಗಿ ವಿತರಿಸಲಾಯಿತು. ಇದರೊಂದಿಗೆ ಗಾಳಿಬೀಡು ಪ್ರೌಢಶಾಲೆಗೆ ಎರಡು ಕಂಪ್ಯೂಟರ್ ಅನ್ನು ನೀಡಲಾಯಿತಲ್ಲದೆ, ಕಂಪ್ಯೂಟರ್ ಕೊಠಡಿಯನ್ನೂ ದುರಸ್ತಿಮಾಡಿಕೊಡಲಾಗಿದೆ.

ಈ ಬಗ್ಗೆ ಪತ್ರಕರ್ತರೊಂದಿಗೆ ಪ್ರತಿಕ್ರಿಯಿಸಿದ ಇಂಡಿಯನ್ ಮೋಟಾರ್ ಸೈಕಲ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ದುಬೆ ಅವರು ತಂಡದ ಚಟುವಟಿಕೆ ಬಗ್ಗೆ ಮಾಹಿತಿ ನೀಡಿ ಈ ಹವ್ಯಾಸದೊಂದಿಗೆ ಹೋದ ಕಡೆಗಳಲ್ಲಿ ಒಂದಷ್ಟು ನೆರವು ನೀಡುವ ಕೆಲಸ ಮಾಡಲಾಗುತ್ತಿದೆ. ಈ ಬಾರಿ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಸಹಕಾರ ನೀಡುವ ಗುರಿ ಹೊಂದಲಾಗಿದೆ. ಹೆಣ್ಣುಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಅವರು ಶಿಕ್ಷಿತರಾದರೆ ಸಮಾಜ, ರಾಷ್ಟ್ರಕ್ಕೆ ಪ್ರಯೋಜನವಾಗುತ್ತದೆ ಎಂದರು.

ರೂ. 16 ಲಕ್ಷದಿಂದ ಶುರು...

ಬಗೆ ಬಗೆಯ ಬೈಕ್‍ಗಳು ನೋಡುಗರ ಗಮನ ಸೆಳೆದವು. ಬೈಕ್‍ನ ಧಾರಣೆ ಕನಿಷ್ಟ ರೂ. 16 ಲಕ್ಷ ಮೇಲ್ಪಟ್ಟದ್ದಾಗಿದ್ದು, ಒಂದೊಂದು ಬೈಕ್‍ಗಳು ಒಂದೊಂದಕ್ಕಿಂತ ವಿಭಿನ್ನವಾಗಿತ್ತು.

ಕೆಲವು ಬೈಕ್‍ಗಳಲ್ಲಿ ‘ಸ್ಟೀರಿಯೋ ಸೆಟ್'ನೊಂದಿಗೆ ಸಂಗೀತ ಆಲಿಸುತ್ತಾ, ಸವಾರರು ಸಂಭ್ರಮದಿಂದ ಚಾಲಿಸುತ್ತಿದ್ದರು. 116 ವರ್ಷದ ಇತಿಹಾಸ ಹೊಂದಿರುವ ಇಂಡಿಯನ್ ಮೋಟಾರ್ ಸೈಕಲ್ ಸಂಸ್ಥೆಯ 9 ಮಾದರಿಯ ಬೈಕ್‍ಗಳಿದ್ದವು. ಸ್ಕಾಟ್-60, ಸ್ಕೌಟ್, ಡಾರ್ಕ್ ಹಾರ್ಸ್, ಕ್ಲಾಸಿಕ್, ವಿಂಟೇಜ್, ಸ್ಪ್ರಿಂಗ್ ಫೀಲ್ಡ್, ಚಿಫ್ಟೆನ್, ರೋಡ್ ಮಾಸ್ಟರ್‍ನೊಂದಿಗೆ ಟ್ರ್ಯಾಂಪ್, ಡುಕಾಟಿ, ಹಾರ್ಲಿಡೇವಿಡ್ಸ್ ಮತ್ತಿತರ ಹೆಸರಿನ ವಿವಿಧ ಬಗೆಯ ಮೋಟಾರ್ ಸೈಕಲ್‍ಗಳು, ಬೈಕ್ ಆಸಕ್ತರ ಗಮನ ಸೆಳೆದವು.