ವೀರಾಜಪೇಟೆ: ಪರಿಸರ ನಮ್ಮ ಜೀವಿತಕ್ಕೆ ಶುದ್ಧ ಗಾಳಿ, ನೀರು ಎಲ್ಲವನ್ನು ನೀಡುತ್ತಿರುವಾಗ ಪರಿಸರವನ್ನು ಸಂರಕ್ಷಿಸುವದು ಅಗತ್ಯ ಎಂದು ವೀರಾಜಪೇಟೆ ಸಮುಚ್ಛಯ ನ್ಯಾಯಾಲಯದ ಅಪರ ಸಿವಿಲ್ ನ್ಯಾಯಾಧೀಶ ಬಿ.ಕೆ. ಮನು ಅಭಿಪ್ರಾಯಪಟ್ಟರು.

ತಾಲೂಕು ಕಾನೂನು ಸೇವೆಗಳ ಸಮಿತಿ, ವೀರಾಜಪೇಟೆ ವಕೀಲರ ಸಂಘ ಹಾಗೂ ಇಲ್ಲಿನ ಸರಕಾರಿ ಪದವಿಪೂರ್ವ ಕಾಲೇಜು, ಕಾವೇರಿ ಇಕೋ ಕ್ಲಬ್ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಮುಖ್ಯ ಅತಿಥಿಯಾಗಿದ್ದ ವಕೀಲರ ಸಂಘದ ಅಧ್ಯಕ್ಷ ಎನ್.ಜಿ. ಕಾಮತ್, ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಮೋಹನ್, ವಕೀಲ ಕೆ.ವಿ. ಸುನೀಲ್ ಮಾತನಾಡಿದರು.

ವೇದಿಕೆಯಲ್ಲಿ ವಕೀಲ ಕೃಷ್ಣಮೂರ್ತಿ, ಕಾಲೇಜಿನ ಉಪ ಪ್ರಾಂಶುಪಾಲೆ ಕೆ.ಕೆ. ಅಂಬುಜಾ, ಉಪನ್ಯಾಸಕಿ ಎನ್.ಕೆ. ಜ್ಯೋತಿ ಮುಂತಾದವರು ಉಪಸ್ಥಿತರಿದ್ದರು. ಚಾಲ್ರ್ಸ್ ಡಿಸೋಜ ಸ್ವಾಗತಿಸಿ, ನಿರೂಪಿಸಿದರೆ. ಎನ್.ಎಸ್.ಎಸ್. ಅಧಿಕಾರಿ ದಿನೇಶ್ ವಂದಿಸಿದರು.

ಈ ಸಂದರ್ಭ ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಶಶಿ ಸುಬ್ರಮಣಿ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪಟ್ರಪಂಡ ರಘು ನಾಣಯ್ಯ, ಅರಣ್ಯ ಉಪ ವಲಯಾಧಿಕಾರಿ ಸುಬ್ರಾಯ, ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಸೋಮವಾರಪೇಟೆ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸ್ಥಳೀಯ ಯುವಕರ ತಂಡ ಶಾಲಾ-ಕಾಲೇಜು ಸೇರಿದಂತೆ ಕೆಲವಾರು ಮನೆಗಳಿಗೆ ತೆರಳಿ ಗಿಡಗಳನ್ನು ವಿತರಿಸಿ ಪರಿಸರ ದಿನವನ್ನು ಅರ್ಥಪೂರ್ಣಗೊಳಿಸಿದರು.

ಕೆ.ಡಿ. ಕ್ರಿಯೇಷನ್ ತಂಡದ ಸದಸ್ಯರುಗಳಾದ ಸುಜಿತ್ ಡಿಸೋಜ, ಕಿರಣ್, ಹ್ಯಾರಿ ಡಿಸೋಜ, ಮ್ಯಾಕ್ಸಿಮ್, ಅಂತೋಣಿ, ಚರಣ್, ಮೆಲ್ಫಿನ್, ವಿನು ಮತ್ತು ಜಾನ್ ಅವರುಗಳು ನಗರದ ಸಂತ ಜೋಸೆಫರ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಕಾಲೇಜು, ಓಎಲ್‍ವಿ ಶಾಲೆಗಳಿಗೆ ತೆರಳಿ ಶಾಲಾ ಆವರಣದಲ್ಲಿ ಗಿಡಗಳನ್ನು ನೆಟ್ಟರು.

ಮಡಿಕೇರಿ: ಇಲ್ಲಿನ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ನಗರದ ಮುಖ್ಯ ಬೀದಿಗಳಲ್ಲಿ ಸಂಚರಿಸುವ ಮೂಲಕ ಜಾಗೃತಿ ಮೂಡಿಸಿದರು. ಪರಿಸರ ಉಳಿಸಿ-ಕಾಡನ್ನು ಬೆಳೆಸಿ ಎಂಬ ಘೋಷ ವಾಕ್ಯದೊಂದಿಗೆ ವಿದ್ಯಾರ್ಥಿಗಳು ಅರಿವು ಮೂಡಿಸಿ ಸಾರ್ವಜನಿಕರ ಗಮನ ಸೆಳೆದರು.

ಶ್ರೀಮಂಗಲ: ಶ್ರೀಮಂಗಲ ಜೂನಿಯರ್ ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಶ್ರೀಮಂಗಲ ಜೂನಿಯರ್ ಕಾಲೇಜಿನ ವಿದ್ಯಾರ್ಥಿಗಳು, ಆಡಳಿತ ಮಂಡಳಿ ಸದಸ್ಯರು ಹಾಗೂ ಉಪನ್ಯಾಸಕರು ಕಾರ್ಯಕ್ರಮಕ್ಕೆ ಸಹಯೋಗ ನೀಡಿದರು.

ಶ್ರೀಮಂಗಲ ಜೂನಿಯರ್ ಕಾಲೇಜಿನ ಆಡಳಿತ ಮಂಡಳಿ ಸದಸ್ಯ ಕಳ್ಳಂಗಡ ರಜಿತ್ ಪೂವಣ್ಣ ಗಿಡ ನೆಡುವದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾಲೇಜಿನ ದೈಹಿಕ ಶಿಕ್ಷಕ ಚೇಂದಿರ ಬೋಪಣ್ಣ, ಉಪನ್ಯಾಸಕರಾದ ಬಸಪ್ಪ, ಬಾಲಕೃಷ್ಣ, ಅರಣ್ಯ ಮಹಾವಿದ್ಯಾಲಯ ಹಾಗೂ ಶ್ರೀಮಂಗಲ ಜೂನಿಯರ್ ಕಾಲೇಜಿನ ವಿದ್ಯಾರ್ಥಿಗಳು ಹಾಜರಿದ್ದರು.

ಸುಂಟಿಕೊಪ್ಪ: ಗದ್ದೆಹಳ್ಳದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷ ಪಿ.ಆರ್. ಸುಕುಮಾರ್ ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಗೆ ಚಾಲನೆ ನೀಡಿದರು.

ಎಲ್ಲರೂ ಮನೆಯ ವಠಾರದಲ್ಲಿ ಮರ-ಗಿಡಗಳನ್ನು ಬೆಳೆಸುವ ಮೂಲಕ ಪರಿಸರ ಸಂರಕ್ಷಣೆಯಲ್ಲಿ ತೊಡಗುವಂತೆ ಕರೆ ನೀಡಿದರು. ಈ ಸಂದರ್ಭ ಗ್ರಾ.ಪಂ. ಸದಸ್ಯರುಗಳಾದ ಕೆ.ಇ. ಕರೀಂ, ನಾಗರತ್ನ ಸುರೇಶ್, ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷೆ ರೇಷ್ಮ, ಶಾಲಾ ಮುಖ್ಯೋಪಾಧ್ಯಾಯಿನಿ ಮೀನಾಕ್ಷಿ, ಸಹ ಶಿಕ್ಷಕಿಯರು ಉಪಸ್ಥಿತರಿದ್ದರು.

ಕೊಡ್ಲಿಪೇಟೆ: ಕೊಡ್ಲಿಪೇಟೆ ಸುನ್ನಿ ಸ್ಟುಡೆಂಟ್ ಫೆಡರೇಷನ್ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಬ್ಯಾಡಗೊಟ್ಟ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಸಸಿಗಳನ್ನು ನೆಡಲಾಯಿತು. ಸಂಸ್ಥೆಯ ಮುಖಂಡ ಮಹಮದ್ ಹನೀಫ್, ಇಸ್ಮಾಯಿಲ್, ಶಾಲಾ ಮುಖ್ಯ ಶಿಕ್ಷಕಿ ಭಾಗ್ಯ ಮುಂತಾದವರು ಇದ್ದರು.