*ನಾಪೋಕ್ಲು, ಜೂ. 10: ಚೆಯ್ಯಂಡಾಣೆ ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ ಗೊಬ್ಬರ ದಾಸ್ತಾನು ನಿರ್ವಹಣೆಯಲ್ಲಿ ವ್ಯತ್ಯಾಸದೊಂದಿಗೆ ಅಂದಾಜು ರೂ. 18 ಲಕ್ಷ ದುರುಪಯೋಗದ ಶಂಕೆ ವ್ಯಕ್ತಗೊಂಡಿದೆ. ಮೂಲಗಳ ಪ್ರಕಾರ ಕೆಲವು ತಿಂಗಳ ಹಿಂದೆ ಈ ವಿ.ಎಸ್.ಎಸ್.ಎನ್.ಗೆ ನೂತನ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದಿದೆ.

ಆಡಳಿತ ಪ್ರಮುಖರು ಕಳೆದ ತಾ. 30.5.2017 ರಂದು ನಡೆಸಿದ ಸಭೆಯಲ್ಲಿ ಸಂಘದ ಲೆಕ್ಕಪತ್ರಗಳನ್ನು ಗಮನಿಸುವದರೊಂದಿಗೆ ಗೊಬ್ಬರ ದಾಸ್ತಾನು ಇತ್ಯಾದಿಯ ಮಾಹಿತಿ ಕಲೆ ಹಾಕಿದಾಗ ಸಿಬ್ಬಂದಿಗಳಿಂದ ಸಮರ್ಪಕ ಉತ್ತರ ಸಿಗಲಿಲ್ಲವೆಂದು ತಿಳಿದು ಬಂದಿದೆ. ಈ ಸಂಬಂಧ ವಿ.ಎಸ್.ಎಸ್.ಎನ್. ಕಾರ್ಯದರ್ಶಿ ಸಿ.ಎಂ. ಗೋಪಿ, ಲೆಕ್ಕಾಧಿಕಾರಿ ಉಮಾವತಿ ಹಾಗೂ ಸಿಬ್ಬಂದಿಗಳಾದ ಬಿ.ಎಸ್. ಅಯ್ಯಪ್ಪ, ಸಿ.ಕೆ. ಚಂಗಪ್ಪ ಹಾಗೂ ದೇವಪ್ಪ ಇವರುಗಳಿಂದ ಸೂಕ್ತ ಸಮಜಾಯಿಷಿಕೆ ಕೇಳಿ ಆಡಳಿತ ಮಂಡಳಿಯು ನೋಟಿಸ್ ಜಾರಿಗೊಳಿಸಿದೆ. ಜೊತೆಗೆ ವಿ.ಎಸ್.ಎಸ್.ಎನ್.ನಲ್ಲಿರುವ ದಾಸ್ತಾನುಗಳ ಮಾಹಿತಿ ಕಲೆ ಹಾಕುತ್ತಿದೆ ಎಂದು ಗೊತ್ತಾಗಿದೆ. ಈ ಕುರಿತು ವಿ.ಎಸ್.ಎಸ್.ಎನ್. ಅಧ್ಯಕ್ಷ ಪಿ.ಎಸ್. ಮಾದಪ್ಪ ಅವರನ್ನು ಸಂಪರ್ಕಿಸಿದಾಗ, ಹಗರಣದ ಸತ್ಯಾಸತ್ಯತೆ ಕುರಿತು ಇನ್ನಷ್ಟೇ ತಿಳಿಯಬೇಕಿದೆ ಎಂದು ಪ್ರತಿಕ್ರಿಯಿಸಿದ್ದು, ದುರುಪಯೋಗ ನಡೆದಿದ್ದರೆ ಆಡಳಿತ ಮಂಡಳಿ ಅಗತ್ಯ ಕ್ರಮ ಕೈಗೊಳ್ಳಲಿರುವದಾಗಿ ಸ್ಪಷ್ಟಪಡಿಸಿದ್ದಾರೆ.