ಕೂಡಿಗೆ, ಜೂ. 10: ಕೂಡಿಗೆ ಗ್ರಾ.ಪಂ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದಲ್ಲಿರುವ ಆದಿವಾಸಿ ಕುಟುಂಬಗಳಿಗೆ ಈಗಾಗಲೇ ಭೂ ಸೇನಾ ನಿಗಮದ ವತಿಯಿಂದ ನಿರ್ಮಿಸಲಾಗುತ್ತಿರುವ ತಾತ್ಕಾಲಿಕ ಮನೆಗಳು ವಾಸವಿರಲು ಯೋಗ್ಯವಾಗಿಲ್ಲ. 18 ಅಡಿ ಉದ್ದ ಮತ್ತು 10 ಅಡಿ ಅಗಲದ ಶೆಡ್‍ನಲ್ಲಿ 3 ಮತ್ತು 4 ಕುಟುಂಬಗಳು ವಾಸಿಸಲು ಆದೇಶಿಸಿರುವದು ಸರಿಯಾದ ಕ್ರಮವಲ್ಲ ಎಂದು ಆದಿವಾಸಿಗಳಾದ ಗೂಳಿ, ತಿಮ್ಮಪ್ಪ, ಬೆಳ್ಳಿ, ಚಿಮ್ಮಣ್ಣ, ಜಯಂತಿ ಆರೋಪಿಸಿದ್ದಾರೆ.

ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಈಗಾಗಲೇ ತಾತ್ಕಾಲಿಕ ಶೆಡ್ಡುಗಳ ನಿರ್ಮಾಣದ ಹಂತ ಪ್ರಾರಂಭಗೊಂಡಿದ್ದು ಕಬ್ಬಿಣದ ಸಲಾಖೆ ಹಾಗೂ ಸಿಮೆಂಟ್ ಶೀಟುಗಳನ್ನು ಹಾಕುವದರ ಮೂಲಕ ನಿರ್ಮಿಸುತ್ತಿದ್ದು, ಇದರಲ್ಲಿ ಹೆಚ್ಚು ಕುಟುಂಬಗಳು ವಾಸಿಸಲು ಸಾಧ್ಯವಿಲ್ಲ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಆದಿವಾಸಿಗಳೊಂದಿಗೆ ಸಮಗ್ರವಾಗಿ ಚರ್ಚಿಸಿ ತೀರ್ಮಾನಿಸಬೇಕೆಂದು ಮನವಿ ಮಾಡಿದ್ದಾರೆ.

ರೂ. 37 ಲಕ್ಷ ವೆಚ್ಚದಲ್ಲಿ ನಿರ್ಮಿಸಲು ಯೋಜನೆ ಹಮ್ಮಿಕೊಂಡಿರುವ ಜಿಲ್ಲಾ ಸಮಾಜ ಕಲ್ಯಾಣ ಇಲಾಖಾ ಅಧಿಕಾರಿ ಹಾಗೂ ಜಿಲ್ಲಾಡಳಿತ ತಾತ್ಕಾಲಿಕ ಮನೆಗಳನ್ನು ಅವರವರ ಅನುಕೂಲಕ್ಕೆ ಅನುಗುಣವಾಗಿ ನಿರ್ಮಿಸಿಕೊಡ ಬೇPಂಬದು ಆದಿವಾಸಿಗಳ ಬೇಡಿಕೆಯಾಗಿದೆ. ಈ ಬ್ಯಾಡಗೊಟ್ಟ ಆದಿವಾಸಿ ಕೇಂದ್ರಕ್ಕೆ ಬಸವನಳ್ಳಿ ಗಿರಿಜನ ಸಹಕಾರ ಸಂಘದ ಅಧ್ಯಕ್ಷ ಎಸ್.ಎನ್ ರಾಜಾರಾವ್ ಸ್ಥಳಕ್ಕೆ ಭೇಟಿ ನೀಡಿ ಆದಿವಾಸಿಗಳ ವಾಸಕ್ಕೆ ಅನುಕೂಲವಾಗುವಂತೆ ರಾಜ್ಯ ಸರ್ಕಾರ ಬಿಡುಗಡೆಗೊಳಿಸಿರುವ ರೂ. 37 ಲಕ್ಷ ವೆಚ್ಚದಲ್ಲಿ ನಿರ್ಮಿಸಲು ಹೊರಟಿರುವ ತಾತ್ಕಾಲಿಕ ವಸತಿ ಮನೆಗಳನ್ನು ಅವರಿಗೆ ಅನುಕೂಲವಾಗುವಂತೆ ನಿರ್ಮಿಸಿ ಕೊಡಬೇಕೆಂದು ಆಗ್ರಹಿಸಿದ್ದಾರೆ.