ಸೋಮವಾರಪೇಟೆ, ಜೂ.10: “ಸೂಕ್ಷ್ಮ ಪರಿಸರ ತಾಣವನ್ನಾಗಿ ಕೊಡಗು ಜಿಲ್ಲೆಯನ್ನು ಘೋಷಿಸುವ ಸಂಬಂಧ ಕೇಂದ್ರ ಸರ್ಕಾರ ಅಧಿಸೂಚನೆಗಳನ್ನು ಹೊರಡಿಸುತ್ತಿದ್ದು, ಲೋಕಸಭಾ ಚುನಾವಣೆ ಸಂದರ್ಭ ಸಂಸದ ಪ್ರತಾಪ್ ಸಿಂಹ ಅವರು ಸೂಕ್ಷ್ಮ ಪರಿಸರ ತಾಣ ಘೋಷಣೆ ಸಮಸ್ಯೆಯನ್ನು ತನ್ನ ಹೆಗಲಿಗೆ ಹಾಕಿ ಎಂದಿದ್ದರು. ಕೊಡಗಿನ ಜನತೆ ಸತ್ತಾಗ ಹೆಗಲು ಕೊಡಲು ಸಂಸದರು ಹೊರಟಿದ್ದಾರೆಯೇ? ಎಂದು ಜಾತ್ಯತೀತ ಜನತಾದಳ ತೀಕ್ಷ್ಣವಾಗಿ ಪ್ರಶ್ನಿಸಿದೆ.

(ಮೊದಲ ಪುಟದಿಂದ) ನಗರದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಜಿಲ್ಲಾ ಉಸ್ತುವಾರಿ ವಿ.ಎಂ. ವಿಜಯ ಅವರು, ಚುನಾವಣೆ ಸಂದರ್ಭ ಇದೇ ಸಮಸ್ಯೆ ಗಂಭೀರ ಚರ್ಚೆಯಾಗುತ್ತಿದ್ದಂತೆ, ಸೂಕ್ಷ್ಮ ಪರಿಸರ ತಾಣ ಘೋಷಣೆಯಿಂದ ಕೊಡಗನ್ನು ಪಾರು ಮಾಡುತ್ತೇನೆ. ಈ ಬಗೆಗಿನ ಜವಾಬ್ದಾರಿಯನ್ನು ತನ್ನ ಹೆಗಲ ಮೇಲೆ ಹಾಕಿ ಎಂದಿದ್ದರು. ಇದೀಗ ಕೇಂದ್ರ ಸರ್ಕಾರ ಅಧಿಕೃತವಾಗಿ ಘೋಷಿಸುತ್ತಿದ್ದು, ಸಂಸದರು ಕೊಡಗಿನ ಜನತೆ ಸತ್ತಾಗ ಹೆಗಲು ಕೊಡುವ ಮಾತುಗಳನ್ನು ಆಡಿದ್ದರೇ ಎಂಬ ಸಂಶಯ ಮೂಡುತ್ತಿದೆ ಎಂದು ತೀಕ್ಷ್ಣ ಮಾತುಗಳಲ್ಲಿ ಚುಚ್ಚಿದರು.

ಕೊಡಗಿನ ಭಾಗಶಃ ಪ್ರದೇಶಗಳನ್ನು ಪರಿಸರ ತಾಣಕ್ಕೆ ಒಳಪಡಿಸಿ ಕೇಂದ್ರ ಘೋಷಣೆಗಳನ್ನು ಹೊರಡಿಸುತ್ತಿದೆ. ಇಂತಹ ಘೋಷಣೆ ಕೊಡಗು ಜಿಲ್ಲೆಯ ಅಸ್ತಿತ್ವಕ್ಕೆ ಧಕ್ಕೆತರುವಂತಿದ್ದರೂ ರಾಜ್ಯ ಸರ್ಕಾರವಾಗಲಿ, ಸ್ಥಳೀಯ ಜನಪ್ರತಿನಿಧಿಗಳಾಗಲೀ ಎಚ್ಚೆತ್ತುಕೊಂಡಿಲ್ಲ ಎಂದು ವಿ.ಎಂ. ವಿಜಯ ದೂರಿದರು.

ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದ ಸಂದರ್ಭ ಘೋಷಣೆಯ ಪ್ರಸ್ತಾಪ ಬಂದಿತ್ತು. ನೆರೆಯ ಕೇರಳ ರಾಜ್ಯ ಸಮರ್ಥವಾಗಿ ವಿರೋಧಿಸಿದ್ದರಿಂದ ಆ ರಾಜ್ಯಕ್ಕೆ ವಿನಾಯಿತಿ ದೊರೆತಿದೆ. ಇಲ್ಲಿನ ಬಿಜೆಪಿ ಸರ್ಕಾರ ಹಾಗೂ ಈಗ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರಗಳು ಜಿಲ್ಲೆಯನ್ನು ನಿರ್ಲಕ್ಷಿಸಿದ ಪರಿಣಾಮ ಸೂಕ್ಷ್ಮ ಪರಿಸರ ತಾಣ ಘೋಷಣೆಯಾಗುತ್ತಿದೆ ಎಂದರು.

ಕೇಂದ್ರ ಸರ್ಕಾರ ಕೊಡಗಿನ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ. ವರದಿ ಅನುಷ್ಠಾನ ತಡೆಯುವಲ್ಲಿ ಸಂಸದ ಪ್ರತಾಪ್ ಸಿಂಹ ಅವರೊಂದಿಗೆ ಕೊಡಗಿನ ಶಾಸಕರುಗಳು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಆರೋಪಿಸಿದ ವಿಜಯ ಅವರು, ವರದಿ ಅನುಷ್ಠಾನದಿಂದ ಕೊಡಗು ಸಂಪೂರ್ಣವಾಗಿ ಅಭಿವೃದ್ದಿ ವಂಚಿತವಾಗುತ್ತದೆ ಎಂದು ಅಭಿಪ್ರಾಯಿಸಿದರು.

ಈ ಹಿಂದೆ ಒಂದು ಕಿ.ಮೀ. ಇದ್ದ ಬಫರ್‍ಝೋನ್ ಪ್ರದೇಶವನ್ನು 16 ಕಿ.ಮೀ.ಗೆ ಹೆಚ್ಚಿಸಲಾಗಿದೆ. ಮುಂದಿನ ದಿನಗಳಲ್ಲಿ ಕೊಡಗು ಬರೀ ಅರಣ್ಯವಾಗಿ ಉಳಿಯುತ್ತದಲ್ಲದೇ ಇಲ್ಲಿನ ಜನತೆ ವಲಸೆ ಹೋಗಬೇಕಾಗುತ್ತದೆ. ಕೊಡಗಿನ ಸಮಾಧಿ ಮೇಲೆ ಅರಣ್ಯ ನಿರ್ಮಾಣಕ್ಕೆ ಕೇಂದ್ರ ಹೊರಟಿದೆ. ಈ ನೀತಿಯ ವಿರುದ್ಧ ಜೆಡಿಎಸ್ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಕೈಗೊಳ್ಳಲಿದೆ. ಕೊಡಗಿನ ಜನತೆ ಹೋರಾಟಕ್ಕೆ ಬೆಂಬಲ ನೀಡಬೇಕೆಂದು ಮನವಿ ಮಾಡಿದರು.

ಜೆಡಿಎಸ್ ಕ್ಷೇತ್ರ ಸಮಿತಿ ಅಧ್ಯಕ್ಷ ಹೆಚ್.ಆರ್. ಸುರೇಶ್ ಗೋಷ್ಠಿಯಲ್ಲಿ ಉಪಸ್ಥಿತರಿದ್ದು ಮಾತನಾಡಿ, ಉದ್ದೇಶಿತ ವರದಿ ಅನುಷ್ಠಾನದಿಂದ ಜಿಲ್ಲೆಯ ರೈತಾಪಿ ವರ್ಗ ತೀವ್ರ ಸಂಕಷ್ಟಕ್ಕೆ ಒಳಗಾಗಲಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕ್ರಮದ ವಿರುದ್ಧ ಜಿಲ್ಲೆಯಲ್ಲಿ ಪಕ್ಷದ ಹೋರಾಟವನ್ನು ತೀವ್ರಗೊಳಿಸಲಾಗುವದು ಎಂದು ಎಚ್ಚರಿಸಿದರು.

ತಾ. 13ರಂದು 11 ಗಂಟೆಗೆ ಪಕ್ಷದ ಕುಶಾಲನಗರ ಹೋಬಳಿ ವ್ಯಾಪ್ತಿಯ ಕೂಡುಮಂಗಳೂರು, ಕೂಡಿಗೆ, ಮುಳ್ಳುಸೋಗೆ ಗ್ರಾ.ಪಂ.ಗಳ ಪಕ್ಷದ ಕಾರ್ಯಕರ್ತರ ಸಭೆಯನ್ನು ಕೂಡಿಗೆಯ ಸಹಕಾರ ಸಂಘದ ಕಟ್ಟಡದಲ್ಲಿ ಆಯೋಜಿಸಲಾಗಿದೆ. ವೀಕ್ಷಕರಾಗಿ ಶಿವಕುಮಾರ್ ಮತ್ತು ಬಸವರಾಜ್ ಅವರುಗಳು ಭಾಗವಹಿಸಲಿದ್ದಾರೆ ಎಂದರು.

ಗೋಷ್ಠಿಯಲ್ಲಿ ಭಾಗಿಯಾಗಿದ್ದ ಜೆಡಿಎಸ್ ಯುವ ಘಟಕದ ಜಿಲ್ಲಾಧ್ಯಕ್ಷ ಅಜೀಶ್‍ಕುಮಾರ್ ಮಾತನಾಡಿ, ಪಕ್ಷವನ್ನು ಬಲಗೊಳಿಸುವ ಉದ್ದೇಶದಿಂದ ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಮನೆ ಮನೆಗೆ ಕುಮಾರಣ್ಣ ಎಂಬ ಕಾರ್ಯಕ್ರಮವನ್ನು ಈಗಾಗಲೇ ಬೆಂಗಳೂರಿನಲ್ಲಿ ನಡೆಸಲಾಗುತ್ತಿದೆ ಎಂದರಲ್ಲದೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗೊಬ್ಬರದ ಮೇಲಿನ ತೆರಿಗೆಯನ್ನು ಹೆಚ್ಚಿಸುವ ಮೂಲಕ ರೈತರ ಮೇಲೆ ಗಧಾಪ್ರಹಾರ ಮಾಡಲು ಹೊರಟಿವೆ. ಇದಕ್ಕೆ ಚುನಾವಣೆಯಲ್ಲಿ ಮತದಾರರು ತಕ್ಕ ಉತ್ತರ ನೀಡಲಿದ್ದಾರೆ ಎಂದರು.