ಮಡಿಕೇರಿ, ಜೂ. 10: ಭಾರತೀಯ ಜನತಾಪಾರ್ಟಿಯಲ್ಲಿ ಪಕ್ಷದ ಜಿಲ್ಲಾ ಅಧ್ಯಕ್ಷರ ಆಯ್ಕೆಯೂ ಸೇರಿದಂತೆ ರಾಜ್ಯ ನಾಯಕರ ಬೇರೆ ಬೇರೆ ನಿರ್ಧಾರಗಳಿಂದ ಬೇಸತ್ತು ಮುದುಡಿಹೋಗಿರುವ ಮನಸ್ಸುಗಳನ್ನು ಒಗ್ಗೂಡಿಸುವ ಯತ್ನದೊಂದಿಗೆ, ಮುಂದಿನ ಚುನಾವಣೆಯಲ್ಲಿ ಮತ್ತೆ ಕೊಡಗಿನಲ್ಲಿ ಕಮಲ ಅರಳಿಸುವಂತೆ ರಾಜ್ಯ ವರಿಷ್ಠರು ಆದೇಶಿಸಿದ್ದಾರೆ.ಈ ಸಂಬಂಧ ಇಂದು ಜಿಲ್ಲಾ ಬಿಜೆಪಿ ಪ್ರಮುಖರನ್ನೊಳಗೊಂಡ ಕಾರ್ಯಕಾರಿಣಿ ಸಭೆಯು ಇಲ್ಲಿನ ಬಾಲಭವನ ಸಭಾಂಗಣದಲ್ಲಿ ನಡೆದು, ಹಲವು ಗೊಂದಲಗಳ ನಡುವೆ ಮುಕ್ತಾಯಗೊಂಡಿದ್ದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ. ಪೂರ್ವಾಹ್ನ 11 ಗಂಟೆಗೆ ಪಕ್ಷದ ಅಧ್ಯಕ್ಷ ಬಿ.ಬಿ. ಭಾರತೀಶ್ ಅಧ್ಯಕ್ಷತೆಯಲ್ಲಿ ಸಭೆ ನಡೆದು, ರಾಜ್ಯದಿಂದ ಆಗಮಿಸಬೇಕಿದ್ದ ಸಂಸದ ಹಾಗೂ ಬಿಜೆಪಿ ವರಿಷ್ಠ ನಳಿನ್‍ಕುಮಾರ್ ಕಟೀಲ್ ಬಾರದೆ ಪ್ರಾರಂಭದಲ್ಲೇ ಕಾರ್ಯಕರ್ತರಿಗೆ ನಿರಾಸೆ ಮೂಡಿದೆ.

ಇನ್ನು ಪಕ್ಷದ ಸಭೆ ಆರಂಭಗೊಳ್ಳುತ್ತಿದ್ದಂತೆಯೇ ರಾಜ್ಯ ಬಿಜೆಪಿ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ಕೇಂದ್ರ ಸರಕಾರದ ಅಭಿವೃದ್ಧಿ ಕಾರ್ಯಕ್ರಮಗಳು ಹಾಗೂ ಪ್ರಧಾನಿ ಮೋದಿ ಕನಸುಗಳ ಸಾಧನಾ ಸಮಾವೇಶ ನಡೆಸುವತ್ತ ಮಾತನಾಡಿದ್ದಾರೆ. ಇವರ ಮಾತಿನ ನಡುವೆಯೇ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಕೂಡ ಸಭೆಗೆ ಆಗಮಿಸಿದ್ದಾರೆ.

ವೇದಿಕೆಯಲ್ಲಿ ರವಿ: ಆ ವೇಳೆಗೆ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎಸ್.ಬಿ. ರವಿ ಕುಶಾಲಪ್ಪ ಸಹಿತ ಬಿಜೆಪಿ ಪ್ರಭಾರಿ ಉದಯಕುಮಾರ್ ಶೆಟ್ಟಿ, ಸಹ ಪ್ರಭಾರಿ ಯತೀಶ್ ಕುಮಾರ್ ಮತ್ತಿತರರು ಆಸೀನರಾಗಿದ್ದು, ರವಿಯನ್ನು ಕಂಡ ಅಪ್ಪಚ್ಚುರಂಜನ್ ವೇದಿಕೆ ಏರದೆ ಕಾರ್ಯಕರ್ತರ ನಡುವೆ ಆಸೀನರಾಗಿದ್ದಾರೆ.

ಪ್ರಮುಖರಿಗೆ ಕಸಿವಿಸಿ: ಈ ವೇಳೆ ರಾಜ್ಯ ಪ್ರಭಾರಿಗಳ ಸಹಿತ ವೇದಿಕೆಯಲ್ಲಿ ಇದ್ದ ಪ್ರಮುಖರು ಕಸಿವಿಸಿಗೊಂಡು, ಶಾಸಕರನ್ನು ವೇದಿಕೆಗೆ ಆಹ್ವಾನಿಸಿದ್ದಾರೆ. ಆ ವೇಳೆಗಾಗಲೇ ಕಾರ್ಯಕರ್ತರನ್ನು ಉದ್ದೇಶಿಸಿ

(ಮೊದಲ ಪುಟದಿಂದ) ಮಾತನಾಡುತ್ತಿದ್ದ ಮನು ಮುತ್ತಪ್ಪ ನಿಯಮಾನುಸಾರ ಸಭೆ ನಡೆಸದೆ ಖುಷಿ ಬಂದವರನ್ನು ವೇದಿಕೆಯಲ್ಲಿ ಕುಳ್ಳಿರಿಸಿಕೊಂಡು ಶಾಸಕರನ್ನು ಆಹ್ವಾನಿಸಿದರೆ ಅವರೇಕೆ ಬರುತ್ತಾರೆ ಎಂದು ಪರೋಕ್ಷವಾಗಿ ರವಿ ಕುಶಾಲಪ್ಪ ಅವರಿಗೆ ‘ಟಾಂಗ್’ ನೀಡಿದ್ದಾಗಿ ಗೊತ್ತಾಗಿದೆ.

ಅಲ್ಲದೆ ಸಭೆಯಲ್ಲಿ ಮಾತು ಮುಗಿಸಿದ ಮನುಮುತ್ತಪ್ಪ ಕೂಡ ವೇದಿಕೆಯಲ್ಲಿ ಆಸೀನರಾಗದೆ ಕೆಳಗಿಳಿದು ಬಂದು ಶಾಸಕ ಅಪ್ಪಚ್ಚು ರಂಜನ್ ಪಕ್ಕ ಸಭಿಕರೊಂದಿಗೆ ಕುಳಿತುಕೊಳ್ಳುತ್ತಿದ್ದಂತೆ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಕಾಂತಿ ಸತೀಶ್ ಕೂಡ ವೇದಿಕೆಯಿಂದ ಎದ್ದುಬಂದು ಸಭಿಕರೊಂದಿಗೆ ಸೇರಿಕೊಂಡಿದ್ದಾಗಿ ಸುಳಿವು ಲಭಿಸಿದೆ.

ಪ್ರಭಾರಿಗೆ ತಿರುಗೇಟು: ಈ ಹಂತದಲ್ಲಿ ಜಿಲ್ಲಾ ಬಿಜೆಪಿ ಪ್ರಭಾರಿ ಉದಯಕುಮಾರ್ ಶೆಟ್ಟಿ ಪಕ್ಷ ಸಂಘಟನೆ ಬಗ್ಗೆ ಮಾತನಾಡಲು ಆರಂಭಿಸಿ, ಜಿಲ್ಲೆಯಲ್ಲಿ ಬಿಜೆಪಿ ಬಲಿಷ್ಠಗೊಳಿಸುವ ದಿಸೆಯಲ್ಲಿ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಈ ಎಲ್ಲಾ ಬೆಳವಣಿಗೆಯನ್ನು ನೋಡುತ್ತಾ ಮೌನವಹಿಸಿದ್ದ ಸಭಿಕರ ಸಾಲಿನಿಂದ ಒಬ್ಬೊಬ್ಬರು ವೇದಿಕೆಯತ್ತ ಮಾತಿನ ಛಾಟಿ ಬೀಸಿದ್ದಾರೆ.

ಜಿಲ್ಲೆಯಲ್ಲಿ ಪದೇ ಪದೇ ರಾಜ್ಯ ನಾಯಕರು ಪಕ್ಷದ ಅಧ್ಯಕ್ಷರನ್ನು ಬದಲಾಯಿಸುತ್ತಾ, ಗುಂಪುಗಾರಿಕೆ ಹುಟ್ಟು ಹಾಕಲು ಕಾರಣರಾಗಿದ್ದಾರೆ. ಕೊಡಗಿನಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಾ, ಬಹಿರಂಗವಾಗಿ ಪತ್ರಿಕಾ ಹೇಳಿಕೆ ನೀಡಿ, ಆಂತರಿಕ ವಿಷಯಗಳನ್ನು ಹೊರಗೆಡವಿ ಕಾರ್ಯಕರ್ತರಲ್ಲಿ ಗೊಂದಲ ಉಂಟುಮಾಡುವವರ ಮಾತನ್ನು ರಾಜ್ಯದವರು ಕೇಳುತ್ತಿದ್ದೀರಿ... ಇತ್ಯಾದಿ ಮಾತಿನ ಸುರಿಮಳೆಗೈದಿದ್ದಾರೆ.

ಪ್ರಮುಖರ ಗೈರು: ಈ ನಡುವೆ ಪೂರ್ವ ನಿರ್ಧರಿತ ಕಾರ್ಯಕ್ರಮದ ಲೆಕ್ಕಾಚಾರದಲ್ಲಿ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಸೇರಿದಂತೆ ಕಾಫಿ ಮಂಡಳಿ ಉಪಾಧ್ಯಕ್ಷೆ ರೀನಾ ಪ್ರಕಾಶ್, ಪಕ್ಷದ ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಕಳಗಿ, ತಾಲೂಕು ಬಿಜೆಪಿ ಅಧ್ಯಕ್ಷ ತಳೂರು ಕಿಶೋರ್ ಕುಮಾರ್, ಪ್ರಧಾನ ಕಾರ್ಯದರ್ಶಿ ಕೋಡಿರ ಪ್ರಸನ್ನ, ಜಿಲ್ಲಾ ಕಾರ್ಯದರ್ಶಿ ರವಿ ಬಸಪ್ಪ, ಹಿರಿಯ ಮುಖಂಡ ಎಂ.ಬಿ. ದೇವಯ್ಯ, ಸೋಮವಾರಪೇಟೆ ತಾಲೂಕು ಬಿಜೆಪಿ ಅಧ್ಯಕ್ಷ ಎಂ.ಎನ್. ಕೊಮಾರಪ್ಪ ಸೇರಿದಂತೆ ಅನೇಕ ಪ್ರಮುಖರು ಇಂದಿನ ಸಭೆಯಿಂದ ಹೊರಗುಳಿದಿದ್ದಾರೆ ಎಂದು ಗೊತ್ತಾಗಿದೆ.

ಜಿಲ್ಲೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವವರಿಗೆ ಮತ್ತು ಬಹಿರಂಗವಾಗಿ ಪತ್ರಿಕಾ ಹೇಳಿಕೆ ನೀಡುವವರ ಬಗ್ಗೆ ರಾಜ್ಯದವರು ಒಲವು ಇಟ್ಟುಕೊಂಡರೆ ಮುಂದಿನ ಎಲ್ಲಾ ಸಭೆಗಳಿಂದ ದೂರ ಉಳಿಯುವದಾಗಿ ಪದಾಧಿಕಾರಿಯೊಬ್ಬರು ‘ಶಕ್ತಿ'ಯೊಂದಿಗೆ ಮುನ್ಸೂಚನೆ ನೀಡಿದ್ದಾರೆ. ಕಳೆದ ತಿಂಗಳು ತಾ. 15ರಂದು ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್ ಸಮ್ಮುಖದಲ್ಲಿ ಬಿಜೆಪಿ ಅಸಮಾಧಾನ ಸ್ಫೋಟಗೊಂಡು ಮುಕ್ತಾಯ ಕಂಡಿದ್ದ ಜಿಲ್ಲಾ ಕಾರ್ಯಕಾರಿಣಿ ಸಭೆ ಬೆನ್ನಲ್ಲೇ ಇಂದಿನ ಸಭೆಯಲ್ಲಿಯೂ ಗೊಂದಲದ ನಡುವೆ ಅನೇಕ ಪ್ರಮುಖರ ಗೈರು ರಾಜ್ಯ ಪ್ರಭಾರಿಗಳಲ್ಲಿ ಜಿಲ್ಲೆಯ ಪಕ್ಷ ಸಂಘಟನೆ ಕುರಿತು ಆತಂಕದ ಛಾಯೆ ಮೂಡಿಸುವಂತಾಗಿದೆ.

-ಕಮಲಪ್ರಿಯ.