ಗೋಣಿಕೊಪ್ಪಲು, ಜೂ.12: ಇಂದು ಬೆಂಗಳೂರು ವಿಧಾನ ಸಭೆ ಕೇವಲ 2 ಗಂಟೆ ಮಾತ್ರಾ ನಡೆಯಿತು. ಬೆಂಗಳೂರಿಗೆ ರಾಹುಲ್‍ಗಾಂಧಿ ಭೇಟಿ ಹಿನ್ನೆಲೆ ಸದನ ಕಲಾಪವನ್ನು ನಾಳೆಗೆ ಮುಂದೂಡಲಾಯಿತು. ಆದರೆ ಈ ಅವಧಿಯಲ್ಲಿ ಕೊಡಗಿನ ಶಾಸಕದ್ವಯರು ನಾಲ್ಕು ವಿಷಯಗಳ ಮೇಲೆ ಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಅವರ ಗಮನ ಸೆಳೆದರು. ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಅವರು ಕ್ರೀಡಾ ನೀತಿ ಜಾರಿ ಹಾಗೂ ಕ್ರೀಡಾ ವಿ.ವಿ.ಸ್ಥಾಪನೆ ಬಗ್ಗೆ ಗಮನಸೆಳೆದರೆ, ವೀರಾಜಪೇಟೆ ಶಾಸಕ ಬೋಪಯ್ಯ ಅವರು ವೀರಾಜಪೇಟೆ ಮೀನು ಮಾರುಕಟ್ಟೆ ಪ್ರಗತಿ ಬಗ್ಗೆ ಸಚಿವರ ಉತ್ತರ ಬಯಸಿದರು.

ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಮೀನು ಮಾರುಕಟ್ಟೆ ನಿರ್ಮಾಣ ಕಾರ್ಯ ನೆನೆಗುದಿಗೆ ಬಿದ್ದಿರುವ ಕುರಿತು ಶಾಸಕರ ಪ್ರಶ್ನೆಗೆ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಉತ್ತರಿಸಿದರು.

ವೀರಾಜಪೇಟೆ ಪ.ಪಂ. ವ್ಯಾಪ್ತಿಯಲ್ಲಿ ಮೀನು ಮಾರುಕಟ್ಟೆ ನಿರ್ಮಿಸಲು, ಮಂಜೂರಾತಿ ಮತ್ತು ಮಂಜೂರಾದ ಅನುದಾನದ ಬಗೆಗಿನ ಪ್ರಶ್ನೆಗೆ ಸಚಿವರು,ವೀರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 2012-13 ನೇ ಸಾಲಿಗೆ ರೂ.198.79 ಲಕ್ಷ ಮೊತ್ತದ ಮೀನು ಮಾರುಕಟ್ಟೆ ನಿರ್ಮಾಣಕ್ಕೆ ಮಂಜೂರಾತಿ ಹಾಗೂ ಯೋಜನಾ ವೆಚ್ಚದ ಶೇ.90 ರಷ್ಟು ಅಂದರೆ ರೂ.178.91 ಲಕ್ಷಗಳಿಗೆ ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿ ಹೈದರಾಬಾದ್ ವತಿಯಿಂದ ನೀಡಲಾಗಿದೆ ಎಂದು ಉತ್ತರಿಸಿದರು.

ವೀರಾಜಪೇಟೆ ಪಟ್ಟಣ ಪಂಚಾಯಿತಿಗೆ ಕಾಮಗಾರಿಯನ್ನು 2012 ರಲ್ಲಿ ನಿರ್ವಹಿಸಲು ಅನುಮತಿ ನೀಡಲಾಗಿದ್ದರೂ ವಿಫಲರಾದ ಕಾರಣ ಫೆ.2015 ರಲ್ಲಿ ಪಟ್ಟಣ ಪಂಚಾಯಿತಿ ನೋಡೆಲ್ ಏಜೆನ್ಸಿಯಾದ ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮಕ್ಕೆ ನಿರ್ಮಾಣ ಕಾಮಗಾರಿಗೆ ಹಸ್ತಾಂತರಿಸಿದೆ. ಆದರೆ, ನಿಗಮದಿಂದ 2015 ರಲ್ಲಿ 3 ಬಾರಿ ಟೆಂಡರ್ ಕರೆದರೂ ಅರ್ಹ ಟೆಂಡರ್‍ದಾರರು ಭಾಗವಹಿಸದ ಹಿನ್ನೆಲೆ ಸದರಿ ಕಾಮಗಾರಿಯನ್ನು ತಾ.07-09-2015 ರಂದು ಕೊಡಗು ಜಿಲ್ಲಾ ನಿರ್ಮಿತಿ ಕೇಂದ್ರಕ್ಕೆ ವಹಿಸಿ ಕೊಡಲಾಗಿದೆ. ಕಾಮಗಾರಿ ಪೂರ್ಣಗೊಳಿಸಲು ಮಳೆಗಾಲ ಹೊರತು ಪಡಿಸಿ ಒಂದು ವರ್ಷ ಅವಧಿ ನೀಡಲಾಗಿದ್ದು, ಇದೀಗ ಮೇಲ್ಛಾವಣಿ ಹಂತದಲ್ಲಿ ಕೆಲಸ ನಡೆಯುತ್ತಿದೆ ಎಂದರು.

ಕಾಮಗಾರಿಗೆ ಗುರುತಿಸಿದ ಜಾಗ ಮಣ್ಣುಭರ್ತಿ ಜಾಗವಾಗಿದ್ದು ಎರಡು ಬಾರಿ ಮಣ್ಣು ತಪಾಸಣೆ ಮಾಡಿ, ತಪಾಸಣಾ ವರದಿಯಂತೆ ಮರುವಿನ್ಯಾಸ ಮಾಡಿ ತಾ.1-4-2016ರಲ್ಲಿ ಕಾಮಗಾರಿ ಪ್ರಾರಂಭಿಸ ಲಾಗಿದೆ. ಮಣ್ಣಿನ ಕುಸಿತ ತಡೆಗಟ್ಟಲು ನಿವೇಶನದ ಒಂದು ಬದಿಯಲ್ಲಿ ಕಾಂಕ್ರೀಟ್ ತಡೆಗೋಡೆ ನಿರ್ಮಾಣ ಮಾಡಿ ತಳಪಾಯ ಕಾಮಗಾರಿ ಪೂರ್ಣಗೊಳಿಸಲಾಗಿದೆ. ನಿವೇಶನದ ಸಮೀಪವಿದ್ದ 100 ಕೆ.ವಿ. ಟ್ರಾನ್ಸ್‍ಫಾರ್ಮರ್ ಸ್ಥಳಾಂತರಿಸಿದ ನಂತರ ಕಾಮಗಾರಿ ಮುಂದುವರಿಸಲಾ ಗಿದೆ. ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿ, ಹೈದರಾಬಾದ್ ಇವರಿಂದ 2 ನೇ ಕಂತು ರೂ.71.56 ಲಕ್ಷ ಮೊತ್ತ ಈವರೆಗೆ ಬಿಡುಗಡೆಯಾಗಿ ರುವದಿಲ್ಲ ಎಂದು ಸಚಿವ ಪ್ರಮೋದ್ ಮಧ್ವರಾಜ್ ವಿವರಿಸಿದರು.

ಕಳೆದ 3 ವರ್ಷಗಳಿಂದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಕ್ರೀಡೆಗೆ ಉತ್ತೇಜನ ನೀಡಲು ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ನಗದು ಪುರಸ್ಕಾರ ಯೋಜನೆಯನ್ನು ಇಲಾಖೆಯು ಅನುಷ್ಟಾನಗೊಳಿಸುತ್ತಿದೆ. 2014-15ನೇ ಸಾಲಿನ ಹೊಸ ಯೋಜನೆಯಾಗಿದ್ದು, ದೇಸಿ ಗ್ರಾಮೀಣ ಕ್ರೀಡೆಗಳಲ್ಲಿ ವಿಶೇಷ ಸಾಧನೆ ಮಾಡಿದ ರಾಜ್ಯದ ಗ್ರಾಮೀಣ ಕ್ರೀಡಾ ಪ್ರತಿಭೆಗಳಿಗೆ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವದು. ಈ ಪ್ರಶಸ್ತಿಯು ರೂ. 1. ಲಕ್ಷಗಳ ನಗದು, ಸಮವಸ್ತ್ರ, ಪ್ರಶಸ್ತಿ ಫಲಕ ಒಳಗೊಂಡಿರುತ್ತದೆ.

ರಾಷ್ಟ್ರೀಯ ಮತ್ತು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದಿಂದ ಪ್ರತಿನಿಧಿಸಿ ಸಾಧನೆ ಮಾಡಲಾದ ಕ್ರೀಡಾಪಟುಗಳಿಗೆ ಶೈಕ್ಷಣಿಕ ಶುಲ್ಕ ಮರು ಪಾವತಿ ಮಾಡಲಾ ಗುತ್ತಿದೆ. ರಾಜ್ಯಮಟ್ಟದಲ್ಲಿ ಪದಕ ವಿಜೇತರಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ರೂ. 10,000 ವಿದ್ಯಾರ್ಥಿ ವೇತನ ನೀಡಿ ಪ್ರೋತ್ಸಾಹಿಸಲಾಗುತ್ತಿದೆ. ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸುವ ರಾಜ್ಯದ ಕ್ರೀಡಾಪಟುಗಳು, ಕ್ರೀಡಾಶಾಲೆ, ವಸತಿ ನಿಲಯದ ಕ್ರೀಡಾ ವಿದ್ಯಾರ್ಥಿಗಳಿಗೆ ಕ್ರೀಡಾ ಸಂಜೀವಿನಿ ಯೋಜನೆಯಡಿ ಉಚಿತ ವಿಮಾ ಸುರಕ್ಷೆಯನ್ನು ಒದಗಿಸಲಾಗುತ್ತಿದೆ.

ರಾಷ್ಟ್ರೀಯ ಮತ್ತು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದಿಂದ ಪ್ರತಿನಿಧಿಸಿ ಸಾಧನೆ ಮಾಡಲಾದ ಕ್ರೀಡಾಪಟುಗಳಿಗೆ ಏಕಲವ್ಯ ಪ್ರಶಸ್ತಿ ನೀಡಲಾಗುವದು. ಈ ಪ್ರಶಸ್ತಿಯು ರೂ. 2 ಲಕ್ಷ, ಸಮವಸ್ತ್ರ, ಕಂಚಿನ ಪ್ರತಿಮೆ ಒಳಗೊಂಡಿರುತ್ತದೆ ಎಂದು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಶಾಸಕ ಅಪ್ಪಚ್ಚುರಂಜನ್ ಪ್ರಶ್ನೆಗೆ ಲಿಖಿತ ಉತ್ತರ ನೀಡಿದರು.