ಗೋಣಿಕೊಪ್ಪಲು, ಜೂ. 11: ಕರ್ನಾಟಕ ಮಾಧ್ಯಮ ಅಕಾಡೆಮಿ 1987 ರಿಂದ ಆರಂಭ ಗೊಂಡಿದ್ದು, ರಾಜ್ಯದ ಎಲ್ಲ ಜಿಲ್ಲೆಗಳ ಪತ್ರಕರ್ತರು ಅದರಲ್ಲಿಯೂ ಗ್ರಾಮೀಣ ಭಾಗದ ಪತ್ರಕರ್ತರಿಗೆ ವಿಭಿನ್ನ ವೈವಿಧ್ಯಮಯ ಕಾರ್ಯಕ್ರಮಗಳನ್ನು ಈ ಬಾರಿ ಹಮ್ಮಿಕೊಂಡಿರುವದಾಗಿ ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎಂ. ಸಿದ್ಧರಾಜು ‘ಶಕ್ತಿ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಸುಮಾರು 35 ವರ್ಷಗಳ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಸುಮಾರು 16 ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಕ್ರಿಯಾ ಯೋಜನೆ ರೂಪಿಸಲಾಗಿದೆ. ರಾಜ್ಯ ಸರ್ಕಾರವು ವಾರ್ಷಿಕವಾಗಿ ರೂ. 1 ಕೋಟಿ ಅನುದಾನವನ್ನು ನೀಡುತ್ತಾ ಬರುತ್ತಿದ್ದು, ತಾನು ಅಧಿಕಾರ ವಹಿಸಿಕೊಂಡ 10 ತಿಂಗಳಿನಲ್ಲಿ ಹಲವು ಪ್ರಗತಿಪರ ಚಿಂತನೆಯೊಂದಿಗೆ ಕಾರ್ಯಕ್ರಮ ಅನುಷ್ಟಾನ ಗೊಳಿಸಲಾಗುತ್ತಿದೆ ಎಂದು ಹೇಳಿದರು.

2016-17 ನೇ ಸಾಲಿಗೆ ಸ್ನಾತಕೋತ್ತರ ಪದವೀಧರರಾದ ನಿರುದ್ಯೋಗಿಗಳಿಗೆ ರಾಜ್ಯದಿಂದ ವಾರ್ಷಿಕವಾಗಿ ತಲಾ 10 ಮಂದಿಯನ್ನು ಆಯ್ಕೆಮಾಡುವ ಮೂಲಕ ಮಾಸಿಕ ರೂ. 10 ಸಾವಿರ ಶಿಷ್ಯವೇತನವನ್ನು ನೀಡಲಾಗುತ್ತಿದೆ. ಬೆಂಗಳೂರು ಮಹಾನಗರದಲ್ಲಿ ಯಾವದೇ ಪತ್ರಿಕಾಲಯದಲ್ಲಿ ಒಂದು ವರ್ಷ ತರಬೇತಿ ಹೊಂದುವ ಸಂದರ್ಭ 10 ತಿಂಗಳು ಒಟ್ಟು ಒಬ್ಬರಿಗೆ ರೂ. 1 ಲಕ್ಷ ಶಿಷ್ಯ ವೇತನ ನೀಡಲಾಗುತ್ತದೆ. ಕ್ರಿಯಾ ಯೋಜನೆಯಲ್ಲಿ ಮೂರು ವರ್ಷದವರೆಗೆ ಉದ್ಧೇಶಿತ ಕಾರ್ಯಕ್ರಮವನ್ನು ಅಳವಡಿಸಲಾಗಿದ್ದು 2017-18ನೇ ಸಾಲಿಗೆ ಇನ್ನಷ್ಟೇ ಆಯ್ಕೆ ಪ್ರಕ್ರಿಯೆ ನಡೆಯಬೇಕಾಗಿದೆ ಎಂದು ಮಾಹಿತಿ ನೀಡಿದರು.

2016 ನೇ ಸಾಲಿನ ವಾರ್ಷಿಕ ಪ್ರಶಸ್ತಿಯನ್ನು ಈ ಬಾರಿ ಸರ್ಕಾರದ ನಿರ್ದೇಶನ ಮೇರೆ 15 ಮಂದಿಗೆ ಪ್ರಧಾನ ಮಾಡಲಾಗಿದ್ದು, ಅತ್ಯುತ್ತಮ ಜಿಲ್ಲಾ ಪತ್ರಿಕೆಗೆ ನೀಡುವ ‘ಆಂದೋಲನ ಪ್ರಶಸ್ತಿ’, ಸಾಮಾಜಿಕ ಸಮಸ್ಯೆ ಲೇಖನಕ್ಕೆ ನೀಡುವ ಅಭಿಮಾನಿ ಪ್ರಶಸ್ತಿ, ಮಾನವೀಯ ಸಮಸ್ಯೆ ಲೇಖನಕ್ಕೆ ನೀಡುವ ಮೈಸೂರು ದಿಗಂತ ಪ್ರಶಸ್ತಿಯೊಂದಿಗೆ ಈ ಬಾರಿ ಮತ್ತೆರಡು ಪ್ರಶಸ್ತಿ ಸೇರ್ಪಡೆಯಾಗಿದೆ ಎಂದು ವಿವರಿಸಿದರು.

ಸಿನಿಮಾ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪತ್ರಕರ್ತರಿಗಾಗಿ ರೂ. 1 ಲಕ್ಷ ದತ್ತಿನಿಧಿ ಸ್ಥಾಪಿಸಿ ಅಭಿಮಾನ ಪ್ರಕಾಶನ ಮೂಲಕ ಈ ಬಾರಿ ಅತ್ಯುತ್ತಮ ಸಿನೆಮಾ ಪತ್ರಕರ್ತರಿಗೆ ‘ಅರಗಿಣಿ ಪ್ರಶಸ್ತಿ’ಯನ್ನು ಕೊಡಮಾಡಲಾಗುತ್ತಿದೆ. ಇದೇ ರೀತಿ ತಳ ಸಮುದಾಯದ ವಿರುದ್ಧ ಹೋರಾಟ ನಡೆಸಿದ ಡಾ. ಬಿ.ಆರ್. ಅಂಬೇಡ್ಕರ್ ಅವರು ಪತ್ರಕರ್ತರಾಗಿ ಸೇವೆ ಸಲ್ಲಿಸಿರುವದನ್ನು ಪತ್ರಿಕಾ ಕ್ಷೇತ್ರ ಸದಾ ಸ್ಮರಿಸಬೇಕೆಂದು ಅಕಾಡೆಮಿ ಸದಸ್ಯ ಕೆ. ಶಿವಕುಮಾರ್ ರೂ. 1.25 ಲಕ್ಷ ದತ್ತಿನಿಧಿ ಸ್ಥಾಪಿಸಿ ‘ಡಾ. ಬಿ.ಆರ್. ಅಂಬೇಡ್ಕರ್ ಮೂಕನಾಯಕ ಪ್ರಶಸ್ತಿ’ಯನ್ನು 2016 ನೇ ಸಾಲಿನಿಂದಲೇ ನೀಡಲಾಗುತ್ತಿದೆ. ಈ ಬಾರಿ ಎರಡು ಹೊಸ ಪ್ರಶಸ್ತಿಗಳ ಮೂಲಕ ಒಟ್ಟು 20 ಪ್ರಶಸ್ತಿಯನ್ನು 2016ನೇ ಸಾಲಿಗೆ ನೀಡಲಾಗಿದೆ ಎಂದು ಹೇಳಿದರು.

ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ ಭಾಷಾ, ಬರವಣಿಗೆ ಬಗ್ಗೆ ಈ ಬಾರಿ ಮೂರು ದಿನಗಳ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಮಳೆಗಾಲದ ಅಧಿವೇಶನ ಕುರಿತಾದ ವರದಿ ತರಬೇತಿಯನ್ನು ನೀಡುವ ನಿಟ್ಟಿನಲ್ಲಿ ತಲಾ ಓರ್ವರನ್ನು ಆಯ್ಕೆಮಾಡಿ ಕಳುಹಿಸಲು 30 ಜಿಲ್ಲೆಗಳ ವಾರ್ತಾ ಇಲಾಖೆಗೆ ಮುಂಚಿತವಾಗಿ ಪತ್ರ ಬರೆಯಲಾಗಿತ್ತು. ಆದರೆ, ಕೇವಲ 15 ಜಿಲ್ಲೆಯ ಗ್ರಾಮೀಣ ಪತ್ರಕರ್ತರು ಮಾತ್ರ ಪಾಲ್ಗೊಂಡಿದ್ದಾರೆ. ಉಳಿದ 15 ಜಿಲ್ಲೆಗಳಿಂದ ವಾರ್ತಾಧಿಕಾರಿಗಳು ಯಾವದೇ ಶಿಫಾರಸ್ಸು ಪತ್ರ ನೀಡಿಲ್ಲ. ಮುಂದೆ ಡಿಸೆಂಬರ್ ತಿಂಗಳಿನಲ್ಲಿ ಚಳಿಗಾಲದ ಅಧಿವೇಶನ ಬೆಳಗಾವಿಯಲ್ಲಿ ನಡೆಸಲು ಉದ್ಧೇಶಿಸಲಾಗಿದ್ದು, 30 ಜಿಲ್ಲೆಯಿಂದ ಮತ್ತೆ ಆಯ್ಕೆ ಮಾಡಲು ಮಾಹಿತಿ ನೀಡಲಾಗುವದು. ಬೆಳಗಾವಿಯಲ್ಲಿ ಅಧಿವೇಶನ ವರದಿಗಾರಿಕೆಗೆ 2 ದಿನ ಮಾತ್ರ ಕಾಲಾವಕಾಶ ನೀಡಲಾಗುವದು ಎಂದು ಹೇಳಿದರು. ಅಧಿವೇಶನದ ವರದಿಗಾರಿಕೆಗೆ ಬೆಂಗಳೂರಿನ ಯಾವದೇ ಪತ್ರಕರ್ತರನ್ನು ಆಯ್ಕೆಮಾಡಿರುವದಿಲ್ಲ. ಗ್ರಾಮೀಣ ಭಾಗದ ಪತ್ರಕರ್ತರಿಗೆ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು. ರಾಜ್ಯದ ಮಹಿಳಾ ಪತ್ರಕರ್ತರಿಗೆ ವಿಶೇಷ ಕಾರ್ಯಾಗಾರ (ಒಂದು ದಿನ), ಪರಿಶಿಷ್ಟ ಜಾತಿ ಮತ್ತು ಪಂಗಡದ ಪತ್ರಕರ್ತರಿಗಾಗಿ ವಿಶೇಷ ಕಾರ್ಯಾಗಾರ, ರಾಜ್ಯದ ಮುಖ್ಯಮಂತ್ರಿಗಳೊಂದಿಗೆ ರಾಜ್ಯದ ವಿವಿಧೆಡೆಯ ಪತ್ರಕರ್ತರ ಸಂವಾದ ಕಾರ್ಯಕ್ರಮ ಇತ್ಯಾದಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪರಿಸರ ಪತ್ರಿಕೋದ್ಯಮ ಅಧ್ಯಯನಕ್ಕಾಗಿ ಪರಿಸರ ಕಾಳಜಿ ಹೊಂದಿರುವ ಪತ್ರಕರ್ತರಿಗೆ ಜಿಲ್ಲೆಯ ನಾಗರಹೊಳೆ ಹಾಗೂ ಬಂಡಿಪುರದಲ್ಲಿ ಮೂರು ದಿನಗಳ ಶಿಬಿರ ಆಯೋಜಿಸುವ ಉದ್ಧೇಶ ಇರುವದಾಗಿ ವಿವರಿಸಿದರು.

ಮುಂದಿನ ವರ್ಷ ಬೆಂಗಳೂರು ವಿಧಾನ ಸಭೆ ಹಾಗೂ ಪರಿಷತ್ತು ಅಧಿವೇಶನ (ಮಳೆಗಾಲ) ವರದಿಗಾರಿಕೆ ಬಗ್ಗೆ ಅನುದಾನದ ಲಭ್ಯತೆ ನೋಡಿಕೊಂಡು ತೀರ್ಮಾನಿಸ ಲಾಗುವದು ಎಂದು ಅವರು ಮಾಹಿತಿ ನೀಡಿದರು.

- ಟಿ.ಎಲ್. ಶ್ರೀನಿವಾಸ್