ಸೋಮವಾರಪೇಟೆ, ಜೂ. 11: ಇಲ್ಲಿನ ಕರ್ನಾಟಕ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ವಾರ್ಷಿಕ ಮಹಾಸಭೆ ಸಂಘದ ಸಭಾಂಗಣದಲ್ಲಿ ನಡೆಯಿತು.ಸಭೆಗೆ ಜಿಲ್ಲಾ ಘಟಕದ ಅಧ್ಯಕ್ಷ ಹೆಚ್.ಎಂ. ಮಹಮ್ಮದ್ ಚಾಲನೆ ನೀಡಿದರು. ನಂತರ ಅವರು ಮಾತನಾಡಿ, ರಾಜ್ಯ ಸರ್ಕಾರ, ಸರ್ಕಾರಿ ನೌಕರರಿಂದ ಸೇವೆಯನ್ನು ಪಡೆದು ನಿವೃತ್ತರಾದ ನಂತರ ಅವರ ಯಾವದೇ ಬೇಡಿಕೆಗಳನ್ನು ಈಡೇರಿಸಲು ಮುಂದಾಗದೆ ನಿರ್ಲಕ್ಷ್ಯವಹಿಸುತ್ತಿದೆ ಎಂದು ಆರೋಪಿಸಿದರು.ತಾಲೂಕು ಪಂಚಾಯಿತಿ ಸದಸ್ಯೆ ಹೆಚ್.ಎನ್. ತಂಗಮ್ಮ ಮಾತನಾಡಿ, ವೃತ್ತಿ ಬದುಕು ಹರಿಯುವ ನೀರಾಗಿದ್ದು, ನಿವೃತ್ತಿ ಜೀವನದ ಬಗ್ಗೆ ಹೆಚ್ಚು ಚಿಂತಿಸದೆ ಚಟುವಟಿಕೆಯಿಂದ ಇರಲು ಮುಂದಾಗಬೇಕಿದೆ. ಆರೋಗ್ಯವನ್ನು ಕಾಪಾಡಿಕೊಳ್ಳುವ ಮೂಲಕ ಎಲ್ಲರೊಂದಿಗೆ ಉತ್ತಮ ಒಡನಾಟವನ್ನಿರಿಸಿಕೊಂಡು ಸಮಾಜ ಸೇವೆಯಲ್ಲಿ ನಮ್ಮನ್ನು ತೊಡಗಿಸಿಕೊಳ್ಳಬೇಕಿದೆ ಎಂದರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಸಂಘದ ಅಧ್ಯಕ್ಷ ನಿರ್ವಾಣಿ ಶೆಟ್ಟಿ ಮಾತನಾಡಿ, ಸರ್ಕಾರದ ಯಾವದೇ ಯೋಜನೆಗಳನ್ನು ಪಡೆಯಬೇಕಾದಲ್ಲಿ ಸಂಘಟಿತ ರಾಗಬೇಕಿದೆ.

ಈ ನಿಟ್ಟಿನಲ್ಲಿ ಸಂಘದ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಲು ಪ್ರಯತ್ನಿಸಲಾಗುತ್ತಿದೆ ಎಂದರು.

ವೇದಿಕೆಯಲ್ಲಿ ಸಕಲೇಶಪುರದ ನಿವೃತ್ತ ನೌಕರರ ಸಂಘದ ಕಾರ್ಯದರ್ಶಿ ಜಗದೀಶ್, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಕವನ್ ಕಾರ್ಯಪ್ಪ ಉಪಸ್ಥಿತರಿದ್ದರು.

ಇದೇ ಸಂದರ್ಭ ಸಂಘದ ಸದಸ್ಯರಾದ ಬಿ.ಡಿ. ತಿಮ್ಮಯ್ಯ, ಟಿ. ದಾಸಪ್ಪಶೆಟ್ಟಿ, ಎನ್.ಬಿ. ದೊಡ್ಡಣ್ಣ, ಕೆ.ಎನ್. ಶಕುಂತಳ, ಟಿ.ಡಿ. ಬೋಜಮ್ಮ ರವರನ್ನು ಸನ್ಮಾನಿಸಲಾಯಿತು. ಫ್ರಾನ್ಸ್‍ನ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದ ದೇಶದ ಏಕೈಕ ಪ್ರತಿನಿಧಿ ಸುಪ್ರಿಯಾ ದಯಾನಂದ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.