ಮಡಿಕೇರಿ ಜೂ.12 : ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ಪೌರ ಕಾರ್ಮಿಕರು ಹಾಗೂ ವಾಟರ್ ಮ್ಯಾನ್‍ಗಳನ್ನು ಖಾಯಂಗೊಳಿಸು ವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಗುತ್ತಿಗೆ ಪೌರಕಾರ್ಮಿಕರ ಸಂಘ ನಗರದಲ್ಲಿ ಪ್ರತಿಭಟನೆ ನಡೆಸಿತು.ರಾಜ್ಯ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು ಸ್ಥಳೀಯ ಸಂಸ್ಥೆಗಳಲ್ಲಿ ಪರಿಶ್ರಮದಿಂದ ದುಡಿಯುತ್ತಿರುವ ಕಾರ್ಮಿಕರನ್ನು ಸರಕಾರ ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿದರು.

160 ಅಂಶಗಳ ಪ್ರಣಾಳಿಕೆಯಲ್ಲಿ ಘೋಷಿಸಿಕೊಂಡಿರುವಂತೆ ಗುತ್ತಿಗೆ ಪೌರ ಕಾರ್ಮಿಕರು ಹಾಗೂ ವಾಟರ್ ಮ್ಯಾನ್‍ಗಳನ್ನು ಖಾಯಂಗೊಳಿಸುವ ಕಾಂಗ್ರೆಸ್ ಪಕ್ಷದ ಭರವಸೆ ಅಧಿಕಾರಕ್ಕೆ ಬಂದ ನಂತರ ಹುಸಿಯಾಗಿದೆ. ಸ್ಥಳೀಯ ಸಂಸ್ಥೆಗಳಲ್ಲಿ ನಡೆಯುತ್ತಿರುವ ಕಾನೂನು ಬಾಹಿರ ಗುತ್ತಿಗೆ ಪದ್ದತಿಯನ್ನು ತಡೆಯುವ ಸಲುವಾಗಿ 2017ರ ಮಾರ್ಚ್ ತಿಂಗಳೊಳಗೆ ವಿಶೇಷ ನೇಮಕಾತಿ ನಿಯಮ ರೂಪಿಸಿ ಎಲ್ಲಾ ಗುತ್ತಿಗೆ ಕಾರ್ಮಿಕರನ್ನು ಖಾಯಂಗೊಳಿಸಲು ಸಚಿವ ಸಂಪುಟ ತೀರ್ಮಾನಿಸಿತ್ತು.

ಆದರೆ ಸರಕಾರ ಇಲ್ಲಿಯವರೆಗೆ ಯಾವದೇ ಕ್ರಮ ಕೈಗೊಂಡಿಲ್ಲ. ಕರ್ನಾಟಕ ಮುನಿಸಿಪಲ್ ಕಾರ್ಪೋರೇಷನ್ ಆಕ್ಟ್ 1977ರ ಸೆಕ್ಷನ್ 92/ಬಿ ಶೆಡ್ಯೂಲ್ 11ರಲ್ಲಿ ಸಫಾಯಿ ಕರ್ಮಚಾರಿಗಳು ಮಾಡುವ ಎಲ್ಲಾ ಕೆಲಸಗಳು ಕಡ್ಡಾಯ ಸೇವೆಗಳೆಂದು ಪರಿಗಣಿಸಬೇಕಾಗುತ್ತದೆ. ಇಂತಹ ಅಗತ್ಯ ಸೇವೆಗಳನ್ನು ಗುತ್ತಿಗೆ ನೀಡುವದು ಕಾನೂನು ಬಾಹಿರವಾಗು ತ್ತದೆ ಎಂದು ಸಂಘದ ಪ್ರಮುಖರು ಅಭಿಪ್ರಾಯಪಟ್ಟರು.

ರಾಜ್ಯ ಪೌರಕಾರ್ಮಿಕರ ಸಂಘ ಈ ಸಂಬಂಧ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ವಯ ನ್ಯಾಯಾಲಯ ಪೌರ ಕಾರ್ಮಿಕರನ್ನು ಖಾಯಂಗೊಳಿಸಲು ತಿಳಿಸಿತ್ತು. ಆದರೆ ಸರಕಾರ ಗುತ್ತಿಗೆ ಪೌರಕಾರ್ಮಿಕರು ಹಾಗೂ ವಾಟರ್ ಮ್ಯಾನ್‍ಗಳನ್ನು ಖಾಯಂಗೊಳಿಸಲು ಹಿಂದೇಟು ಹಾಕುತ್ತಿದೆ ಎಂದು ಪದಾಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ರಾಜ್ಯ ಗುತ್ತಿಗೆ ಪೌರ ಕಾರ್ಮಿಕರ ಸಂಘದ ಉಪಾಧ್ಯಕ್ಷ ಶ್ರೀಕಾಂತ್ ಮಹಾಗುಣ, ಜಿಲ್ಲಾ ಪದಾಧಿಕಾರಿಗಳಾದ ಎಂ.ಎಸ್. ಹನುಮಂತರಾಯ, ಜೆ.ಎನ್. ನರಸಿಂಹಮೂರ್ತಿ, ಎಂ.ಚಂದ್ರು, ಸತ್ಯಕುಮಾರ್ ಹಾಗೂ ಕುಶಾಲನಗರದ ಸುರೇಶ್ ಬಾಬು, ನಂಜುಂಡ ಸ್ವಾಮಿ ಮತ್ತಿತರರು ಪಾಲ್ಗೊಂಡಿದ್ದರು.