ಗೋಣಿಕೊಪ್ಪಲು, ಜೂ. 12: ಕೃಷಿಕರಿಗೆ ಬೇಕಾಗುವ ಅಗತ್ಯ ಭತ್ತದ ಬಿತ್ತನೆ ಬೀಜ ಪೂರೈಸಲು ಕ್ರಮಕೈಗೊಳ್ಳಬೇಕು ಎಂದು ತಾಲೂಕು ಪಂಚಾಯಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜನಪ್ರತಿನಿಧಿಗಳು ಒತ್ತಾಯಿಸಿದರು.

ಪೊನ್ನಂಪೇಟೆ ಸಾಮಥ್ರ್ಯ ಸೌಧದಲ್ಲಿ ವೀರಾಜಪೇಟೆ ತಾಲೂಕು ಪಂಚಾಯಿತಿ ಅಧ್ಯಕ್ಷೆ ಬೊಳ್ಳಚಂಡ ಸ್ಮಿತಾ ಪ್ರಕಾಶ್ ಅಧ್ಯಕ್ಷತೆಯಲ್ಲಿ ನಡೆದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ ಉಪಾಧ್ಯಕ್ಷ ನೆಲ್ಲೀರ ಚಲನ್, ಕೃಷಿಕರಿಗೆ ಅಗತ್ಯತೆಗೆ ಅನುಗುಣವಾಗಿ ಬಿತ್ತನೆ ಬೀಜ ಲಭಿಸುವಂತಾಗಬೇಕು ಎಂದರು.

(ಮೊದಲ ಪುಟದಿಂದ) ಇದಕ್ಕೆ ಪ್ರತಿಕ್ರಿಯಿಸಿದ ಕೃಷಿ ಅಧಿಕಾರಿಗಳು ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ದಾಸ್ತಾನು ಮಾಡಲಾಗಿದೆ. ರೈತರು ಆರ್‍ಟಿಸಿ ಹಾಗೂ ಆಧಾರ್ ಕಾರ್ಡ್ ದಾಖಲಾತಿ ನೀಡಿ ಪಡೆದುಕೊಳ್ಳಬಹುದಾಗಿದೆ ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಪಾಂಡು ಮಾಹಿತಿ ನೀಡಿ, ಈಗಾಗಲೇ ಶಾಲೆಗಳಿಗೆ ಶೇ. 42 ರಷ್ಟು ಪಠ್ಯ ಪುಸ್ತಕ ದೊರಕಿದೆ. 201 ವಿದ್ಯಾರ್ಥಿಗಳಿಗೆ ಆರ್‍ಟಿಇಯಡಿ ಖಾಸಗಿ ಶಾಲೆಗಳಲ್ಲಿ ಹಾಜರಿ ನೀಡಲಾಗಿದೆ ಎಂದರು. ಖಜಾನೆ ಇಲಾಖೆಯಲ್ಲಿನ ತಾಂತ್ರಿಕ ದೋಷದಿಂದಾಗಿ ಹಲವಾರು ಇಲಾಖೆಗಳ ಸಿಬ್ಬಂದಿಗೆ ಮಾಸಿಕ ಸಂಬಳ ಪಡೆಯಲು ತೊಡಕಾಗಿದೆ. ಈ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಅಧಿಕಾರಿಗಳು ಒತ್ತಾಯಿಸಿದರು.

ಸಭೆಯಲ್ಲಿ ತಹಶೀಲ್ದಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಂ. ಗಣೇಶ್, ಗೋವಿಂದರಾಜು, ಇಓ ಕಿರಣ್ ರಾಯ್ ಪಡ್ನೇಕರ್ ಉಪಸ್ಥಿತರಿದ್ದರು.