ವೀರಾಜಪೇಟೆ, ಜೂ. 11: ವೀರಾಜಪೇಟೆ ವಿಭಾಗಕ್ಕೆ ಶುಕ್ರವಾರ ಮಧ್ಯರಾತ್ರಿಯಂದಲೇ ಮುಂಗಾರು ಪ್ರವೇಶವಾಗಿದ್ದು, ತುಂತುರು ಮಳೆ ಸುರಿಯುತ್ತಿದೆ.

ಮೋಡ ಕವಿದ ವಾತಾವರಣದಿಂದ ಕೂಡಿದ್ದು ಇಂದು ಬೆಳಗಿನಿಂದಲೇ ವೀರಾಜಪೇಟೆ ವಿಭಾಗದಲ್ಲಿ ತುಂತುರು ಮಳೆ ಮುಂದುವರೆದಿದೆ. ಕೇರಳದ ಕರಾವಳಿಯಲ್ಲಿ ಆರು ದಿನಗಳ ಹಿಂದೆಯೇ ಮುಂಗಾರು ಪ್ರವೇಶಿಸಿದ್ದು, ಕರಾವಳಿ ಪ್ರದೇಶದಲ್ಲಿರುವ ನಿವಾಸಿಗಳಿಗೆ ಎಚ್ಚರದಲ್ಲಿರುವಂತೆ ಕೇರಳ ಸರ್ಕಾರ ಮುನ್ಸೂಚನೆ ನೀಡಿದೆ. ಮುಂಗಾರು ಮಳೆ ಕಡಿಮೆಯಾಗುವ ತನಕ ಸಮುದ್ರದಲ್ಲಿ ಬೋಟ್, ಇತರ ದೋಣಿಗಳನ್ನು ಬಳಸಿ ಮೀನು ಹಿಡಿಯುವ ಬೆಸ್ತರಿಗೂ ಮೀನು ಹಿಡಿಯದಂತೆ ಸರಕಾರ ನಿರ್ಬಂಧ ವಿಧಿಸಿದೆ.

ವೀರಾಜಪೇಟೆ ವಿಭಾಗದ ಆರ್ಜಿ, ಹೆಗ್ಗಳ, ಕೆದಮುಳ್ಳೂರು, ವಿ.ಬಾಡಗ, ಪೆರುಂಬಾಡಿ, ಬಿಟ್ಟಂಗಾಲ,ಕದನೂರು, ಮೈತಾಡಿ ಸುತ್ತ ಮುತ್ತಲಿನ ಪ್ರದೇಶಗಳಲ್ಲಿಯೂ ನಿನ್ನೆ ಬೆಳಗಿನಿಂದ ಮಳೆ ಸುರಿಯುತ್ತಿದೆ. ಕೊಡಗು ಕೇರಳ ಗಡಿ ಭಾಗವಾದ ಮಾಕುಟ್ಟ, ಪೆರುಂಬಾಡಿಯಲ್ಲಿಯೂ ಮಳೆ ಸುರಿಯುತ್ತಿದ್ದು ಎರಡು ದಿನಗಳ ಮಳೆಯಿಂದ ರಸ್ತೆ ಸಂಚಾರಕ್ಕೆ ಯಾವದೇ ಅಡಚಣೆಯಾಗಿಲ್ಲವೆನ್ನಲಾಗಿದೆ.

ರಾಜ್ಯದ ಹವಾಮಾನ ಇಲಾಖೆಯ ಮುನ್ಸೂಚನೆಯ ಮಾಹಿತಿಯಂತೆ ಕೇರಳ ಹಾಗೂ ಕೊಡಗು ಕೇರಳದ ಗಡಿಭಾಗದಲ್ಲಿ ಮಳೆ ಸುರಿಯುತ್ತಿದೆ.