ವೀರಾಜಪೇಟೆ, ಜೂ. 11: ಭಾರತ ಜಾತ್ಯತೀತವಾದ ದೇಶ. ಇಲ್ಲಿ ಜಾತಿ, ಮತ, ವರ್ಗ ಎಂಬ ಬೇಧಗಳಿಲ್ಲ. ಎಲ್ಲ ಧರ್ಮಗಳು ಒಂದೇ, ಧರ್ಮ ಎಂಬದು ಮನುಷ್ಯನನ್ನು ಎಂದಿಗೂ ವಿಂಗಡಿಸುವದಿಲ್ಲ ಎಂದು ಮಂಗಳೂರು ‘ಸನ್ಮಾರ್ಗ’ ವಾರ ಪತ್ರಿಕೆಯ ಉಪ ಸಂಪಾದಕ ಜ.ಎಂ. ಶೌಕತ್ ಅಲಿ ಹೇಳಿದರು.

ಇಲ್ಲಿನ ಗಣಪತಿ ಆರ್ಕೆಡ್ ಸಭಾಂಗಣದಲ್ಲಿ ವೀರಾಜಪೇಟೆ ಮುಸ್ಲಿಂ ಒಕ್ಕೂಟದಿಂದ ಏರ್ಪಡಿಸಿದ್ದ ಇಫ್ತಾರ್ ಸ್ನೇಹ ಮಿಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪಟ್ಟಣ ಪಂಚಾಯಿತಿ ಅಧ್ಯಕ್ಷ ಇ.ಸಿ. ಜೀವನ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ.ಪಂ.ನ ಹಿರಿಯ ಸದಸ್ಯ ಎಸ್.ಹೆಚ್. ಮೈನುದ್ದೀನ್, ವಕೀಲ ಕುಂಞÂ ಅಬ್ದುಲ್ಲಾ, ಸದ್ಬಾವನ ಮಂಚ್‍ನ ಕಾರ್ಯಾಧ್ಯಕ್ಷ ಅಮ್ಮಣಿಚಂಡ ರವಿ ಉತ್ತಪ್ಪ, ಜಮಾಅತೆ ಇಸ್ಲಾಮಿ ಹಿಂದ್ ಜಿಲ್ಲಾ ಸಂಚಾಲಕ ಸಿ.ಹೆಚ್. ಅಪ್ಸರ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮದೂಶ್ ಪೂವಯ್ಯ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿಸಾರ್ ಅಹಮದ್ ವಹಿಸಿದ್ದರು. ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಪಿ.ಕೆ. ಅಬ್ದುಲ್ ರೆಹಮಾನ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭಾಂಗಣದಲ್ಲೇ ಸಾಮೂಹಿಕ ಮಗ್ರಿಬ್ ನಮಾಝ್ ನಂತರ ಇಫ್ತಾರ್ ಮಿಲನ ನಡೆಯಿತು. ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ತಸ್ನಿಂ ಅಕ್ತರ್, ಮಾಜಿ ಅಧ್ಯಕ್ಷೆ ಎಂ.ಕೆ. ದೇಚಮ್ಮ ಕಾಳಪ್ಪ, ಮುಸ್ಲಿಂ ಬ್ಯಾಂಕ್ ಅಧ್ಯಕ್ಷ ಮಹಮದ್ ಸೂಯೇಬ್, ಕೋಲತಂಡ ಬೋಪಯ್ಯ, ಪ್ರಮುಖರುಗಳು ಭಾಗವಹಿಸಿದ್ದರು.