ಮಡಿಕೇರಿ, ಜೂ. 11: ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಇನ್ನಷ್ಟು ಉತ್ತಮ ಸಾಧನೆ ಮಾಡುವತ್ತ ಶ್ರಮಿಸಬೇಕು. ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪಿಯು ಕಾಲೇಜುಗಳು ಶೇ. 100 ರಷ್ಟು ಫಲಿತಾಂಶ ಪಡೆಯಲು ಈಗಿನಿಂದಲೇ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಸಲಹೆ ನೀಡಿದರು. ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ವಿವಿದ್ಧೋದ್ದೇಶ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪಠ್ಯಪುಸ್ತಕ ವಿತರಣಾ ಕಾರ್ಯ ಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಜಿಲ್ಲೆಯ ಕೆಲವು ಅನುದಾನಿತ ಮತ್ತು ಸರ್ಕಾರಿ ಕಾಲೇಜುಗಳಲ್ಲಿ ಶೇ. 50 ಕ್ಕಿಂತ ಕಡಿಮೆ ಫಲಿತಾಂಶ ಬಂದಿದ್ದು, ಇಂತಹ ಕಾಲೇಜುಗಳ ಪ್ರಾಂಶುಪಾಲರು ಹಾಗೂ ಸಂಬಂಧಪಟ್ಟ ವಿಷಯ ಉಪನ್ಯಾಸಕರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಫಲಿತಾಂಶ ಕಡಿಮೆ ಬಂದಿರುವ ಕಾಲೇಜುಗಳಿಗೆ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಭೇಟಿ ನೀಡಿ ಪರಿಶೀಲನೆ ಮಾಡುವಂತೆ ಜಿಲ್ಲಾಧಿಕಾರಿ ಸಲಹೆ ಮಾಡಿದರು.

ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಟಿ. ಸ್ವಾಮಿ ಮಾತನಾಡಿ, ಪ್ರಥಮ ಪಿಯುಸಿ, ವಾಣಿಜ್ಯ ವಿಜ್ಞಾನ, ಆರ್ಥಿಕ ವಿಜ್ಞಾನ, ಲೆಕ್ಕ ಶಾಸ್ತ್ರ, ವ್ಯವಹಾರ ಅಧ್ಯಯನ ಪುಸ್ತಕಗಳನ್ನು ವಿತರಿಸಲಾಗುತ್ತದೆ.

ಪದವಿಪೂರ್ವ ಶಿಕ್ಷಣವು ವಿದ್ಯಾರ್ಥಿ ಜೀವನದಲ್ಲಿ ಮುಖ್ಯ ಘಟ್ಟವಾಗಿದ್ದು, ಅದನ್ನು ಅರಿತು ಜಿಲ್ಲೆಯ ಎಲ್ಲಾ ಕಾಲೇಜುಗಳಲ್ಲಿ ಶೇ. 100 ರಷ್ಟು ಫಲಿತಾಂಶ ಪಡೆಯಲು ಶ್ರಮಿಸಬೇಕು ಎಂದು ಹೇಳಿದರು.

ಪ್ರಾಂಶುಪಾಲರ ಸಂಘದ ಅಧ್ಯಕ್ಷ ಕೆಂಚಪ್ಪ, ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಬೆಳ್ಯಪ್ಪ, ಐಟಿಡಿಪಿ ಇಲಾಖಾ ಅಧಿಕಾರಿ ಪ್ರಕಾಶ್ ಇತರರು ಇದ್ದರು.