ಬೆಂಗಳೂರು, ಜೂ. 12: ಕೊಡಗಿನ ತಲಕಾವೇರಿ ಮತ್ತು ಬ್ರಹ್ಮಗಿರಿ ಸೂಕ್ಷ್ಮ ಪರಿಸರ ವಲಯವಾಗಿ ಘೋಷಿಸಿರುವ ಬಗ್ಗೆ ಶೂನ್ಯ ವೇಳೆಯಲ್ಲಿ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಸದನದ ಗಮನ ಸೆಳೆದರು. ಈ ಬಗ್ಗೆ ಸರಕಾರ ಕೊಡಗು ಜಿಲ್ಲೆಯಲ್ಲಿ ಸಭೆ ಕರೆಯಬೇಕು ಎಂದು ಒತ್ತಾಯಿಸಿದರು.

ವಿಷಯದ ಕುರಿತು ಪ್ರತಿಕ್ರಿಯಿಸಿದ ರಾಜ್ಯ ಅರಣ್ಯ ಸಚಿವ ರಮಾನಾಥ್ ರೈ..ಇದನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೋಷಣೆ ಮಾಡದೇ ಇದ್ದಿದ್ದರೆ ಹತ್ತು ಕಿ.ಮೀ ವ್ಯಾಪ್ತಿಯವರೆÀಗೆ “ಡೀಮ್ಡ್ ಫಾರೆಸ್ಟ್” ಎಂದಾಗುತ್ತದೆ. ಇದನ್ನು ತಪ್ಪಿಸಲು ಅಭಯಾರಣ್ಯಗಳ ಒಂದು ಕಿ.ಮೀ ಪ್ರದೇಶದ ವ್ಯಾಪ್ತಿಯನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸಲಾಗಿದೆ. ಆದರೆ, ಕೇರಳದ ಗಡಿಪ್ರದೇಶದಲ್ಲಿ ಮಾತ್ರ ಶೂನ್ಯ ವ್ಯಾಪ್ತಿ ನಿಗದಿಪಡಿಸಲಾಗಿದೆ ಎಂದರು. ಇತ್ತೀಚೆಗೆ ಸೂಕ್ಷ್ಮ ಪರಿಸರ ತಾಣ ಘೋಷಣೆಯನ್ನು ಮಡಿಕೇರಿ ತಾಲೂಕಿನ ಭಾಗಮಂಡಲ ಮತ್ತು ವೀರಾಜಪೇಟೆ ತಾಲೂಕಿನ ಬ್ರಹ್ಮಗಿರಿ ವನ್ಯಜೀವಿ

(ಮೊದಲ ಪುಟದಿಂದ) ವ್ಯಾಪ್ತಿಯ ಗ್ರಾಮಸ್ಥರು ವಿರೋಧಿಸಿದ್ದಾರೆ. ಭಾಗಮಂಡಲದಲ್ಲಿ ತಾ. 9 ರಿಂದ ಬಂದ್ ಮತ್ತು ಧರಣಿಯಲ್ಲಿ ತೊಡಗಿದ್ದಾರೆ. ಇದರಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದ್ದರೂ ಅಂತಿಮವಾಗಿ ಇದರ ಬಗ್ಗೆ ನಿರ್ಧಾರ ಕೈಗೊಂಡು ‘ಮಾಸ್ಟರ್ ಪ್ಲಾನ್ ‘ ರಚಿಸಲು ರಾಜ್ಯದ ಮೈಸೂರು ಪ್ರಾದೇಶಿಕ ಆಯುಕ್ತರ ನೇತೃತ್ವದಲ್ಲಿ ಇರುವ ಸಮಿತಿಗೆ ಅಧಿಕಾರ ನೀಡಲಾಗಿದೆ. ಆದ್ದರಿಂದ ಸಮಸ್ಯೆಯ ಗಂಭೀರತೆಯನ್ನು ಪರಿಗಣಿಸಿ ಈ ಕೂಡಲೇ ಪ್ರಾದೇಶಿಕ ಮಟ್ಟದ ಸಮಿತಿಯ ಸಭೆ ಕರೆದು ಈ ಹಿಂದಿನ ಶಿಫಾರಸ್ಸಿನಂತೆ ಸೂಕ್ಷ್ಮ ಪರಿಸರ ಪ್ರದೇಶವನ್ನು ಶೂನ್ಯ ಕಿ.ಮೀ.ಗೆ ಗುರುತಿಸುವಂತೆ ಸರ್ಕಾರವನ್ನು ಶಾಸಕ ಕೆ.ಜಿ. ಬೋಪಯ್ಯ ಕೋರಿದರು. ಈ ಬಗ್ಗೆ ಶೂನ್ಯವೇಳೆಯಲ್ಲಿ ಸದನದಲ್ಲಿ ಪ್ರಸ್ತಾಪಿಸಲು ಅವಕಾಶ ಕೋರಿ ಸಭಾಧ್ಯಕ್ಷರಿಗೆ ಮನವಿ ಮಾಡಿದರು. ಇದೇ ಸಂದರ್ಭ ಅರಣ್ಯ ಸಚಿವ ರಮಾನಾಥ ರೈ ಅವರು ವಿಧಾನ ಸಭೆಯಲ್ಲಿ ಮುಂದೆ ಈ ಬಗ್ಗೆ ಚರ್ಚೆಗೆ ಅವಕಾಶ ಕಲ್ಪಿಸುವದಲ್ಲದೆ ಬಳಿಕ ಪ್ರಾದೇಶಿಕ ಮಟ್ಟದ ಸಭೆ ಕರೆಯಲು ಸಮ್ಮತಿ ಸೂಚಿಸಿದರು.

1 ಕಿ.ಮೀ ವ್ಯಾಪ್ತಿ ಮಾತ್ರ

ಜಿಲ್ಲೆಯ ಬ್ರಹ್ಮಗಿರಿ ಪರಿಸರ ತಾಣದ 14 ಗ್ರಾಮಗಳು ಹಾಗೂ ತಲಕಾವೇರಿ ತಾಣದ 6 ಗ್ರಾಮಗಳನ್ನು ಸೂಕ್ಷ್ಮ ಪರಿಸರ ವಲಯಕ್ಕೆ ಸೇರ್ಪಡೆಗೊಳಿಸಿರುವ ಪರಿಣಾಮದ ಬಗ್ಗೆ ಇಂದು “ಶಕ್ತಿ” ಜಿಲ್ಲೆಯ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಸ್ಪಷ್ಟ ಮಾಹಿತಿ ಲಭ್ಯವಾಗಿದೆ. ಜಿಲ್ಲೆಯ ಈ ಎರಡೂ ತಾಣಗಳಲ್ಲಿನ ಗುರುತಿಸಲ್ಪಟ್ಟ ಗ್ರಾಮ ಪ್ರದೇಶಗಳಲ್ಲಿ ಅಭಯಾರಣ್ಯದ ಸುತ್ತಲಿನಲ್ಲಿ ಕೇವಲ 1 ಕಿÀ.ಮೀ. ವ್ಯಾಪ್ತಿಯಲ್ಲಿ ಮಾತ್ರ ಸೂಕ್ಷ್ಮ ಪರಿಸರ ವಲಯದ ನಿರ್ಬಂಧಗಳಿರುತ್ತವೆ. ತಲಕಾವೇರಿ ಅಭಯಾರಣ್ಯದ ಸುತ್ತಮುತ್ತ 1 ರಿಂದ 15 ಕಿ.ಮೀಟರ್ ಹಾಗೂ ಬ್ರಹ್ಮಗಿರಿ ಅಭಯಾರಣ್ಯ ಸುತ್ತಮುತ್ತ 1 ರಿಂದ 16 ಕಿ.ಮೀ. ಪ್ರದೇಶವನ್ನು ಘೋಷಿಸಲಾಗಿದ್ದರೂ ಗ್ರಾಮಾಂತರ ಪ್ರದೇಶಗಳಲ್ಲಿ ಕೇವಲ 1 ಕಿ.ಮೀ ಮಾತ್ರ ಒಳಪಡಿಸಲಾಗಿದೆ. ಮಿಕ್ಕ ಪ್ರದೇಶ ಮೀಸಲು ಅರಣ್ಯಗಳಾಗಿ ಸೇರ್ಪಡೆಗೊಂಡಿದೆ ಎಂದು ಮಡಿಕೇರಿಯ ವನ್ಯಜೀವಿ ಅರಣ್ಯ ಉಪಸಂರಕ್ಷಣಾಧಿಕಾರಿ ಜಯ ಅವರು ‘ಶಕ್ತಿ’ ಗೆ ಮಾಹಿತಿಯಿತ್ತಿದ್ದಾರೆ.

ಈ ಕುರಿತು ಜಿಲ್ಲಾ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ಕುಮಾರ್ ಅವರ ಅಭಿಪ್ರಾಯವನ್ನು ‘ಶಕ್ತಿ’ ಬಯಸಿದಾಗ ಗುರುತಿಸಲ್ಪಟ್ಟ ಗ್ರಾಮೀಣ ಪ್ರದೇಶಗಳಲ್ಲಿ ಕೇವಲ 1 ಕಿ.ಮೀ ವ್ಯಾಪ್ತಿಯನ್ನು ಮಾತ್ರ ಪರಿಗಣಿಸಿರುವದು ಖಚಿತವಾಗಿದೆ ಎಂದು ಸ್ಪಷ್ಟಪಡಿಸಿದರು. ಆದರೆ, ಈ ಪ್ರದೇಶದಲ್ಲಿ ಬೃಹತ್ ಪ್ರಮಾಣದ ಕೈಗಾರಿಕೋದ್ಯಮಗಳನ್ನು ಹಾಗೂ ಮಾಲಿನ್ಯ ರಹಿತ ಉದ್ಯಮಗಳನ್ನು ಪ್ರಾರಂಭಿಸಲು ಅವಕಾಶವಿಲ್ಲ. ಆದರೆ, ಹೋಂ ಸ್ಟೇ ಮುಂತಾದ ಜನರಿಗೆ ಬೇಕಾಗಿರುವ ವ್ಯವಹಾರಗಳನ್ನು ನಡೆಸಲು ಈ ಹಿಂದಿನಂತೆ ಜಿಲ್ಲಾ ಮಟ್ಟದಲ್ಲಿ ಅನುಮತಿ ಪಡೆಯಲು ಅವಕಾಶವಿರುವದಿಲ್ಲ. ಸೂಕ್ಷ್ಮ ಪರಿಸರ ನಿರ್ವಹಣಾ ಸಮಿತಿ ಅಧ್ಯಕ್ಷರೆಂದು ಕೇಂದ್ರ ಸರಕಾರದಿಂದ ಪರಿಗಣಿಸಲ್ಪಟ್ಟಿರುವ ಮೈಸೂರಿನ ಪ್ರಾದೇಶಿಕ ಆಯುಕ್ತರಿಗೆ ಅರ್ಜಿ ಸಲ್ಲಿಸಿ ಅವರ ಮೂಲಕ ಅನುಮತಿ ಪಡೆಯುವ ಅವಕಾಶವಿದೆ ಎಂದು ಮನೋಜ್ ಕುಮಾರ್ ವಿವರಿಸಿದರು. ಜನರು ಆತಂಕಗೊಳ್ಳುವದು ಬೇಡ ಎಂದು ಕೋರಿದರು.

ಸೂಕ್ಷ್ಮ ಪರಿಸರ ತಾಣದ ಕುರಿತಾದ ಆದೇಶ ಇನ್ನೂ ಕೈ ಸೇರಿಲ್ಲ ಸಿಕ್ಕದ ಬಳಿಕವಷ್ಟೆ ತಾನು ಈ ಕುರಿತಾಗಿ ಅಭಿಪ್ರಾಯ ತಿಳಿಸುವದಾಗಿ ಜಿಲ್ಲಾಧಿಕಾರಿ ಆರ್. ವಿನ್ಸೆಂಟ್ ದಿಸೋಜ “ಶಕ್ತಿ” ಗೆ ತಿಳಿಸಿದ್ದಾರೆ. ಮೈಸೂರಿನ ಪ್ರಾದೇಶಿಕ ಆಯುಕ್ತರ ಕಚೇರಿಗೆ ಇದುವರೆಗೆ ಆದೇಶ ತಲುಪಿಲ್ಲ ಎಂದು ಆಯುಕ್ತರ ಕಚೇರಿಯ ಸೂಪರಿಂಟೆಂಡೆಂಟ್ ಶಾಂತಾರಂ “ಶಕ್ತಿ”ಗೆ ಮಾಹಿತಿಯಿತ್ತರು. ಬಹಳಷ್ಟು ಹಿಂದಿನಿಂದಲೇ ಬಂಡೀಪುರ ಅರಣ್ಯ ಧಾಮದ ಸೂಕ್ಷ್ಮ ಪರಿಸರ ತಾಣದ ನಿರ್ವಹಣೆಯನ್ನು ಪ್ರಾದೇಶಿಕÀ ಆಯುಕ್ತರು ನಡೆಸುತ್ತಿದ್ದಾರೆ. ಈ ಬಗ್ಗೆ ಅಲ್ಲಿನ ಜನರಿಗೆ ಯಾವದೇ ಸಮಸ್ಯೆ ಉಂಟಾಗಿಲ್ಲ ಎಂದು ಖಚಿತಪಡಿಸಿದರು.