ಭಾಗಮಂಡಲ, ಜೂ. 11: ತಲಕಾವೇರಿ ವನ್ಯಧಾಮ ಪ್ರದೇಶವನ್ನು ಸೂಕ್ಷ್ಮ ಪರಿಸರ ತಾಣಕ್ಕೆ ಸೇರ್ಪಡೆಗೊಳಿಸಿರುವದನ್ನು ವಿರೋಧಿಸಿ ಭಾಗಮಂಡಲ ಕಸ್ತೂರಿ ರಂಗನ್ ವಿರೋಧಿ ಹೋರಾಟ ಸಮಿತಿ ವತಿಯಿಂದ ಭಾಗಮಂಡಲ ದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಮುಂದುವರೆದಿದೆ.

ಭಾನುವಾರ ಮಧ್ಯಾಹ್ನ 3 ಗಂಟೆವರೆಗೆ ಭಾಗಮಂಡಲ ವಲಯ ಅರಣ್ಯ ಕಚೇರಿ ಎದುರು ಧರಣಿ ಕೈಗೊಳ್ಳಲಾಗಿದೆ.

ಸೋಮವಾರ ಬೆಳಿಗ್ಗೆ 10.30 ಗಂಟೆಗೆ ಭಾಗಮಂಡಲ ಗ್ರಾಮಸಭೆ ನಡೆಯಲಿದ್ದು, ಧರಣಿ ನಿರತರು ಮೆರವಣಿಗೆಯಲ್ಲಿ ಗ್ರಾಮಸಭೆಗೆ ತೆರಳಲಿದ್ದಾರೆ ಮತ್ತು ಭಾಗಮಂಡಲ ವ್ಯಾಪ್ತಿಯ ಅಂಗಡಿ ಮುಂಗಟ್ಟುಗಳನ್ನು ಬೆಳಿಗ್ಗೆ 10.30ರಿಂದ 12 ಗಂಟೆವರೆಗೆ ಬಂದ್ ಮಾಡಿ ಧರಣಿಗೆ ಬೆಂಬಲ ನೀಡಲಾಗುವದು ಎಂಬ ಮಾಹಿತಿ ಲಭ್ಯವಾಗಿದೆ. ಇದೇ ಸಂದರ್ಭ ಶ್ರೀ ಕಾವೇರಿ ಆಟೋ ಮಾಲೀಕರು ಮತ್ತು ಚಾಲಕರ ಸಂಘವು ಧರಣಿಗೆ ಬೆಂಬಲ ನೀಡಲಿದ್ದು, 10.30ರಿಂದ 12 ಗಂಟೆವರೆಗೆ ಆಟೋ ಸಂಚಾರವನ್ನು ಸ್ಥಗಿತಗೊಳಿಸಲಾಗುವದು ಎಂದು ಸಂಘದ ಅಧ್ಯಕ್ಷ ಭಾಸ್ಕರ ಹಾಗೂ ಕಾರ್ಯದರ್ಶಿ ಭವನ್ ಕುಮಾರ್ ತಿಳಿಸಿದ್ದಾರೆ.