ವೀರಾಜಪೇಟೆ, ಜೂ. 11 ಕಳೆದ 20ದಿನಗಳ ಹಿಂದೆ ಅಮ್ಮತ್ತಿಯ ಮುಖ್ಯ ರಸ್ತೆಯ ಬಾರ್‍ನ ಮುಂದುಗಡೆ ಮಣಿ (26) ಎಂಬಾತನ ಮರ್ಮಾಂಗಕ್ಕೆ ಚಾಕುವಿನಿಂದ ತಿವಿದು ಕೊಲೆಗೈದು ತಲೆ ಮರೆಸಿಕೊಂಡಿದ್ದ ಆರೋಪಿ ಪಣಿಎರವರ ಕೆ. ಮಂಜು (40) ಎಂಬಾತನನ್ನು; ಇಂದು ಬೆಳಿಗ್ಗೆ ಗ್ರಾಮಾಂತರ ಪೊಲೀಸರ ತಂಡ ಹೊಸೂರು ಗೋಣಿಕೊಪ್ಪ ರಸ್ತೆಯ ಬಸ್ ತಂಗುದಾಣದಲ್ಲಿ

(ಮೊದಲ ಪುಟದಿಂದ) ಬಂಧಿಸಿ ಸಂಜೆ ಇಲ್ಲಿನ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದೆ.

ತಾ. 21.5.17ರಂದು ಸಂಜೆ 6.30ರ ಸಮಯದಲ್ಲಿ ಮೃತ ಮಣಿ ಹಾಗೂ ಮಂಜುವಿನ ನಡುವೆ ಇಪ್ಪತ್ತು ರೂ ಸಾಲದ ವಿಚಾರದಲ್ಲಿ ಜಗಳ ಉಂಟಾಗಿದೆ. ಈ ವೇಳೆ ಮಂಜು ತನ್ನ ಕೈಯ್ಯಲ್ಲಿದ್ದ ಚೂರಿಯಿಂದ ಮಣಿಯ ಮೇಲೆ ಹಲ್ಲೆ ನಡೆಸಿದಾಗ ಮಣಿ ಸ್ಥಳದಲ್ಲಿಯೇ ಸಾವನ್ನಪ್ಪಿದನೆಂದು ಮೃತನ ಪತ್ನಿ ಪೊನ್ನಮ್ಮ ಗ್ರಾಮಾಂತರ ಪೊಲೀಸರಿಗೆ ನೀಡಿದ ದೂರಿನ ಮೇರೆ ಪೊಲೀಸರು ಮಂಜುವಿನ ವಿರುದ್ಧ ಕೊಲೆ ಮೊಕದ್ದಮೆ ದಾಖಲಿಸಿದ್ದರು.

ಕೊಲೆ ಆರೋಪಿಯ ಪತ್ತೆಗಾಗಿ ಡಿ.ವೈಎಸ್.ಪಿ ನಾಗಪ್ಪ ಅವರ ಮಾರ್ಗದರ್ಶನದಲ್ಲಿ ಸರ್ಕಲ್ ಇನ್ಸ್‍ಪೆಕ್ಟರ್ ಎನ್.ಕುಮಾರ್ ಆರಾಧ್ಯ ಅವರ ನೇತೃತ್ವದಲ್ಲಿ, ಸಬ್‍ಇನ್ಸ್‍ಪೆಕ್ಟರ್ ನಂಜುಂಡಸ್ವಾಮಿ, ಸಿಬ್ಬಂದಿಗಳಾದ ಎಂ.ಸಿ. ನಂಜಪ್ಪ, ಪಿ. ಬೆಳ್ಳಿಯಪ್ಪ, ಶ್ರೀನಿವಾಸ್, ಮೋಹನ್ ಹಾಗೂ ಪುರುಷೊತ್ತಮ್ ಕೊಲೆ ಆರೋಪಿಯನ್ನು ಪತ್ತೆ ಹಚ್ಚಿ ಕೊಲೆಗೆ ಬಳಸಿದ ಚೂರಿಯನ್ನು ವಶ ಪಡಿಸಿಕೊಂಡಿದ್ದಾರೆ.

ಮೃತ ಮಣಿಯು 7ದಿನಗಳ ಹಿಂದೆ ಮಂಜುವಿನಿಂದ ರೂ 20 ಸಾಲವನ್ನು ಪಡೆದಿದ್ದನ್ನು ಹಿಂದಿರುಗಿಸಿಲ್ಲ ಎಂಬ ಕಾರಣಕ್ಕಾಗಿ ಇಬ್ಬರ ನಡುವೆ ಜಗಳ ಉಂಟಾಗಿತ್ತೆಂದು ಪೊಲೀಸ್ ತನಿಖೆಯಿಂದ ಗೊತ್ತಾಗಿದೆ.