ಮಡಿಕೇರಿ, ಜೂ. 12: ಅತಿಸಾರ ಭೇದಿ ತೀವ್ರ ನಿಯಂತ್ರಣ ಪಾಕ್ಷಿಕ ಅಭಿಯಾನಕ್ಕೆ ಜಿ.ಪಂ.ಸಿಇಓ ಚಾರುಲತಾ ಸೋಮಲ್ ಚಾಲನೆ ನೀಡಿದರು. ನಗರದ ಆಜಾದ್ ನಗರದಲ್ಲಿರುವ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಒ.ಆರ್.ಎಸ್. ದ್ರಾವಣ ಮಿಶ್ರಣ ಮಾಡುವ ಪ್ರಾತ್ಯಕ್ಷಿಕೆ ಮೂಲಕ ಪಾಕ್ಷಿಕ ಅಭಿಯಾನಕ್ಕೆ ಚಾಲನೆ ನೀಡಿದರು. ದೇಶದಲ್ಲಿ ಶೇ. 10 ರಷ್ಟು ಶಿಶು ಮರಣವು ಅತಿಸಾರ ಭೇದಿಯಿಂದ ಉಂಟಾಗುತ್ತಿದೆ. ಆದ್ದರಿಂದ ಇದನ್ನು ತಡೆಯುವ ನಿಟ್ಟಿನಲ್ಲಿ ಅತಿಸಾರ ಭೇದಿ ತೀವ್ರ ನಿಯಂತ್ರಣ ಪಾಕ್ಷಿಕ ಅಭಿಯಾನವನ್ನು ತಾ. 24 ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಆರ್.ಸಿ.ಎಚ್. ಅಧಿಕಾರಿ ಡಾ.ನಿಲೇಶ್ ಅವರು ಮಾತನಾಡಿ, ಅತಿಸಾರ ಭೇದಿಯಿಂದ ಉಂಟಾಗುವ ಶಿಶು ಮರಣ ತಡೆಯುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಓ.ಆರ್.ಎಸ್.ನ್ನು ಅತಿಸಾರ ಭೇದಿ ನಿಲ್ಲುವವರೆಗೆ ನೀಡುವ ಮೂಲಕ ನಿರ್ಜಲೀಕರಣವನ್ನು ದೂರವಾಗಿರಿಸಿ ಝಿಂಕ್ ಮಾತ್ರೆಗಳನ್ನು 14 ದಿನಗಳವರೆಗೆ ಪ್ರತೀದಿನ 1 ರಂತೆ ನೀಡುವದರಿಂದ ಶಕ್ತಿಯನ್ನು ಹೆಚ್ಚಿಸುತ್ತದೆ. ಮೂರು ತಿಂಗಳ ತನಕ ಅತಿಸಾರ ಭೇದಿಯಿಂದ ಕಾಪಾಡುತ್ತದೆ” ಎಂದರು.

ಸಭಾ ಕಾರ್ಯಕ್ರಮಕ್ಕೂ ಮೊದಲು ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರ ಕಚೇರಿ ಬಳಿ ಅತಿಸಾರ ಭೇದಿ ತೀವ್ರ ನಿಯಂತ್ರಣ ಪಾಕ್ಷಿಕ ಅಭಿಯಾನದ ಜಾಥಾಗೆ ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಚಾಲನೆ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶಿವಕುಮಾರ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಆಶಾ, ಕ್ಷಯರೋಗ ನಿಯಂತ್ರಣಾಧಿಕಾರಿ ಎ.ಸಿ. ಶಿವಕುಮಾರ್, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪಾಲಾಕ್ಷ, ಜಿಲ್ಲಾ ಆಸ್ಪತ್ರೆಯ ಸ್ವಾಮಿ, ಮಮತ, ದಿವಾಕರ, ಉಮೇಶ್, ಕಿರಣ್ ಇತರರು ಇದ್ದರು.