ಮಡಿಕೇರಿ, ಜೂ. 11: ಮಡಿಕೇರಿ ರಾಜರ ಗದ್ದುಗೆ ಸೇರಿದಂತೆ ಕರ್ನಾಟಕ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟಿರುವ ಇತರ ಆರು ದೇವಾಲಯಗಳು ಮುಜರಾಯಿ ವ್ಯವಸ್ಥೆಯಡಿ ಕಾರ್ಯನಿರ್ವಹಿಸುತ್ತಿವೆ ಎಂದು ರಾಜ್ಯ ಮುಜರಾಯಿ ಖಾತೆ ಸಚಿವ ರುದ್ರಪ್ಪ ಮಾನಪ್ಪ ಲಮಾಣಿ ತಿಳಿಸಿದ್ದಾರೆ. ಮೇಲ್ಮನೆ ಸದಸ್ಯೆ ವೀಣಾ ಅಚ್ಚಯ್ಯ ಅವರ ಪ್ರಶ್ನೆಗೆ ಉತ್ತರಿಸಿರುವ ಸಚಿವರು ನಗರದ ಶ್ರೀ ಆಂಜನೇಯ ಗುಡಿ ಜೀರ್ಣೋದ್ಧಾರಕ್ಕೆ ಸರಕಾರ ರೂ. 40 ಲಕ್ಷ ಒದಗಿಸಿರುವದಾಗಿ ಸ್ಪಷ್ಟಪಡಿಸಿದ್ದಾರೆ.

ಅಲ್ಲದೆ ಪಾಡಿಶ್ರೀ ಇಗ್ಗುತ್ತಪ್ಪ ದೇವಾಲಯದ ಜೀರ್ಣೋದ್ಧಾರಕ್ಕೆ ಸರಕಾರದಿಂದ ರೂ. 1.08 ಕೋಟಿ ಒದಗಿಸಲಾಗಿದ್ದು, ವಸತಿ ನಿರ್ಮಾಣಕ್ಕಾಗಿ ಈ ಅನುದಾನವನ್ನು ಬಿಡುಗಡೆಗೊಳಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಶ್ರೀ ಓಂಕಾರೇಶ್ವರ ಸಮೂಹ ದೇವಾಲಯಗಳಲ್ಲಿ ಒಂದಾಗಿರುವ ಶ್ರೀ ಆಂಜನೇಯ ಗುಡಿಗೆ ನಾಲ್ಕು ಕಂತುಗಳಲ್ಲಿ ತಲಾ ರೂ. 10 ಲಕ್ಷದಂತೆ ಒಟ್ಟು ರೂ. 40 ಲಕ್ಷ ಒದಗಿಸಿದ್ದು, ಉಳಿದಂತೆ ಪಾಲೂರು ಶ್ರೀ ಮಹಾಲಿಂಗೇಶ್ವರ ದೇವಾಲಯಕ್ಕೆ ರೂ. 8 ಲಕ್ಷ; ಇರ್ಪು ರಾಮೇಶ್ವರ ದೇವಾಲಯಕ್ಕೆ ರೂ. 6 ಲಕ್ಷ ಹಣ ಒದಗಿಸಲಾಗಿದೆ ಎಂದು ಅಂಕಿ ಅಂಶ ನೀಡಿದ್ದಾರೆ.

ಅಲ್ಲದೆ ಪಾಲೂರು ಶ್ರೀ ಹರಿಶ್ಚಂದ್ರ ದೇಗುಲ ಜೀರ್ಣೋದ್ಧಾರಕ್ಕೆ ರೂ. 1 ಲಕ್ಷ ನೀಡಲಾಗಿದೆ ಎಂದು ಸಚಿವರು ಲಿಖಿತವಾಗಿ ಮೇಲ್ಮನೆ ಸದಸ್ಯೆ ವೀಣಾ ಅವರ ಪ್ರಶ್ನೆಗೆ ಉತ್ತರಿಸಿದ್ದಾರೆ. ಈ ರೀತಿ ಜಿಲ್ಲೆಯ ದೇವಾಲಯಗಳ ಅಭಿವೃದ್ಧಿಗಾಗಿ ಒಟ್ಟು ರೂ. 1.63 ಕೋಟಿ ಅನುದಾನದೊಂದಿಗೆ ಭಕ್ತರಿಗೆ ಮೂಲಭೂತ ಸೌಕರ್ಯ ಹಾಗೂ ದೇವಾಲಯಗಳ ಸುರಕ್ಷತಾ ವ್ಯವಸ್ಥೆ ಕಲ್ಪಿಸಿರುವದಾಗಿ ಸಚಿವರು ತಿಳಿಸಿದ್ದಾರೆ.

ಅಲ್ಲದೆ ಶ್ರೀ ಓಂಕಾರೇಶ್ವರ ಹಾಗೂ ಶ್ರೀ ಆಂಜನೇಯ ಗುಡಿ ತಡೆಗೋಡೆಗೆ ಪ್ರತ್ಯೇಕ ರೂ. 52 ಲಕ್ಷ ಬಿಡುಗಡೆಗೊಂಡಿರುವದಾಗಿ ಮಾಹಿತಿ ನೀಡಲಾಗಿದೆ.